ಮಹಾ ಸಿಎಂ ಉದ್ಧಟತನದ ಹೇಳಿಕೆ: ಠಾಕ್ರೆ ಪ್ರತಿಕೃತಿ ದಹಿಸಿ ಎಚ್ಚರಿಕೆ ನೀಡಿದ ಕರವೇ

ಕರವೇ ಪ್ರತಿಭಟನೆ

ಮಹಾ ಸಿಎಂ ಉದ್ಧಟತನದ ಹೇಳಿಕೆ: ಠಾಕ್ರೆ ಪ್ರತಿಕೃತಿ ದಹಿಸಿ ಎಚ್ಚರಿಕೆ ನೀಡಿದ ಕರವೇ


ಕಾರವಾರ.ಜ.19 : ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದಿಂದ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.  ಎಂ ಇ ಎಸ್ ಹುತಾತ್ಮರ ದಿನದಂದು ಜ .17ರಂದು ಕರ್ನಾಟಕ ಆಕ್ರಮಿತ ಕೆಲ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಅಲ್ಲಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಟ್ವೀಟ್ ಮಾಡಿದ್ದರು‌. 

ಇದನ್ನು ತೀವ್ರವಾಗಿ ಖಂಡಿಸಿರುವ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದ ತಂಡ, ನಗರದ ಸುಭಾಷ್ ವೃತ್ತದಲ್ಲಿ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ಮೆರವಣಿಗೆ ನಡೆಸಿದರು. ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು, ಕಾಲಿನಿಂದ ಒದ್ದು, ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಪ್ರತಿಕೃತಿಗೆ ಬೆಂಕಿ ಹಚ್ಚಿ ಸುಡಲಾಯಿತು.

ಈ ವೇಳೆ ಮಾತನಾಡಿದ ಭಾಸ್ಕರ ಪಟಗಾರ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉದ್ಧಟತನದ ಹೇಳಿಕೆಯನ್ನು ಆಗಾಗ ನೀಡುತ್ತಾರೆ. ಇದು ಅವರಿಗೆ ತೆವಲು. ತೆವಲು ತೀರಿಸಿಕೊಳ್ಳಲು ಅವರು ಈ ರೀತಿ ಹೇಳಿಕೆ ನೀಡುತ್ತಿರುತ್ತಾರೆ‌. ಉತ್ತರ ಕನ್ನಡ ಜಿಲ್ಲೆಯಲ್ಲೂ ಮರಾಠಿಗರಿದ್ದಾರೆ. ನಾವು ಅವರೊಂದಿಗೆ ಅನ್ಯೋನ್ಯತೆಯಿಂದ ಇದ್ದೇವೆ. ಠಾಕ್ರೆ ಎಂಇಎಸ್ ನಂಥ ಸಂಘಟನೆಗಳ ಪುಂಡರಿಗೆ ಪುಷ್ಠಿ ನೀಡುವ ಕಾರ್ಯ ಮಾಡುತ್ತಿದ್ದಾರೆ. ಗಡಿ ಭಾಗದ ಈ ಸಮಸ್ಯೆ ನ್ಯಾಯಾಲಯದಲ್ಲಿದೆ. ಈ ಸಂದರ್ಭದಲ್ಲಿ ಉದ್ಧಟತನದ ಹೇಳಿಕೆ ನೀಡುವ ನಿಮಗೆ ಪರಿಜ್ಞಾನ ಇಲ್ಲವಾ? ಇಂಥ ಹೇಳಿಕೆಗಳ ಮೂಲಕ ಕನ್ನಡಿಗರನ್ನು ಕೆರಳಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ. 

ಕರಾವಳಿಯ ಮಂಗಳೂರಿನಿಂದ ಹಿಡಿದು ಉತ್ತರ ಕನ್ನಡದವರೆಗಿನ ಅನೇಕ ಉದ್ಯಮಿಗಳು ಮುಂಬೈನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.  ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ಕೆಲ ಭಾಗಗಳೂ ನಮ್ಮದು ಎನ್ನುತ್ತೇವೆ. ಲಕ್ಷಾಂತರ ಕನ್ನಡಿಗರು ಮಹಾರಾಷ್ಟ್ರದ ಗಡಿ ಭಾಗದಲ್ಲಿದ್ದು, ಆ ಭಾಗಗಳನ್ನು ನಮಗೆ ಕೊಡಿ ಎಂದು ನಾವು ಕೂಡ ಕೇಳಬೇಕಾಗುತ್ತದೆ ಎಂದಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಯಾರೋ ಹೇಳಿಕೆ ಕೊಟ್ಟಾಗ ನಮ್ಮ ಮುಖ್ಯಮಂತ್ರಿಗೆ ಎಚ್ಚರ ಆಗುತ್ತದೆ. ಗಡಿ ಅಭಿವೃದ್ಧಿ ಪ್ರಾಧಿಕಾರವನ್ನು ಯಾಕೆ ಬಲಪಡಿಸುತ್ತಿಲ್ಲ. ಪ್ರಾಧಿಕಾರಕ್ಕೆ ಬಲಶಾಲಿ ಅಧ್ಯಕ್ಷರನ್ನು ಯಾಕೆ ನೇಮಕ ಮಾಡುತ್ತಿಲ್ಲ? ಈ ಗಡಿ ವಿಚಾರದಲ್ಲಿ ಮೊದಲು ನಮ್ಮ ಸಿಎಂ ಮಧ್ಯಪ್ರವೇಶಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತರಬೇಕು. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಈ ರೀತಿ ಹೇಳಿಕೆ ನೀಡುವುದನ್ನು ಮಹಾರಾಷ್ಟ್ರದ ಸಿಎಂ ನಿಲ್ಲಿಸಬೇಕು. ಇಲ್ಲದಿದ್ದರೆ ಎಲ್ಲಾ ಕನ್ನಡಪರ ಸಂಘಟನೆಗಳು ಮತಿಭ್ರಮಣೆ ಉದ್ಧವ್ ಠಾಕ್ರೆಗೆ ತಕ್ಕ ಉತ್ತರ ನೀಡುತ್ತೇವೆ. ಕಾರವಾರದ ಒಂದಿಂಚು ಜಾಗವನ್ನು ಮಹಾರಾಷ್ಟ್ರಕ್ಕೆ ಮಾತ್ರವಲ್ಲ, ಯಾವ ರಾಜ್ಯಕ್ಕೂ ಕೊಡುವುದಿಲ್ಲ. ಕನ್ನಡಿಗರ ತಾಕತ್ತು ಪ್ರದರ್ಶಿಸುತ್ತಿರುತ್ತೇವೆ ಎಂದು ಹೇಳಿದ್ದಾರೆ.