ಧಾರವಾಡ 03: ನಗರದ ಹಲವಾರು ಬಡಾವಣೆ ಹಾಗೂ ಸ್ಲಂಗಳಲ್ಲಿ ಚರಂಡಿ ನೀರು ತುಂಬಿ ಹರಿಯುತ್ತಿದ್ದು, ಚರಂಡಿಗಳನ್ನು ಸ್ವಚ್ಚಗೊಳಿಸಲು ಹಾಗೂ ಸೊಳ್ಳೆಗಳನ್ನು ನಿಯಂತ್ರಿಸಲು ಫಾಗಿಂಗ್ ಮಾಡಲು ಆಗ್ರಹಿಸಿ ದಿ. 2ರಂದು ಎಸ್.ಯು.ಸಿ.ಐ(ಕಮ್ಯುನಿಸ್ಟ್)ಪಕ್ಷದ ಸ್ಥಳೀಯ ಸಮಿತಿಯಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ಮಾಡಲಾಯಿತು.
ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಧಾರವಾಡ ಜಿಲ್ಲಾ ಸಮಿತಿ ಸದಸ್ಯ ದೀಪಾ ವಿ. ಮಾತನಾಡಿ ಮಳೆಗಾಲ ಪ್ರಾರಂಭವಾಗಿದ್ದು, ನಗರದ ವಿವಿಧ ಬಡಾವಣೆ, ಸ್ಲಂಗಳಲ್ಲಿ ಚರಂಡಿ ನೀರು ನಿಂತು ಸೊಳ್ಳೆಗಳ ಸಮಸ್ಯೆ ವಿಪರೀತವಾಗಿದೆ. ಹಲವು ದಿನಗಳಿಂದ ಚರಂಡಿ ಸ್ವಚ್ಚಗೊಳಿಸದೆ ತುಂಬಿ ನಿಂತು ದುರ್ನಾತ ಬೀರುತ್ತಿದ್ದಾವೆ. ಹಲವು ಕಡೆ ಒಳಚರಂಡಿಗಳು ಕಟ್ಟಿಕೊಂಡು ರಸ್ತೆ ಮೇಲೆ ಹರಿಯುತ್ತಿದೆ. ಸೊಳ್ಳೆಗಳಿಂದಾಗಿ ಡೆಂಗ್ಯೂ, ಮಲೇರಿಯಾ, ಚಿಕನ್ಗುನ್ಯಾ ದಂತಹ ರೋಗಗಳು ಹರಡುತ್ತಿದ್ದು ಜನರು ಆತಂಕಕ್ಕೊಳಗಾಗಿದ್ದಾರೆ. ದಿನನಿತ್ಯ ಕೂಲಿ ಮಾಡಿ ಬದುಕು ಸಾಗಿಸುತ್ತಿರುವ ಬಡಜನತೆ ಮಾರಣಾಂತಿಕ ರೋಗಗಳಿಗೆ ತುತ್ತಾಗಿ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ. ಆದರೆ ಮಹಾನಗರ ಪಾಲಿಕೆ ನಿಯಮಿತವಾಗಿ ಚರಂಡಿಗಳನ್ನು ಸ್ವಚ್ಚಗೊಳಿಸುತ್ತಿಲ್ಲ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡುತ್ತಿಲ್ಲ. ಮಹಾನಗರ ಪಾಲಿಕೆ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದ್ದು ಇದು ಜನರ ಆರೋಗ್ಯ, ನಗರ ಸ್ವಚ್ಚತೆ ಬಗ್ಗೆ ನಿರ್ಲಕ್ಷ್ಯ ಧೋರಣೆ ತೊರಿಸುತ್ತದೆ.
ಮಹಾನಗರ ಪಾಲಿಕೆ ಈ ಕೂಡಲೇ ಎಲ್ಲಾ ಬಡಾವಣೆಗಳಲ್ಲಿ ವಿಶೇಷವಾಗಿ ಸ್ಲಂಗಳಾದ ಜನ್ನತ ನಗರ, ಲಕ್ಷ್ಮಿಸಿಂಗನಕೇರೆ, ಚಪ್ಪರಬಂದ್ ಕಾಲೋನಿ, ಲೈನ್ ಬಜಾರ್ (ಕಾಕಾ ಓಣಿ), ಗೌಡರ ಕಾಲೋನಿ, ಸರಸ್ವತಪುರ ಸ್ಲಂ, ಜಯನಗರ ಪ್ಲಾಟ್, ನೆಹರುನಗರ, ಮದಾರಮಡ್ಡಿ, ಗೌಳಿಗಲ್ಲಿ ಮುಂತಾದೆಡೆ ಸೊಳ್ಳೆಗಳನ್ನು ನಿಯಂತ್ರಿಸಲು ಚರಂಡಿಗಳನ್ನು ಸ್ವಚ್ಚಗೊಳಿಸಬೇಕು, ಫಾಗಿಂಗ್ ಮಾಡಬೇಕು ಹಾಗೂ ನಿಯಮಿತವಾಗಿ ಕಸ ವಿಲೇವಾರಿ ಮಾಡಬೇಕು. ಹಲವು ಕಡೆ ಒಳಚರಂಡಿಗಳು ಕಟ್ಟಿಕೊಂಡು ರಸ್ತೆ ಮೇಲೆ ಹರಿಯುತ್ತಿದೆ. ಹಲವು ಸ್ಲಂಗಳಲ್ಲಿ ಚರಂಡಿಗಳು ದುರಸ್ಥಿಯಲ್ಲಿದ್ದು ರಿಪೇರಿಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಕಾರ್ಯನಿರ್ವಾಹಕ ಅಭಿಯಂತರ ಸಾಲಿಮಠ ಅವರು ಮಾತನಾಡಿ ಕಸ ವಿಲೇವಾರಿ, ಚರಂಡಿ ಸ್ವಚ್ಚತೆ ಹಾಗೂ ಫಾಗಿಂಗ್ ಕಾರ್ಯವನ್ನು ನಾಳೆಯಿಂದಲೇ ಮಾಡಲಾಗುವುದು. ದುರಸ್ತಿಯಲ್ಲಿರುವ ಚರಂಡಿಗಳ ಸ್ಥಳ ಪರಿಶೀಲಿಸಿ ಅವುಗಳ ರಿಪೇರಿಗೆ ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಭುವನಾ.ಎ, ರಮೇಶ ಹೊಸಮನಿ, ಮಧುಲತಾ ಗೌಡರ್, ಭವಾನಿಶಂಕರ್, ವಿಜಯಲಕ್ಷ್ಮಿ ದೇವತ್ಕಲ್, ಗಂಗಾ ಕೋಕರೆ, ದೇವಮ್ಮ, ಸಿಂಧು ಕೌದಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಪಕೀರವ್ವ, ಭಾರತಿ, ಫೀರುಸಾಬ್, ದುರ್ಗಮ್ಮ, ರೇಣುಕಾ, ಮಹಾದೇವಿ ಮುಂತಾದವರು ಭಾಗವಹಿಸಿದ್ದರು.