ಮೌಂಟ್‌ಮೌಂಗಾನುಯಿ, ಫೆ 11, ಆರಂಭಿಕ ಆಘಾತದ ನಡುವೆಯೂ ಕನ್ನಡಿಗ ಕೆ.ಎಲ್ ರಾಹುಲ್ (112 ರನ್, 113 ಎಸೆತಗಳು) ವೃತ್ತಿ ಜೀವನದ ನಾಲ್ಕನೇ ಶತಕ ಹಾಗೂ ಶ್ರೇಯಸ್ ಅಯ್ಯರ್ (62 ರನ್, 63 ಎಸೆತಗಳು) ಅವರ ಅರ್ಧಶತಕದ ಬಲದಿಂದ ಭಾರತ ತಂಡ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ.ಇಲ್ಲಿನ ಬೇ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ನಿಗದಿತ 50 ಓವರ್‌ಗಳಿಗೆ ಏಳು ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿದ್ದು, ಕಿವೀಸ್‌ಗೆ 297 ರನ್ ಗುರಿ ನೀಡಿದೆ.ಆರಂಭಿಕ ಆಘಾತ: ಕಳೆದ ಪಂದ್ಯಗಳಂತೆ ಆರಂಭಿಕರಾಗಿ ಕಣಕ್ಕೆ ಇಳಿದ ಮಯಾಂಕ್ ಅಗರ್ವಾಲ್ ಹಾಗೂ ಪೃಥ್ವಿ ಶಾ ಜೋಡಿಯು ನಿರಾಸೆ ಮೂಡಿಸಿತು. ಕನ್ನಡಿಗ ಮಯಾಂಕ್ ಕೇವಲ ಒಂದು ರನ್ ಗಳಿಸಿ ಕೈಲ್ ಜ್ಯಾಮಿಸನ್‌ಗೆ ಕ್ಲೀನ್ ಬೌಲ್ಡ್ ಆದರು. ಆಗ ತಂಡದ ಮೊತ್ತ ಕೇವಲ ಎಂಟು ರನ್ ಇತ್ತು.ಮಿಂಚಿ ಮರೆಯಾದ ಪೃಥ್ವಿ: ಕಳೆದ ಪಂದ್ಯಗಳಂತೆ ಇಂದಿನ ಪಂದ್ಯದಲ್ಲೂ ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್ ಮಾಡಿದ ಪೃಥ್ವಿ ಶಾ, ನ್ಯೂಜಿಲೆಂಡ್ ಬೌಲರ್‌ಗಳಿಗೆ ಸರಿಯಾಗಿ ದಂಡಿಸಿದರು. 42 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿಯೊಂದಿಗೆ 40 ರನ್ ಚಚ್ಚಿದರು. ಆದರೆ, ಅನಗತ್ಯವಾಗಿ ರನ್ ಕದಿಯಲು ಮುಂದಾಗಿ ರನೌಟ್ ಆದರು. ಇವರ ಹಿಂದೆಯೇ ನಾಯಕ ವಿರಾಟ್ ಕೊಹ್ಲಿ(9), ಬೆನೆಟ್‌ಗೆ ಶರಣಾದರು.
ಅಂಯ್ಯರ್-ರಾಹುಲ್ ಜುಗಲ್‌ಬಂದಿ: 62 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿದ್ದಾಗ ಜತೆಯಾದ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ ಜೋಡಿ ಅದ್ಭುತ ಜತೆಯಾಟವಾಡಿತು. ಕಿವೀಸ್ ದಾಳಿಕಾರರನ್ನು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ, ಮುರಿಯದ ನಾಲ್ಕನೇ ವಿಕೆಟ್‌ಗೆ 100 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿತು.ಶ್ರೇಯಸ್ ಅರ್ಧಶತಕ: ಪ್ರಸ್ತುತ ಸರಣಿಯ ಮೊದಲನೇ ಪಂದ್ಯದಲ್ಲಿ ಶತಕ ಸಿಡಿಸಿದ್ದ ಶ್ರೇಯಸ್ ಅಯ್ಯರ್, ಎರಡನೇ ಪಂದ್ಯದಲ್ಲಿಯೂ ಗಮನಾರ್ಹ ಪ್ರದರ್ಶನ ತೋರಿ ಅರ್ಧಶತಕ ಸಿಡಿಸಿದ್ದರು. ಇದೇ ಲಯವನ್ನು ಇಂದಿನ ಪಂದ್ಯದಲ್ಲಿಯೂ ಮುಂದುವರಿಸಿ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. 63 ಎಸೆತಗಳಲ್ಲಿ 62 ರನ್ ಗಳಿಸಿ ಔಟ್ ಆದರು.
