ಲೋಕದರ್ಶನ ವರದಿ
ಬೆಟಗೇರಿ 06: ಭಾರತೀಯರ ಜಾತ್ರಾ ಉತ್ಸವಗಳು ಆಯಾ ಪ್ರಾದೇಶಿಕತೆಗಳ ಸಾಂಸ್ಕೃತಿಕ ಪ್ರತೀಕಗಳಾಗಿವೆ. ಕನ್ನಡ ನಾಡಿನ ಜಾತ್ರೆಗಳಿಗೆ ಅವುಗಳದೇ ಆದ ಪ್ರಾಚೀನ ಇತಿಹಾಸ ಪರಂಪರೆಗಳಿವೆ. ಅದರಲ್ಲಿಯೂ ಉತ್ತರ ಕರ್ನಾಟಕದ ಜಾತ್ರೆಗಳಲ್ಲಿ ವೈಶಿಷ್ಟ್ಯತನವಿದೆ. ಜಾತ್ರೆಗಳ ಜಗಲಿಯೆಂದರೆ ಬೆಳಗಾವಿ ಕರದಂಟಿನಂತೆ ಜನರಲ್ಲಿ ಮಾಧುರ್ಯತನದ ನಂಟತ್ವವನ್ನು ಕಟ್ಟಿಕೊಂಡ ನೆಲ ಗೋಕಾವಿ ತಾಲೂಕಿನ ಕೌಜುಗ ನಾಡಿನ ಸುಕ್ಷೇತ್ರ ರಡ್ಡೇರಟ್ಟಿ ಕರಿಸಿದ್ದೇಶ್ವರನ ಪುಣ್ಯಸ್ಥಾನ. ಕೌಜಲಗಿ ದೇಸಗತಿಯ ಆರಾಧನೆಯ ಗುಡಿ.
ರಡ್ಡೇರಟ್ಟಿ ಗ್ರಾಮದ ಸರ್ವರ ಆರಾಧನೆಯ ಶ್ರೀ ಕರಿಸಿದ್ದೇಶ್ವರರು ಭಕ್ತರ ಕಲ್ಪವೃಕ್ಷವಾಗಿದ್ದಾರೆ. ಗ್ರಾಮಸ್ಥರಿಗೆ ಚೈತನ್ಯದ ಚಿಲುಮೆ, ಬಡವರ ಭಾಗ್ಯನಿಧಿ. ವರ್ಷಕ್ಕೊಮ್ಮೆ ಸಾರ್ವತ್ರಿಕವಾಗಿ ಮಾತನಾಡುವ ಕರಿಸಿದ್ದೇಶ್ವರರ ಅಲಗದ ಮೇಲೆ ನಿಂತು ನುಡಿ ಹೇಳುವ ದೃಶ್ಯ ಭಕ್ತರ ಮನದಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಭಕ್ತರ ಭಾವನೆಯ ಭಂಡಾರವನ್ನು ಚಿಮ್ಮಿಸುತ್ತದೆ.
ಪ್ರತಿವರ್ಷ ಈ ವಿಶಿಷ್ಟ ಬಗೆಯ ಜಾತ್ರೆ ದಸರಾ ಹಬ್ಬದಲ್ಲಿ ಜರುಗುತ್ತದೆ. ಮಹಾನವಮಿ ಅಮವಾಸ್ಯೆಯಿಂದಲೆ ಜಾತ್ರೆ ಆರಂಭವಾಗುತ್ತದೆ. ಊರಿನ ಹಲವಾರು ಭಕ್ತರು ಅಮವಾಸ್ಯೆಯಿಂದಲೇ ಕರಿಸಿದ್ದೇಶ್ವರನಿಗಾಗಿ ಉಪವಾಸ ವೃತಗಳನ್ನು ಕೈಗೊಳ್ಳುತ್ತಾರೆ. ನಿತ್ಯವು ಸಾಯಂಕಾಲ ಪ್ರವಚನ ಕಾರ್ಯಕ್ರಮ ಏರ್ಪಡುತ್ತದೆ. ನುಡಿ ಹೇಳುವ ನುಡಿಕಾರನನ್ನು ಪ್ರತಿ 3 ವರ್ಷಕ್ಕೊಮ್ಮೆ ಬದಲಾಯಿಸುವ ವಿಶಿಷ್ಟ ಪರಂಪರೆ ರಡ್ಡೇರಟ್ಟಿ ಗ್ರಾಮದಲ್ಲಿ ಕಂಡುಬರುತ್ತದೆ.
ಕೌಜಲಗಿ ದೇಸಗತಿಯ ಸರ್ದಾರ್ ಬಿ.ಜಿ.ದೇಸಾಯಿ ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಿಸಿದನೆನ್ನಲಾದ ಕರಿಸಿದ್ದೇಶ್ವರ ದೇವಸ್ಥಾನ ನೂರಾರು ವರ್ಷಗಳ ಪ್ರಾಚೀನತೆಯನ್ನು ಪಡೆದುಕೊಂಡಿದೆ. ಕೌಜಲಗಿ ದೇಸಾಯಿ ಕರಿಸಿದ್ಧೇಶ್ವರ ಪರಮಭಕ್ತರಾಗಿದ್ದರೆಂದು ಊರ ಹಿರಿಯರು ಹೇಳುತ್ತಾರೆ. ನುಡಿ ಹೇಳುವ ನುಡಿಕಾರ ನಿಲ್ಲುವ ಅಲಗ (ಖಡ್ಗ) ಅದು ಕೌಜಲಗಿ ದೇಸಾಯಿಯ ಕೊಡುಗೆಯಾಗಿದೆ. ಅದರ ಜವಾಬ್ದಾರಿಯನ್ನು ಕೌಜಲಗಿ ದೇಸಗತಿಯ ಸೇನಾದಳಪತಿ ದಳವಾಯಿ ಕುಟುಂಬಕ್ಕೆ ನೀಡಲಾಗಿತ್ತೆಂಬುದನ್ನು ಊರ ಹಿರಿಕರು ಮಾತನಾಡುತ್ತಾರೆ. ಅಲಗ ಮೇಲೆ ನಿಂತ ನುಡಿಕಾರ ಮಳೆ-ಬೆಳೆ ಹಾಗೂ ದೇಶ-ರಾಜ್ಯ-ದೇಸಗತಿಯ ಭವಿಷ್ಯವನ್ನು ನುಡಿಯುತ್ತಾನೆ.
