ಮಹ್ಮದ್ ನಮ್ಮ ನಗರ ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ

ಮಹ್ಮದ್ ನಮ್ಮ ನಗರ ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ Protest led by AIDSO: We will not let our city government school be closed

ಕೊಪ್ಪಳ  21: ತಾಲೂಕಿನ ಮಹ್ಮದ್ ನಗರ ಸರ್ಕಾರಿ ಶಾಲೆ ರಕ್ಷಿಸಲು ಆಗ್ರಹಿಸಿ ಹಾಗೂ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಪೋಷಕರು ಪ್ರತಿಭಟನೆ ನಡೆಸಿದರು. ಗ್ರಾಮದ ಬಸ್ ನಿಲ್ದಾಣ ವೃತ್ತದ ಬಳಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.ಈ ವೇಳೆ ಮಾತನಾಡಿದ ಮಹಮ್ಮದ್ ನಗರ ಹಿರಿಯ ಮುಖಂಡರು ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಕಾರ್ಯದರ್ಶಿಗಳಾದ ಹನುಮಂತ್ ರೆಡ್ಡಿ ಅವರು ಮಾತನಾಡಿ ನಮ್ಮ ಊರಿನಲ್ಲಿ ಇರುವುದು ಎಲ್ಲಾ ದುಡಿದು ಬದುಕುವ ಯಾವುದೇ ಕಿಂತಿಷ್ಟು ಆಸ್ತಿ ಇಲ್ಲದಿರುವ ಬಡವರು.

ನಮ್ಮ ಮಕ್ಕಳು ಶಾಲೆ ಕಲಿಸುವುದೇ ಕಷ್ಟ, ಹಿಂಗಿರುವಾಗ ನಮ್ಮೂರಿನ ಈ ಒಂದು ಸರ್ಕಾರಿ ಶಾಲೆ ಮುಚ್ಚಿದರೆ, ನಮ್ಮ ಮಕ್ಕಳು ಕಲಿಯೋಕೆ ಆಗೋದಿಲ್ಲ ಈ ಶಾಲೆಯನ್ನು ಮುಚ್ಚಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ 5 ವರ್ಷದ ಮಕ್ಕಳು 6-7 ಕಿಲೋ ಮೀಟರ್ ದೂರ ಹೇಗೆ ಹೋಗಬೇಕು? ಬಡವರ ಮಕ್ಕಳು 100ಕ್ಕೂ ಹೆಚ್ಚು ಅಧಿಕ ಸಂಖ್ಯೆಯಲ್ಲಿ ದಾಖಲಾತಿ ಇರುವ ನಮ್ಮೂರಿನ ಸರ್ಕಾರಿ ಶಾಲೆ ಮುಚ್ಚಬಾರದು ಒಂದು ವೇಳೆ ಮುಚ್ಚಿದ್ದರೆ ಬೃಹತ ಹೋರಾಟ ನಡೆಸಬೇಕಾಗುತ್ತದೆ ಎಂದು ಸರ್ಕಾರವನ್ನು ಖಂಡಿಸಿದರು.ಊರಿನ ಮಹಿಳೆಯರು ಮಾತನಾಡಿ ನಮ್ಮ ಊರು ಗುಡ್ಡ ಮತ್ತೆ ಕಾಡುಗಳಿಂದ ಕೂಡಿದೆ, ಬೇರೆಕಡೆ ನಮ್ಮ ಮಕ್ಕಳನ್ನು ಕಳುಹಿಸಿ ನಾವು ಓದಿಸೋಕೆ ಆಗಲ್ಲ ಹಾಗಾಗಿ ನಮ್ಮೂರ ಶಾಲೆ ಮುಚ್ಚೋಕೆ ನಾವು ಬಿಡುವುದಿಲ್ಲ, ಹೋರಾಡುತ್ತೇವೆ ಎಂದರು.ಹಾಗೇ ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ತುಳಜರಾಮ್ ಎನ್‌. ಕೆ ಮಾತನಾಡಿ ಯಲ್ಲಿ ದೇಶದ ಮಹಾನ್ ಮಾನವತಾವಾದಿ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಅವರು ಇಡೀ ಜೀವನವನ್ನು ಶಿಕ್ಷಣಕ್ಕಾಗಿ ದುಡಿದು,

ಶೋಷಿತರಿಗೆ,ದಲಿತರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅಕ್ಷರ ಕ್ರಾಂತಿಯ ಹರಿಕಾರರಾದರು. ಭಗತ್ ಸಿಂಗ್, ನೇತಾಜಿ ಅವರು ಸ್ವಾತಂತ್ರ್ಯ ನಂತರ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಸಾರಿದರು. ಅಧಿಕಾರದ ಚುಕ್ಕಾಣಿ ಹಿಡಿದ ಎಲ್ಲಾ ಸರ್ಕಾರಗಳು ಬಡ ಮಕ್ಕಳಿಂದ ಶಿಕ್ಷಣವನ್ನು ಕಿತ್ತುಕೊಂಡು, ಸಮಾಜವನ್ನು ಇನ್ನಷ್ಟು ಕತ್ತಲೆ ಕೋಣೆಯಲ್ಲಿ ಹಾಕುತ್ತಿದ್ದಾರೆ ಎಂದು ಆರೋಪಿಸಿರದರು.ಪ್ರತಿಭಟನೆಯಲ್ಲಿ ಎಐಡಿಎಸ್‌ಓ ರಾಜ್ಯ ಸಮಿತಿ ಸದಸ್ಯರಾದ ಸಿಂಧು ಕೌದಿ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷರಾದ ವೆಂಕಟ ರತ್ನಮ್,ಉಪಾಧ್ಯಕ್ಷರಾದ ಶಿವಕುಮಾರ್, ಸದಸ್ಯರಾದ ರಘು ನಾಯ್ಕ, ಶರಣಪ್ಪ, ಹಾಲಪ್ಪ, ಅಂಬರೇಶ್, ಮೇಘ ನಾಯ್ಕ, ಬಂದೇ ನವಾಜ್, ತಿಪ್ಪರೆಡ್ಡಿ,ಜಗ್ಯ ನಾಯಕ್, ರಾಜನಂದ ನಾಯ್ಕ ಸೇರಿದಂತೆ ಊರಿನ ಮಹಿಳೆಯರು ಭಾಗವಹಿಸಿದ್ದರು.