ಕಾರವಾರ: ಕ್ರಿಮ್ಸ ಅಧಿಕ್ಷಕ, ಹೆರಿಗೆ ವೈದ್ಯ ಶಿವಾನಂದ ಕುಡ್ತಲಕರ್ ವಿರುದ್ಧ ಕಾರವಾರ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು. ಸೆ.೩ ರಂದು ವೈದ್ಯರ ನಿರ್ಲಕ್ಷ್ಯ ದಿಂದ ಸಾವನ್ನಪ್ಪಿದ ಗೀತಾ ಎಸ್.ಬಾನವಳಿ(೨೮) ಅವರ ಕುಟುಂಬದವರು ವೈದ್ಯ ಶಿವಾನಂದ ಕುಡ್ತಲಕರ್ ವಿರುದ್ಧ ನಗರಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಪೊಲೀಸರು ವೈದ್ಯನನ್ನು ಬಂಧಿಸಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಮೀನುಗಾರರ ಮುಖಂಡರು, ಇತರ ಸಮುದಾಯದ ಮುಖಂಡರು ಶನಿವಾರ ಬೃಹತ್ ಪ್ರತಿಭಟನೆಗೆ ಇಳಿದರು. ಮೀನು ಮಾರಾಟ ಬಂದ್ ಮಾಡಿದರಲ್ಲದೆ ಯಮಕಿಂಕರ ವೈದ್ಯನನ್ನು ಅಮಾನತ್ ಮಾಡಿ,ಬಂಧಿಸಿ ಎಂದು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಶಿವಾನಂದ ವಿರುದ್ಧ ದೂರುಗಳಿವೆ. ಹಣ ಪಡೆದು ಹೆರಿಗೆ ಮಾಡ್ತಾರೆ.ಅನಗತ್ಯ ಸಿಜರಿನ್ ಗಳಾಗುತ್ತವೆ. ಆಸ್ಪತ್ರೆಯಲ್ಲಿ ದಬ್ಬಾಳಿಕೆ ವಾತಾವರಣ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅ.೩೧ ಕ್ಕೆ ಹೆರಿಗೆ ಯಾಗಿದ್ದ ಗೀತಾ ಬಾನವಳಿ ಆರೋಗ್ಯ ವಾಗಿದ್ದರು. ಅವರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಗೆ ಸೆ.೩ ರಂದು ಕರೆದೊಯ್ದು ನಿರ್ಲಕ್ಷ್ಯ ಮಾಡಲಾಗಿದೆ.ಶಸ್ತ್ರಚಿಕಿತ್ಸೆಗೆ ಮುನ್ನ ನಡೆದು ಹೋದ ಮಹಿಳೆ ಶವವಾಗಿ ಹೊರ ಬಂದಿದ್ದಳು. ಇದಕ್ಕೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ ಎಂದು ಕುಟುಂಬದವರ ಆರೋಪ. ವೈದ್ಯನನ್ನು ಬಂಧಿಸಿ. ಅಮಾನತ್ ಮಾಡಿ.ಕಾರವಾರದಲ್ಲಿ ೧೫ ವರ್ಷದಿಂದ ಈ ವೈದ್ಯ ಇದ್ದು,ಮಹಿಳೆಯರ ಪಾಲಿಗೆ ಕಂಠಕ ಆಗಿದ್ದಾನೆ. ಹಾಗಾಗಿ ಆತನನ್ನು ಬೇರೆಡೆಗೆ ಹಾಕಿ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಜಿಲ್ಲಾಡಳಿತಕ್ಕೆ ಮನವಿ ನೀಡಿ ,ಪೀಡಕ ವೈದ್ಯನ ಬಂಧನಕ್ಕೆ ಗಡುವು ನೀಡಿದ್ದಾರೆ. ವಾರದಲ್ಲಿ ಕ್ರಮವಾಗದಿದ್ದರೆ , ಬೃಹತ್ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ . ಮೀನುಗಾರರ ಮುಖಂಡ ರಾಜು ತಾಂಡೇಲ, ರಾಘು ನಾಯ್ಕ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪೊಲೀಸರು ಬಿಗಿ ಬಂದೋಬಸ್ತ ಏರ್ಪಡಿಸಿದ್ದರು.