ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಒದಗಿಸುವುದು ಅಧಿಕಾರಿಗಳ ಕಡ್ಡಾಯ ಜವಾಬ್ದಾರಿ: ಡಾ.ಹರೀಶ್ ಕುಮಾರ್
Providing information under the Right to Information Act is a mandatory responsibility of officials:
ಲೋಕದರ್ಶನ ವರದಿ
ಕಾರವಾರ 4 :- ಮಾಹಿತಿ ಹಕ್ಕು ಕಾಯಿದೆ 2005 ರಡಿ ಮಾಹಿತಿ ಕೋರಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ನಿಗಧಿತ ಅವಧಿಯೊಳಗೆ ಅಗತ್ಯ ಮಾಹಿತಿ ಒದಗಿಸುವುದು ಎಲ್ಲಾ ಇಲಾಖೆಗಳ ಮಾಹಿತಿ ಅಧಿಕಾರಿಗಳ ಕಡ್ಡಾಯ ಜವಾಬ್ದಾರಿಯಾಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದರು. ಅವರು ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಕಾರ್ಯಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಹಿತಿ ಹಕ್ಕು ಕಾಯಿದೆಯು ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಕಾನೂನಾತ್ಮಕವಾಗಿ ಸಾರ್ವಜನಿಕ ಕೆಲಸಗಳನ್ನು ಮಾಡಲು ಸಹಕಾರಿಯಾಗಿದ್ದು, ಇದು ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಣೆ ಮಾಡುವ ಕಾಯಿದೆಯಾಗಿ ಬದಲಾಗಿದೆ ಹಾಗೂ ಈ ಕಾಯಿದೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ತಪ್ಪುಗಳನ್ನು ಮಾಡದಂತೆ ಕೆಲಸ ನಿರ್ವಹಿಸಲು ಸಹಕಾರಿಯಾಗಿದೆ ಎಂದರು.
ಕಾಯಿದೆಯ ಕುರಿತಂತೆ ಅಗಿಂದಾಗ್ಗೆ ಸರ್ವೋಚ್ಛ ನ್ಯಾಯಾಲಯ, ರಾಜ್ಯ ಹೈಕೋರ್ಟ್‌ಗಳು ನೀಡುವ ತೀರ್ುಗಳ ಕುರಿತಂತೆ ಮಾಹಿತಿ ಅಧಿಕಾರಿಗಳು ಅರಿವು ಹೊಂದಿರಬೇಕು, ಕಾಯಿದೆಯಲ್ಲಿನ ಎಲ್ಲಾ ಅಂಶಗಳ ಬಗ್ಗೆ ಸಮಗ್ರವಾಗಿ ಅರಿತುಕೊಂಡು ಸಾರ್ವಜನಿಕರಿಗೆ ಮಾಹಿತಿಗಳನ್ನು ಒದಗಿಸಬೇಕು. ಪ್ರಥಮ ಮೇಲ್ಮನವಿ ಮತ್ತು ಎರಡನೇ ಮೆಲ್ಮನವಿಗಳ ಸಲ್ಲಿಕೆಗೆ ಅವಕಾಶ ನೀಡದೇ ಅರ್ಜಿಗಳನ್ನು ವಿಲೇಗೊಳಿಸಬೇಕು. ನಿಗಧಿತ ಅವಧಿಯೊಳಗೆ ಮಾಹಿತಿ ಒದಗಿಸದ ಅಧಿಕಾರಿಗಳಿಗೆ ರೂ.25000 ಗಳವರೆಗೆ ದಂಡ ಮತ್ತು ಕರ್ತವ್ಯ ಲೋಪದ ಶಿಸ್ತು ದಂಡ ವಿಧಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸೂಚಿಸುವ ಅಧಿಕಾರ ಆಯೋಗಕ್ಕಿದೆ ಎಂದರು.
ಸಾರ್ವಜನಿಕರಿಗೆ ಶೀಘ್ರದಲ್ಲಿ ಮತ್ತು ಸಮರ್ಕವಾದ ಮಾಹಿತಿ ನೀಡಲು ಅನುಕೂಲವಾಗುವಂತೆ ಕಚೇರಿಗಳಲ್ಲಿ ಕಡತಗಳನ್ನು ವರ್ಗಿಕರಣ ಮಾಡಿಟ್ಟುಕೊಳ್ಳಬೇಕು, ಕಡತಗಳನ್ನು ನಿಯಮಾನುಸಾರ ನಾಶಪಡಿಸಿದ್ದರೆ ಈ ಬಗ್ಗೆ ದಾಖಲೆ ಇರಬೇಕು, ಕಡತಗಳು ಕಣ್ಮರೆಯಾಗಿದ್ದಲ್ಲಿ ಈ ಬಗ್ಗೆ ಎಫ್.ಐ.ಆರ್ ದಾಖಲಿಸಬೇಕು ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧವೇ ಶಿಕ್ಷೆ ವಿಧಿಸಬಹುದಾಗಿದೆ ಎಂದು ತಿಳಿಸಿದರು.
