ಭೋಪಾಲ್ 22: ಮಧ್ಯಪ್ರದೇಶದಲ್ಲಿ ಪಟೌಡಿ ಕುಟುಂಬಕ್ಕೆ ಸೇರಿದ 15 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಅವರು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕೊಹೆಫಿಜಾ ಪ್ರದೇಶದಿಂದ ಭೋಪಾಲ್‌ನ ಚಿಕ್ಲೋಡ್‌ವರೆಗೆ ಸೈಫ್ ಅಲಿ ಖಾನ್ ಅವರ ಪಟೌಡಿ ಕುಟುಂಬದ ಪೂರ್ವಿಕರ ಆಸ್ತಿ ವಿಸ್ತರಿಸಿದೆ. ಇದನ್ನು ಶತ್ರು ಆಸ್ತಿ ಎಂದು 2014ರಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಈ ಆಸ್ತಿ ಮೇಲೆ ಪಟೌಡಿ ಕುಟುಂಬದ ಉತ್ತರಾಧಿಕಾರಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ನೋಟಿಸ್ ಜಾರಿ ಮಾಡಲಾಗಿತ್ತು.
1968ರ ಶತ್ರು ಆಸ್ತಿ ಕಾಯ್ದೆಯ ಅಡಿಯಲ್ಲಿ ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯಿದೆ. 1968ರ ಶತ್ರು ಆಸ್ತಿ ಕಾಯ್ದೆಯ ಪ್ರಕಾರ, 1947 ರ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದ ವ್ಯಕ್ತಿಗಳ ಒಡೆತನದ ಆಸ್ತಿಯನ್ನು ಕೇಂದ್ರ ಸರ್ಕಾರವು ಹಕ್ಕು ಸಾಧಿಸಬಹುದಾಗಿದೆ.
ಸರ್ಕಾರ ಈ ಧೋರಣೆಯನ್ನು ಪ್ರಶ್ನಿಸಿ ಸೈಫ್ ಅಲಿ ಖಾನ್ ಅವರು 2015ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಈ ನೋಟಿಸ್ ವಿರುದ್ಧ ಸೈಫ್ ಅಲಿ ಖಾನ್ ಪಟೌಡಿ ಕುಟುಂಬ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶದ ಹೈಕೋರ್ಟ್ ವಜಾಗೊಳಿಸಿದೆ. ಈ ಆಸ್ತಿಗಳ ಮೇಲೆ 2015 ರಲ್ಲಿ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ಮಧ್ಯಪ್ರದೇಶ ಹೈಕೋರ್ಟ್ ತೆಗೆದುಹಾಕಿದೆ.
ಡಿ. 13 ರಂದು ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, 2017ರ ತಿದ್ದುಪಡಿ ಮಾಡಿದ ಶತ್ರು ಆಸ್ತಿ ಕಾಯ್ದೆ ಅಡಿ ಶಾಸನಬದ್ಧ ಪರಿಹಾರವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 30 ದಿನಗಳಲ್ಲಿ ಪ್ರಾತಿನಿಧ್ಯ ಸಲ್ಲಿಸಬೇಕೆಂದು ಪಟೌಡಿ ಕುಟುಂಬಕ್ಕೆ ಸೂಚಿಸಿತ್ತು. ಇಂದಿನಿಂದ ಈ ಆದೇಶಕ್ಕೆ ಸಂಬಂಧಿಸಿಂತೆ 30 ದಿನಗಳ ಒಳಗಡೆ ಮೇಲ್ಮನವಿ ಸಲ್ಲಿಸದಿದ್ದರೆ ಕೋರ್ಟ್ ಆದೇಶ ಪ್ರಕಟಿಸುವುದಿಲ್ಲ. ಒಂದು ವೇಳೆ ಸಲ್ಲಿಸದಿದ್ದರೆ ಕೋರ್ಟ್ ತನ್ನದೇ ಆದ ಅರ್ಹತೆಯ ಆಧಾರದ ಮೇಲೆ ಮೇಲ್ಮನವಿಯನ್ನು ಪರಿಗಣಿಸುತ್ತದೆ ಎಂದು ಹೇಳಿತ್ತು. ಇಲ್ಲಿಯವರೆಗೆ ಪಟೌಡಿ ಕುಟುಂಬಸ್ಥರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರಾ ಎಂಬುದರ ಬಗ್ಗೆ ಮಾಹಿತಿಯಿಲ್ಲ.