ಕಾನ್ಪುರ, ಫೆ.18, ಸೋಮವಾರ ತಡರಾತ್ರಿ ಲಖನೌ-ಆಗ್ರಾ ಹೆದ್ದಾರಿಯಲ್ಲಿ ಬಿಹಾರ್ ಸರ್ಕಾರಿ ಬಸ್ ಎಸ್ಯುವಿ ವ್ಯಾನ್ ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದು, ಬಸ್ ನಲ್ಲಿದ್ದ 15 ಮಂದಿ ಗಾಯಗೊಂಡಿದ್ದಾರೆ. ಬಿಲ್ಹೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಲಕ್ನೋದಿಂದ ಆಗ್ರಾಕ್ಕೆ ಹೋಗುತ್ತಿದ್ದ ಎಸ್ಯುವಿ ವ್ಯಾನ್ ಗೆ ಬಿಹಾರಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ವ್ಯಾನ್ ನಲ್ಲಿದ್ದ ಎಲ್ಲಾ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ನ ಚಾಲಕ ಕೂಡ ಸಾವನ್ನಪ್ಪಿದ್ದು, ಬಸ್ ನಲ್ಲಿದ್ದ 15 ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಚಾಲಕ ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವ್ಯಾನ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಗಾಜಿಯಾಬಾದ್ನಿಂದ ತೆರಳುತ್ತಿದ್ದ ಬಸ್ ನಲ್ಲಿ ಸುಮಾರು 40 ಮಂದಿ ಪ್ರಯಾಣಿಸುತ್ತಿದ್ದರು. ಮೃತಪಟ್ಟವರನ್ನು ಸುನ್ನಿ (35), ಮುಖೇಶ್ (40), ರಾಮ್ ಶಂಕರ್ (45), ಸುರ್ಜೀತ್ (33) ಎಂದು ಗುರುತಿಸಲಾಗಿದ್ದು, ಇನ್ನೊಬ್ಬನನ್ನು ಇನ್ನೂ ಗುರುತಿಸಲಾಗಿಲ್ಲ. ದೆಹಲಿಯ ಸುನೀತಾ ಸಿಂಗ್ ಹೆಸರಿನ ಒಬ್ಬರು ವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಮೃತಪಟ್ಟ ಬಸ್ನ ಚಾಲಕನ ಗುರುತನ್ನು ಸಹ ಇನ್ನೂ ಪತ್ತೆ ಮಾಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ರಾತ್ರಿ ಸಹ ವ್ಯಾನ್ ಒಂದು ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸೇವ್ ಹೆದ್ದಾರಿಯಲ್ಲಿ ಏಳು ಜನರು ಸಜೀವ ದಹನವಾಗಿದ್ದರು.