ಪುಲ್ವಾಮಾ ಪ್ರಕರಣ: ಕಾಶ್ಮೀರದಲ್ಲಿ ಎನ್‌ಐಎ ದಾಳಿ ಮುಂದುವರಿಕೆ

 ಶ್ರೀನಗರ, ಫೆ 29 : ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹುತಾತ್ಮರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಪುಲ್ವಾಮಾದಲ್ಲಿ ಉಗ್ರರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ದಾಳಿ ಮುಂದುವರಿಸಿದೆ. 

ಪುಲ್ವಾಮಾ ಜಿಲ್ಲೆಯ ಬಕ್ರಿಪೊರಾ ಮತ್ತು ಹಾಜಿಬಲ್ ನಲ್ಲಿ ಉಗ್ರರ ಮನೆಗಳ ಮೇಲೆ ಎನ್ಐಎ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.  

ಜೈಷ್-ಎ-ಮೊಹಮ್ಮದ್ (ಜೆಎಂ) ಸಂಘಟನೆಯ ಸ್ಥಳೀಯ ಕಾರ್ಯಕರ್ತ ಶಕೀರ್ ಬಶೀರ್ ಮಾಗ್ರೆ ನನ್ನು  ಎನ್ಐಎ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.  

ಕಳೆದ ವರ್ಷ ಫೆಬ್ರವರಿ 14 ರಂದು ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಂತಿಪೋರಾದಲ್ಲಿ ಸಿಆರ್ ಪಿಎಫ್ ಬೆಂಗಾವಲು ಬಸ್‌ ಮೇಲೆ ಆರ್‌ಡಿಎಕ್ಸ್ ಸ್ಫೋಟಕ ತುಂಬಿದ ವಾಹನವನ್ನು ನುಗ್ಗಿಸಿದ್ದ ಆದಿಲ್ ಅಹ್ಮದ್ ದಾರ್‌ಗೆ ಮಾಗ್ರೆ ಸಹಾಯ ಮಾಡಿದ್ದಾನೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.  

ಪುಲ್ವಾಮಾದ ಜೈಷ್ ಎ ಮೊಹಮದ್ ಉಗ್ರರಿಗೆ ಆಶ್ರಯ ಮತ್ತು ಇತರ ಸಹಾಯವನ್ನು ಹಾಜಿಬಲ್ ಕಾಕ್ಪೊರಾ ನಿವಾಸಿ ಶಕೀರ್ ನೀಡಿದ್ದ.  

ಸಿಆರ್‌ಪಿಎಫ್ ವಾಹನದ ಮೇಲೆ ಆತ್ಮಾಹುತಿ ದಾಳಿಯಲ್ಲಿ ಭಾಗಿಯಾಗಿರುವ ಎಲ್ಲ ಉಗ್ರರು ದಾಳಿಯ ನಂತರ ವಿವಿಧ ಎನ್‌ಕೌಂಟರ್‌ಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮತ್ತು ಭದ್ರತಾ ಪಡೆಗಳು ಹೇಳಿವೆ. 

ಈ ಪ್ರಕರಣವನ್ನು ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ ನಂತರ ದಕ್ಷಿಣ ಕಾಶ್ಮೀರದಲ್ಲಿ ಎನ್‌ಐಎ ಹಲವು ದಾಳಿಗಳನ್ನು ನಡೆಸಿ ಅನೇಕ ಉಗ್ರರನ್ನು ಬಂಧಿಸಿದೆ.