ಕೆಆರ್ಎಸ್ ಜಲಾಶಯದ ಬಳಿ ಕಲ್ಲುಗಣಿಗಾರಿಕೆ ನಿಷೇಧ

ಮಂಡ್ಯ, ಆ.31      ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯದ  ಸುತ್ತಮುತ್ತಲ ಪ್ರದೇಶಗಳಲ್ಲಿ ಅನಿರ್ದಿಷ್ಟ ಅವಧಿಯವರೆಗೆ ಕಲ್ಲು ಗಣಿಗಾರಿಕೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ. ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕುಗಳಲ್ಲಿ ಸುಮಾರು 80 ಕಲ್ಲು ಗಣಿಗಳಿದ್ದು   ಅವುಗಳ  ಬಹುಪಾಲು ಮಾಲೀಕತ್ವ ರಾಜಕಾರಣಿಗಳ ಒಡೆತನದಲ್ಲಿದೆ. ಹೆಚ್ಚಿನ ಗಣಿ ಮಾಲೀಕರು  ಕಲ್ಲುಗಳನ್ನು ಹೊರತೆಗೆಯಲು ಹೆಚ್ಚಿನ ತೀವ್ರತೆಯ ಸ್ಫೋಟಕ  ಬಳಸುತ್ತಿದ್ದು ಇದು ಪರಿಸರ ಮತ್ತು ಜಲಾಶಯದ ಸುರಕ್ಷತೆಗೆ ಅಪಾಯ ತರಲಿದೆ ಎಂಬ ದೂರುಗಳ ಹಿನ್ನಲೆಯಲ್ಲಿ  ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಇದಕ್ಕೆ  ಕಡಿವಾಣ ಹಾಕಿದ್ದರೆ. 

ಮಲ್ಲಿಗೆರೆ, ಅಲಪ್ಪನ ಹಳ್ಳಿ , ಬಿಂದಹಳ್ಳಿ, ಬೇಬಿ, ಬೇಬಿ ಬೆಟ್ಟ ಕವಾಲು, ಕಣಿವೆ ಕೊಪ್ಪಲು, ರಾಗಿಮುದ್ದನಹಳ್ಳಿ, ಕಟ್ಟೇರಿ, ಚಲ್ಲೇನಹಳ್ಳಿ  ಪಾಂಡವಪುರ,  ಹೊಸಬಣ್ಣಂಗಡಿ, ಚಿನಕುರಳಿ, ಹೊನಗನಹಳ್ಳಿ, ಕನಗನಹಳ್ಳಿ, ನುಗ್ಗಹಳ್ಳಿ, ಮಲ್ಕೊನಹಳ್ಳಿ, ಕಾಮನಾಯಕನಹಳ್ಳಿ, ಕಾಂಚನಹಳ್ಳಿ, ಮತ್ತು ದಿಂಕಾ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಫೋಟಕ ಬಳಕೆಯನ್ನು ನಿರ್ಬಂಧಿಸುವಂತೆ ಅವರು ಆದೇಶ ಮಾಡಿದ್ದಾರೆ.  

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತವಾರಿ ಕೇಂದ್ರ  (ಕೆಎಸ್ಎನ್ಡಿಎಂಸಿ) ಕಳೆದ ಸೆಪ್ಟೆಂಬರ್ನಲ್ಲಿ ಜಿಲ್ಲಾಡಳಿತಕ್ಕೆ ಇದರ ಬಗ್ಗೆ ವರದಿ ಸಲ್ಲಿಸಿತ್ತು. ನಂತರ ಸ್ಫೋಟಕಗಳ ಬಳಕೆಯನ್ನು ತಾತ್ಕಲಿಕವಾಗಿ ನಿಷೇಧಿಸಲಾಗಿತ್ತು . 

2018 ರ ಸೆಪ್ಟೆಂಬರ್ನಲ್ಲಿ ಜಲಸಂಪನ್ಮೂಲ ಇಲಾಖೆಯ ಅಣೆಕಟ್ಟು ಸುರಕ್ಷತಾ ರಾಜ್ಯ ಸಮಿತಿಯ ತಾಂತ್ರಿಕ ತಜ್ಞರು ಇಂತಹ ಸ್ಫೋಟಕಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು  ಒತ್ತಾಯಿಸಿದ್ದರು. 

ಕಲ್ಲುಗಣಿಗಳಲ್ಲಿ ಸ್ಫೋಟಕಗಳ ಅತಿಯಾದ ಬಳಕೆಯಿಂದ  ಕೆಆರ್ಎಸ್ ಜಲಾಶಯದ  ಸುರಕ್ಷತೆಯ ಮೇಲೆ ಆಗಬಹುದಾದ ಪರಿಣಾಮದ ಬಗ್ಗೆ  ಲೋಕಸಭೆಯಲ್ಲಿ  ಸಂಸದೆ  ಸುಮಲತಾ ಅಂಬರೀಶ್ ಆತಂಕ ವ್ಯಕ್ತಪಡಿಸಿದ್ದರು.