ಗೃಹಮಂತ್ರಿ ಅಮಿತ ಶಾ ಹೇಳಿಕೆ ಖಂಡಿಸಿ ಪ್ರತಿಭಟನೆ

Protest against Home Minister Amita Shah's statement

ಗೃಹಮಂತ್ರಿ ಅಮಿತ ಶಾ ಹೇಳಿಕೆ ಖಂಡಿಸಿ ಪ್ರತಿಭಟನೆ

ದೇವರಹಿಪ್ಪರಗಿ 21: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ವಿರುದ್ಧ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನಕಾರಿ ಭಾಷಣ ಖಂಡಿಸಿ ಪಟ್ಟಣದಲ್ಲಿ ಶನಿವಾರದಂದು ಪ್ರಗತಿಪರ ಸಂಘಟನೆಗಳ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

ಯುವ ಮುಖಂಡ ಮುನೀರಅಹ್ಮದ್ ಮಳಖೇಡ ಅವರು ಮಾತನಾಡಿ, ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಎನ್ನುವುದು ಕೆಲವರಿಗೆ ವ್ಯಸನವಾಗಿದೆ ಎಂದು ಹೇಳುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರನ್ನು ಅವಮಾನಿಸುವುದರ ಜೊತೆಗೆ ದೇಶದ ಸಂವಿಧಾನವನ್ನೂ ಅವಮಾನಿಸಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಹಾಗೂ ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಪ್ರತಿನಿತ್ಯವೂ ಸ್ಮರಿಸುತ್ತದೆ. ಅವರು ನೀಡಿರುವ ಸಂವಿಧಾನವನ್ನು ಎಲ್ಲರೂ ಸ್ಮರಿಸುತ್ತಾರೆ. ಆದರೆ, ದೇಶದ ಆಡಳಿತ ನಡೆಸುತ್ತಿರುವವರು ಅವರನ್ನೇ ಅಪಮಾನ ಮಾಡುತ್ತಿದ್ದಾರೆ. ಸಮಾನತೆ, ನ್ಯಾಯ, ಮತ್ತು ಸಂವಿಧಾನದ ಮೇಲೆ ನಂಬಿಕೆ ಹೊಂದಿರುವ ಪ್ರತಿಯೊಬ್ಬರೂ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಬೇಕು ಎಂದು ಮನವಿ ಮಾಡಿದರು.ದಲಿತಪರ ಸಂಘಟನೆಯ ಮುಖಂಡರಾದ ರಾವುತ್ ತಳಕೇರಿ ಅವರು ಮಾತನಾಡಿ ಅಮಿತ್ ಶಾ ಅವರ ಸಂಸತ್ತಿನ ಈ ಅವಹೇಳನಕಾರಿ ಭಾಷಣವನ್ನು ಯಾವುದೇ ನಾಗರಿಕ ಸಮಾಜ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಅಂತರಾಳದಲ್ಲಿ ಅಂಬೇಡ್ಕರ್ ಅವರ ಬಗೆಗಿನ ಅಸಮ್ಮತಿ ಇಂದಿನ ಅವರ ಭಾಷಣದಲ್ಲಿ ಸ್ಪಷ್ಟವಾಗಿ ಅನಾವರಣಗೊಂಡಿದೆ. ಕೂಡಲೇ ಕೇಂದ್ರದ ಗೃಹ ಸಚಿವರು ದೇಶದ ಜನತೆಗೆ ಕ್ಷಮೆಯಾಚಿಸಬೇಕು ಹಾಗೂ ರಾಜೀನಾಮೆ ಕೊಟ್ಟು ತೊಲಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.ನಂತರ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಮುಖಂಡರುಗಳಾದ ಅಜೀಜ್ ಮರೋಳ, ರಾಜಕುಮಾರ ಸಿಂದಗೇರಿ, ಜಾಫರ್ ಇನಾಂದಾರ, ಜಾವಿದ್ ದಿಡ್ಡಿ, ರಾಘವೇಂದ್ರ ಗುಡಿಮನಿ, ಶಾನವಾಜ ಬೆಪಾರಿ, ಮಹಮ್ಮದ್ ಇಸ್ಮಾಯಿಲ್ ಮರೋಳ, ರಫೀಕ್ ಹವಾಲ್ದಾರ್ ಸೇರಿದಂತೆ ಪ್ರಗತಿ ಪರ ಹಾಗೂ ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.