ಅಲಗದ ಮೇಲೆ ನಿಂತು ನುಡಿ ಹೇಳುವ ನುಡಿಕಾರನ ಪಾದಗಳು ಸ್ವಲ್ಪವೂ ರಕ್ತಮಯವಾಗಿರುವುದಿಲ್ಲ. ಕಾರಣ ಅಲಗದ ಮೇಲೆ ವೀಳ್ಯದೆಲೆ ಹರಡಿಸಿದ್ದು, ಎಲೆಯ ಮೇಲೆ ನುಡಿಕಾರ ಜೇಂಕರಿಸಿ, ಗರ್ಜಿಸಿ, ದೀಪಗಳನ್ನು ಆಸ್ವಾದಿಸಿ ಭವಿಷ್ಯ ನುಡಿದು ಕೆಳಗಿಳಿಯುತ್ತಾನೆ. ಇಷ್ಟಾದರೂ ಅಲಗ ಮೇಲಿರುವ ವೀಳ್ಯದೆಲೆ ಸ್ವಲ್ಪವೂ ಕತ್ತರಿಸದೆ ಇರುವುದು ಕರಿಸಿದ್ದೇಶ್ವರನ ಪವಾಡವೆಂಬುದು ಇಂದಿಗೂ ಭಕ್ತರ ಭಾವನೆ-ನಂಬಿಕೆಗಳಾಗಿವೆ.
ಜಾತ್ರಾ ಮಹೋತ್ಸವ ಕಾರ್ಯಕ್ರಮ: ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಸೆ.28 ರಿಂದ ಅ.7 ರವರೆಗೆ ಕರಿಸಿದ್ದೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ. ಶನಿವಾರ ಸೆ.28 ರಂದು ಘಟಸ್ಥಾಪನೆ ಕಾರ್ಯ ನೆರವೇರಿದ್ದು, ರವಿವಾರ ಅ.6 ರಂದು ಕರಿಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಭಕ್ತರಿಂದ ಡೊಳ್ಳು ನುಡಿಸುವುದು. ಅಂದು ಸಾಯಂಕಾಲ 5:30ಕ್ಕೆ ದೇವಸ್ಥಾನದ ಆವರಣದಲ್ಲಿ ಅಲಗ(ಖಡ್ಗ)ದ ಮೇಲೆ ನಿಂತು ನುಡಿ ಹೇಳುವುದು, ಅನಂತರ ರಾತ್ರಿ ಭಕ್ತರಿಗೆ ಮಹಾಪ್ರಸಾದ ಜರುಗುವುದು. ಅದೇ ದಿನ ರಾತ್ರಿ 9:00 ಕ್ಕೆ ವಾಲಗ ಮೇಳವರಿಂದ ಡೊಳ್ಳಿನ ಪದಗಳ ಕಾರ್ಯಕ್ರಮ ನೆರವೇರುತ್ತದೆ.
ಸೋಮವಾರ ಅ.7 ರಂದು ಮುಂಜಾನೆ 5 ಗಂಟೆಗೆ ವಾಲಗ ನುಡಿಸುವುದು, 8 ಗಂಟೆಗೆ ಊರಿನ ದೇವರುಗಳಿಗೆ ಬನ್ನಿ ಮುಡಿಯುವುದು, ಮಧ್ಯಾಹ್ನ ಮಹಾಪ್ರಸಾದ, ಸಾಯಂಕಾಲ 6 ಗಂಟೆಗೆ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ. ಸಾನಿಧ್ಯವನ್ನು ಕಕಮರಿ ರಾಯಲಿಂಗೇಶ್ವರ ಸಂಸ್ಥಾನ ಮಠದ ಅಭಿನವ ಗುರುಲಿಂಗ ಜಂಗಮ ಮಹಾಸ್ವಾಮಿಗಳು ವಹಿಸಲಿದ್ದು, ಭಕ್ತರಿಗೆ ಸತ್ಕಾರ ಹಾಗೂ ಆಶೀರ್ವಚನ ನೀಡಲಿದ್ದಾರೆ. ರಾತ್ರಿ 8 ಗಂಟೆಗೆ ಗ್ರಾಮದ ಓಂಕಾರ ಮೇಲೋಡಿಸ್ ತಂಡದಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದ್ದು, ಒಂಬತ್ತು ದಿನಗಳಕಾಲ ನಡೆಯುವ ಜಾತ್ರಾ ಮಹೋತ್ಸವ ಸಂಭ್ರಮಕ್ಕೆ ತೆರೆ ಬೀಳುತ್ತದೆ.