ಮಾಹಿತಿ ಹಕ್ಕು ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾದ ಕಾರ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದ ಅವರು ಕಾಯಿದೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ಸಮರ್ಕವಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದ ಅವರು ಜಿಲ್ಲೆಯ ಎಲ್ಲಾ ಕಚೇರಿಗಳಲ್ಲಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಮತ್ತು ಮೇಲ್ಮನವಿ ಅಧಿಕಾರಿಗಳ ವಿವರಗಳನ್ನು ಹಾಗೂ ಸೆಕ್ಷನ್ 4 (1)ಎ ಮತ್ತು 4 (1)ಬಿ ಮಾಹಿತಿಯನ್ನು ಅಳಡಿಸುವಂತೆ ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿದರು.
ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಮಾತನಾಡಿ, ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿದಾರರು ಕೋರುವ ಮಾಹಿತಿಯನ್ನು ವಿವರವಾಗಿ ಪರೀಶೀಲಿಸಿ ಅಗತ್ಯ ಮಾಹಿತಿಯನ್ನು, ನಿಗಧಿತ ಶುಲ್ಕ ಪಡೆದು ನೀಡಬೇಕು. ಈ ಕಾಯಿದೆಯ ದುರ್ಬಳಕೆ ಕುರಿತು ಕೂಡಾ ಆಯೋಗಕ್ಕೆ ದೂರುಗಳು ಬಂದಿದ್ದು, ಆಯೋಗವು ಇದುವರೆಗೆ 26 ಜನರನ್ನು ಕಪ್ಪುಪಟ್ಟಿಗೆ ಸೇರೆ್ಡ ಮಾಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಆಯೋಗದಲ್ಲಿ 55,400 ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಬಾಕಿ ಇದ್ದು, ಅವುಗಳಲ್ಲಿ 26,670 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಪ್ರಸ್ತುತ 28,730 ಬಾಕಿ ಇವೆ. ಉತ್ತರ ಕನ್ನಡ ಜಿಲ್ಲೆಗೆ ಸಂಬಂದಿಸಿದಂತೆ 524 ಅರ್ಜಿಗಳು ಬಾಕಿ ಇದ್ದು ಜಿಲ್ಲೆಯು ರಾಜ್ಯದಲ್ಲಿ 17 ನೇ ಸ್ಥಾನದಲ್ಲಿದ್ದು, ಜಿಲ್ಲೆಯ ಅರ್ಜಿಗಳಲ್ಲಿ 164 ಅರ್ಜಿಗಳು ಆರ್.ಡಿ.ಪಿ.ಆರ್ ಮತ್ತು 110 ಅರ್ಜಿಗಳು ಕಂದಾಯ ಇಲಾಖೆಗೆ ಸೇರಿದ್ದು, ಉಳಿದದ್ದು ಇತರೆ ಇಲಾಖೆಗಳಿಗೆ ಸಂಬಂದಪಟ್ಟದ್ದಾಗಿದೆ ಎಂದರು.
ಮೇಲ್ಮನವಿ ಅರ್ಜಿಗಳನ್ನು ಪ್ರಥಮ ಮೇಲ್ಮನವಿ ಅಧಿಕಾರಿಗಳ ಹಂತದಲ್ಲೇ ವಿಲೇ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಎಲ್ಲಾ ಇಲಾಖಾಧಿಕಾರಿಗಳು ತಮ್ಮ ಹಂತದಲ್ಲಿ ಪರೀಶೀಲನಾ ಸಭೆಯನ್ನು ನಡೆಸುವಂತೆ ಮತ್ತು ತ್ರೈಮಾಸಿಕ ಕಡಿಪಿ ಸಭೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿಯನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡು ಪ್ರಗತಿ ಪರೀಶೀಲನೆ ನಡೆಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಜಿಲ್ಲೆಯಲ್ಲಿ ಕಂದಾಯ, ಅರಣ್ಯ, ಪೊಲೀಸ್, ಗ್ರಾಮೀಣಭಿವೃದ್ಧಿ ಇಲಾಖೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ಹಕ್ಕು ಕಾಯಿದೆ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಕಾಯಿದೆಯು ಸಾರ್ವಜನಿಕರಿಗೆ ಆಡಳಿತ ವ್ಯವಸ್ಥೆ ಮೇಲೆ ನಂಬಿಕೆ ಮೂಡಿಸುವ ಮತ್ತು ಪ್ರಜಾಪ್ರಭುತ್ವದ ಬಲಪಡಿಸಲು ಸಹಾಯವಾಗಲಿದ್ದು, ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅತ್ಯಂತ ಶೀಘ್ರದಲ್ಲಿ ಮಾಹಿತಿ ಒದಗಿಸಲು ಸಾಧ್ಯವಾಗಲಿದ್ದು, ಪಾರದರ್ಶಕತೆ ತರಲು ಸಾಧ್ಯವಾಗಲಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಾಯಿದೆಯ ಕುರಿತಂತೆ ಸಂಪೂರ್ಣ ಅರಿವು ಹೊಂದಿರಬೇಕು ಎಂದರು. ಮಾಹಿತಿ ಆಯುಕ್ತ ನಾರಾಯಣ ಚನ್ನಾಳ, ಜಿ.ಪಂ. ಸಿಇಓ ಡಾ.ದೀಲೀಷ್ ಶಶಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಇದ್ದರು. ನಂತರ ಸಾರ್ವಜನಿಕರು ಹಾಗೂ ಮಾಧ್ಯಮದವರೊಂದಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಸಂವಾದ ಚರ್ಚೆ ನಡೆಯಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 