ನಾಗಪುರ 07: ಮಹಾರಾಷ್ಟ್ರದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿರುವುದನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನಿರಾಕರಿಸಿದ್ದಾರೆ.
ನಾಗಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಫಡಣವೀಸ್, ಮಹಾರಾಷ್ಟ್ರದಲ್ಲಿ ಮತದಾರರ ಸಂಖ್ಯೆ ಏರಿಕೆಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೆ ಚುನಾವಣಾ ಆಯೋಗವು ಈಗಾಗಲೇ ಉತ್ತರ ನೀಡಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಸೋಲು ಸನ್ನಿಹಿತವಾಗಿರುವುದರಿಂದ ಇಂತಹ ಆರೋಪ ಮಾಡಲಾಗಿದೆ ಎಂದು ತಿರುಗೇಟು ನೀಡಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆತ್ಮಶೋಧನೆ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ, ಅವರ ಪಕ್ಷವು ಪುನಶ್ಚೇತನಗೊಳ್ಳಲು ಸಾಧ್ಯವೇ ಇಲ್ಲ ಎಂದು ಕುಟುಕಿದ್ದಾರೆ.
ಶಿವಸೇನಾ (ಯುಬಿಟಿ) ಹಾಗೂ ಎನ್‌ಸಿಪಿ ನಾಯಕರೊಂದಿಗೆ ನವದೆಹಲಿಯಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್, ಹಿಮಾಚಲ ಪ್ರದೇಶದಂತಹ ರಾಜ್ಯದ ಒಟ್ಟು ಜನಸಂಖ್ಯೆಯಷ್ಟು ಹೊಸ ಮತದಾರರನ್ನು ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ನೀಡಬೇಕು ಹಾಗೂ ವಿವಾದವನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.