ಇಸ್ಲಾಮಾಬಾದ್, ನ 5: ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ(ಆಜಾದಿ ಮಾರ್ಚ) ಕುರಿತಂತೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರದ ಸಂಧಾನ ತಂಡದ ಸಭೆ ಮಂಗಳವಾರ ನಡೆಯಿತು. ಸಭೆಯಲ್ಲಿ ರಕ್ಷಣಾ ಸಚಿವ ಪರ್ವೆಜ್ ಖಟ್ಟಕ್, ಮಾಜಿ ಹಣಕಾಸು ಸಚಿವ ಅಸಾದ್ ಉಮರ್ ಮತ್ತು ಶಿಕ್ಷಣ ಸಚಿವ ಶಫ್ಕತ್ ಮೆಹಮೂದ್ ಭಾಗವಹಿಸಿದ್ದರು ಎಂದು ಜಿಯೋ ನ್ಯೂಸ್ ಮಂಗಳವಾರ ವರದಿ ಮಾಡಿದೆ. ಪ್ರತಿಪಕ್ಷದ ರೆಹಬಾರ್ ತಂಡದೊಂದಿಗೆ ತಾನು ನಡೆಸಿದ ಮಾತುಕತೆಗಳ ಬಗ್ಗೆ ಸರ್ಕಾರದ ಸಂಧಾನ ತಂಡ ಸಭೆಯಲ್ಲಿ ಪ್ರಧಾನಿಗೆ ತಿಳಿಸಿದೆ. ಈ ಸಭೆಯಲ್ಲಿ ಪಂಜಾಬ್ ಪ್ರಾಂತ್ಯದ ವಿಧಾನಸಭಾ ಸ್ಪೀಕರ್ ಚೌಧರಿ ಪರ್ವೆಜ್ ಎಲಾಹಿ ಸಹ ಭಾಗವಹಿಸಿದ್ದು, ಜೆಯುಐ-ಎಫ್ ಮುಖ್ಯಸ್ಥ ಮೌಲಾನಾ ಫಜ್ಲೂರ್ ರೆಹಮಾನ್ ಅವರೊಂದಿಗೆ ತಾವು ನಡೆಸಿದ ಮಾತುಕತೆ ಕುರಿತು ಅವರು ಸಭೆಯಲ್ಲಿ ಪ್ರಧಾನಿಗೆ ವಿವರಿಸಿದ್ದಾರೆ. ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಖಟ್ಟಕ್, ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ಪ್ರತಿಪಕ್ಷಗಳು ಬದ್ಧವಾಗಿವೆ ಎಂದು ಹೇಳಿದರು. ಪ್ರತಿಪಕ್ಷಗಳು ಬೇಡಿಕೆಗಳನ್ನು ಸರ್ಕಾರಕ್ಕೆ ಮಂಡಿಸಿದ್ದು, ಈ ಕುರಿತಂತೆ ಸಭೆಯಲ್ಲಿ ವಿವರವಾದ ಚರ್ಚೆಗಳು ನಡೆದವು ಎಂದು ದುರಾನಿ ಹೇಳಿದ್ದಾರೆ. ಖಟ್ಟಕ್ ನೇತೃತ್ವದ ಸರ್ಕಾರದ ಸಂಧಾನ ತಂಡ ಮಂಗಳವಾರ ಇಸ್ಲಾಮಾಬಾದ್ನಲ್ಲಿ ಜಮೀಯತ್ ಉಲೆಮಾ-ಎ-ಇಸಾಮ್ ಫಜಲ್ (ಜಿಯುಐ-ಎಫ್), ಅಕ್ರಮ್ ಖಾನ್ ದುರಾನಿ ನೇತೃತ್ವದ ರಹಬಾರ್ ತಂಡದ ಮುಖ್ಯಸ್ಥರನ್ನು ಭೇಟಿ ಮಾಡಿ, ಆಜಾದಿ ಮೆರವಣಿಗೆಗೆ ಸಂಬಂಧಿಸಿದಂತೆ ಮಾತುಕತೆ ಪುನರಾರಂಭಿಸಲಿದೆ. ಅಕ್ಟೋಬರ್ 27 ರಂದು ಸಿಂಧ್ನಿಂದ ಪ್ರಾರಂಭವಾದ 'ಆಜಾದಿ ಮಾರ್ಚ' ಅಕ್ಟೋಬರ್ 31 ರಂದು ಇಸ್ಲಾಮಾಬಾದ್ನಲ್ಲಿ ಮುಕ್ತಾಯಗೊಂಡಿತ್ತು. ಸರ್ಕಾರದ ಸಂಧಾನ ತಂಡ ಮಾತುಕತೆ ನಡೆಸಿದ ನಂತರ ಪ್ರತಿಪಕ್ಷಗಳ ರಹಬಾರ್ ತಂಡ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಜೆಯುಐ-ಎಫ್ ಮುಖ್ಯಸ್ಥ ಹೇಳಿದ ನಂತರ ರಾಜೀನಾಮೆ ನೀಡಲು ಪ್ರಧಾನಮಂತ್ರಿಗೆ ನೀಡಲಾಗಿದ್ದ 48 ಗಂಟೆಗಳ ಗಡುವು ವಿಸ್ತರಿಸಲಾಗಿತ್ತು.