ಕನ್ನಡಿಗರ ಸೊಬಗಿನ ಜತೆಯಾಟ: ಮಧ್ಯಮ ಕ್ರಮಾಂಕದಲ್ಲಿ ಜತೆಯಾದ ಕರ್ನಾಟಕದವರೇ ಆದ ಕೆ.ಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಜೋಡಿ, ಅತ್ಯುತ್ತಮ ಜತೆಯಾಟವಾಡುವಲ್ಲಿ ಯಶಸ್ವಿಯಾಯಿತು. ಈ ಜೋಡಿ ಮುರಿಯದ ಐದನೇ ವಿಕೆಟ್‌ಗೆ 107 ರನ್ ಗಳಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಮನೀಶ್ ಪಾಂಡೆ 48 ಎಸೆತಗಳಲ್ಲಿ 42 ರನ್ ಗಳಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚಿತ್ತರು.
ಮುಂದುವರಿದ ಕನ್ನಡಿಗನ ರನ್ ಹೊಳೆ: ಅದ್ಭುತ ಲಯದಲ್ಲಿರುವ ಕನ್ನಡಿಗ ಕೆ.ಎಲ್ ರಾಹುಲ್ ಇಂದಿನ ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ತೋರಿದರು. ಶ್ರೇಯಸ್ ಅಯ್ಯರ್ ಹಾಗೂ ಮನೀಶ್ ಪಾಂಡೆ ಜತೆ ಎರಡು ಶತಕಗಳ ಜತೆಯಾಟದಲ್ಲಿ ಭಾಗಿಯಾಗಿದ್ದ ಕೆ.ಎಲ್, ವೃತ್ತಿ ಜೀವನದ ನಾಲ್ಕನೇ ಹಾಗೂ ಐದನೇ ಕ್ರಮಾಂಕದಲ್ಲಿ ಮೊದಲನೇ ಶತಕ ಸಿಡಿಸಿ ಸಂಭ್ರಮಿಸಿದರು. 113 ಎಸೆತಗಳಲ್ಲಿ 112 ರನ್ ಗಳಿಸಿ ಬೆನೆಟ್‌ಗೆ ವಿಕೆಟ್ ಕೊಟ್ಟರು. ಇವರ ಆಕರ್ಷಕ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಗಳಿವೆ.ನ್ಯೂಜಿಲೆಂಡ್ ಪರ ಹಾಮೀಶ್ ಬೆನೆಟ್ 10 ಓವರ್‌ಗಳಿಗೆ 64 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ: 50 ಓವರ್‌ಗಳಿಗೆ 296/7 (ಕೆ.ಎಲ್ ರಾಹುಲ್ 112, ಶ್ರೇಯಸ್ ಅಯ್ಯರ್ 62, ಮನೀಶ್ ಪಾಂಡೆ 42, ಪೃಥ್ವಿ ಶಾ 40; ಹಾಮಿಶ್ ಬೆನೆಟ್ 64 ಕ್ಕೆ 4, ಕೈಲ್ ಜ್ಯಾಮಿಸನ್ 53 ಕ್ಕೆ 1,ಜೇಮ್ಸ್ ನೀಶಮ್ 50 ಕ್ಕೆ 1)