ವಿಜಯಪುರ 13: ‘ನಿಗಮಗಳಿಗೆ ಅನುದಾನ ಬಿಡುಗಡೆ ಮಾಡಿ’, ‘ಇಲ್ಲವೇ ನಿಗಮಗಳನ್ನು ಮುಚ್ಚಿಬಿಡಿ’, ಎಂಬ ಘೋಷಣೆ ಮೂಲಕ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಉದ್ದೇಶಿಸಿ ಇಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವಿಜಯಪುರ ಜಿಲ್ಲಾಧ್ಯಕ್ಷರಾದ ಸಿದ್ದು ಬುಳ್ಳಾ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಾತನಾಡುವ ಮೂಲಕ, ಹಿಂದುಳಿದ ವರ್ಗಗಳು ತಾವು ಪಡೆಯುತ್ತಿದ್ದ ಆರ್ಥಿಕ ನೆರವಿನಿಂದ ವಂಚಿತವಾಗುತ್ತಿವೆ. ಅರಿವು ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ ಸಿಗುವಂತ ಆರ್ಥಿಕ ನೆರವು ಕೂಡಾ ಸಿಗುತ್ತಿಲ್ಲ. ಸಣ್ಣ ಹಿಡುವಳಿದಾರರಿಗೆ ಸಿಗುವಂತಹ ಗಂಗಾ ಕಲ್ಯಾಣ ಯೋಜನೆ ಸಂಪೂರ್ಣ ನಿಂತುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಹಿಂದ ಹೇಳಿದಂಥವರು ಹಿಂದುಳಿದ ವರ್ಗಗಳಿಗೆ ವಂಚನೆ ಮಾಡಿ ಆಡಳಿತ ನಡೆಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಪರವಾಗಿರುವಂಥವರು ಎಂದು ಹೇಳಿಕೊಂಡವರು ಸಂಪೂರ್ಣವಾಗಿ ಅವರು ಹೇಳಿದ್ದ ಮಾತನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಟೀಕಿಸಿದರು. ಹಿಂದುಳಿದ ವರ್ಗಗಳ ಧ್ವನಿಯಾಗಿ, ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತದ ಅನುಸಾರವಾಗಿ ಜನರ ಧ್ವನಿಯಾಗಿ ಹೋರಾಟ ಮಾಡುವ ನಿರ್ಣಯ ಅಂಗೀಕರಿಸಿದ್ದೇವೆ. ಇಡೀ ರಾಜ್ಯಾದ್ಯಂತ ಹಿಂದುಳಿದ ವರ್ಗದ ಆರ್ಥಿಕ, ಓದ್ಯೋಗಿಕ, ಅವರ ಕೃಷಿ ಚಟುವಟಿಕೆಗೆ ಸಂಬಂಧಪಟ್ಟಂತಹ ಮತ್ತು ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಅನುದಾನವನ್ನು ಈ ಸರಕಾರ ಸ್ಥಗಿತ ಮಾಡಿದೆ ಎಂದು ಆಕ್ಷೇಪಿಸಿದರು. ಈ ಸರಕಾರವು ಹಿಂದುಳಿದವರಿಗೆ ಯಥೇಚ್ಛವಾಗಿ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಅರ್ಜಿಗಳನ್ನು ಕರೆದು ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಕಲ್ಯಾಣ ಕಾರ್ಯಕ್ಕೆ ಅವಕಾಶ ಮಾಡಿಕೊಡದೆ ಇದ್ದರೆ ಮುಂದಿನ ದಿನದಲ್ಲಿ ಹಿಂದುಳಿದ ವರ್ಗದ ಪರವಾಗಿ ಬೃಹತ್ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಸರಕಾರವು ಹಿಂದುಳಿದ ವರ್ಗದ ಸ್ವಾಭಿಮಾನಿ ಬದುಕು, ಸ್ವಾವಲಂಬಿ ಬದುಕನ್ನು ಕಸಿದುಕೊಂಡ ಹಿಂದುಳಿದ ವರ್ಗಗಳ ಪರವಾಗಿ ಮಾತನಾಡಲು ಯಾವ ನೈತಿಕ ಹಕ್ಕೂ ಇಲ್ಲ ಎಂದು ತಿಳಿಸಿದರು.ದೇವರಾಜ ಅರಸು ನಿಗಮ ಸೇರಿ ಎಲ್ಲ ಸಮುದಾಯದ ನಿಗಮಗಳಿಗೆ ಹಿಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಒಂದು ಸಾವಿರ ಕೋಟಿ ಬಿಡುಗಡೆ ಮಾಡಿದ್ದರು. ಈಗಿನ ಸರ್ಕಾರ ನೆಪ ಮಾತ್ರಕ್ಕೆ 150 ಕೋಟಿ ಬಿಡುಗಡೆ ಮಾಡಿದೆ. ಅಂದರೆ ಹಿಂದುಳಿದ ವರ್ಗಗಳ ಎಲ್ಲ ಸಮುದಾಯದ ನಿಗಮಗಳಿಗೆ ಕೊಡುವ ಹಣವು ಪಂಚ ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆಯಾಗಿದೆ ಎಂದು ಅವರು ಆರೋಪಿಸಿದರು. ಹಿಂದುಳಿದ ಅಭಿವೃದ್ಧಿ ನಿಗಮಗಳ ಕಚೇರಿಗಳು ಖಾಲಿಯಾಗಿವೆ. ಎಲ್ಲ ನಿಗಮಗಳು ತುಕ್ಕು ಹಿಡಿಯುತ್ತಿವೆ ಎಂದು ಅವರು ದೂರಿದರು.ಚಿದಾನಂದ ಚಲವಾದಿ, ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಮಂಜುನಾಥ್ ಮೀಸೆ, ಓಬಿಸಿ ಮೋರ್ಚಾ ಕಾರ್ಯಕಾರಿ ಸದಸ್ಯರಾದ ರಾಜಕುಮಾರ್ ಸಗಾಯಿ, ರವಿ ನಾಯ್ಕೋಡಿ, ಜಿಲ್ಲಾ ಉಪಾಧ್ಯಕ್ಷರಾದ ಶಿಲ್ಪ ಕುದರಗೊಂಡ ಮಾತನಾಡಿದರು. ನಗರ ಅಧ್ಯಕ್ಷರಾದ ಶಂಕರ್ ಹೂಗಾರ್ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸಪ್ನ ಕಣ್ಮುಚ್ಚಿನಾಳ್, ಮಲ್ಲಮ್ಮ ಜೋಗುರ್, ಸದಾಶಿವ್ ಬುಟ್ಟಾಳೆ, ಸುಭಾಷ್ ಬಿಸೇ, ಚಿನ್ನು ಚಿನಗುಂಡಿ, ರಾಹುಲ್ ಓರಂಗಬಾದ್, ಹನುಮಂತರಾಯ ಗುಡದಿನ್ನಿ, ವಿನೋದ್, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲು ಸೇಬಗೂಂಡ, ರೋಹಿತ್ ಸಿಂಧೆ, ಆನಂದ ಚೌದ್ರಿ, ಭರತ್ ಕೋಳಿ, ಪಾಪು ಸಿಂಗ್ ರಜಪೂತ್, ಉಪಸ್ಥಿತರಿದ್ದರು.