ಹಿಂದೂ ಸಭಾ ಮಂದಿರದಲ್ಲಿ ಪ್ರತಿಭಟನೆ: ವ್ಯಕ್ತಿ ಬಂಧನ

ಬ್ರಾಂಪ್ಟನ್‌ 10: ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಪ್ರತಿಭಟನೆಯ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೆನಡಾ ಪೊಲೀಸರು ಮತ್ತೋರ್ವ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

ಕ್ರಿಮಿನಲ್ ಇನ್ವೆಸ್ಟಿಗೇಶನ್ಸ್ ಬ್ಯೂರೋದ ತನಿಖಾಧಿಕಾರಿಗಳು ಬ್ರಾಂಪ್ಟನ್‌ನ ದೇವಸ್ಥಾನದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 35 ವರ್ಷದ ಇಂದರ್‌ಜೀತ್ ಗೋಸಲ್ ಎಂಬಾತನನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಈತ ಕೆನಡಾದಲ್ಲಿ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಸಂಯೋಜಕನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈತನ ಬಂಧನ ಬೆನ್ನಲ್ಲೇ ಸಮಾರಂಭವೊಂದರಲ್ಲಿ ಖಾಲಿಸ್ತಾನಿ ಧ್ವಜವನ್ನು ಹಿಡಿದು ಭಾರತೀಯ ತ್ರಿವರ್ಣ ಧ್ವಜದ ಮೇಲೆ ನಿಂತಿರುವ ಇಂದರ್‌ಜೀತ್ ಫೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

ನವೆಂಬರ್ 3ರಂದು ಖಾಲಿಸ್ತಾನ ಧ್ವಜಗಳನ್ನು ಹಿಡಿದಿದ್ದ ಪ್ರತಿಭಟನಕಾರರು ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂಸಭಾ ದೇವಾಲಯದ ಆವರಣದೊಳಗೆ ನುಗ್ಗಿ, ಅಲ್ಲಿನ ಜನರೊಂದಿಗೆ ಘರ್ಷಣೆ ನಡೆಸಿದ್ದರು. ಇದನ್ನು ಭಾರತದ ಹೈಕಮಿಷನ್‌ ಮತ್ತು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿತ್ತು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ವಿಎಚ್‌ಪಿ, ಬಿಜೆಪಿ, ಕಾಂಗ್ರೆಸ್‌ ನಾಯಕರೂ ಖಂಡಿಸಿದ್ದರು.