ಯಲಬುರ್ಗಾದಲ್ಲಿ ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ಕಾರ್ಯಕ್ರಮಕ್ಕೆ ಚಾಲನೆ

ಯಲಬುರ್ಗಾದಲ್ಲಿ ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ಕಾರ್ಯಕ್ರಮಕ್ಕೆ ಚಾಲನೆ  Program to promote sustainable agriculture launched in Yelburga

ಕೊಪ್ಪಳ, ಸೆ. 24: ರೈತರ ಆದಾಯ ಹೆಚ್ಚಿಸುವುದು ಹಾಗೂ ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಎಸ್ಬಿಐ ಫೌಂಡೇಶನ್ ಹಾಗೂ ಹಿಂದೂ ಸೇವಾ ಪ್ರತಿಷ್ಠಾನ (ಎಚ್‌ಎಸ್ಪಿ) ಸಹಯೋಗದಲ್ಲಿ ‘ಲೀಪ್ ಲಿವ್ ಲಿಹುಡ್  ಆಕ್ಸಿಲರೇಟರ್ ಪ್ರೋಗ್ರಾಂ’ ಹಾಗೂ ‘ವಸುಂಧರಾ ಯಲಬುರ್ಗಾ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‌’ ಯೋಜನೆಗಳಿಗೆ ಗುರುವಾರ ಚಾಲನೆ ನೀಡಲಾಯಿತು.  

ಯಲಬುರ್ಗಾ ತಾಲೂಕಿನ 23 ಗ್ರಾಮಗಳ 350 ಕೃಷಿ ಕುಟುಂಬಗಳನ್ನು ಒಳಗೊಂಡಿರುವ ಕಾರ್ಯಕ್ರಮದಲ್ಲಿ ಉತ್ತಮ ಕೃಷಿ ಪದ್ಧತಿ, ಮಣ್ಣಿನ ಆರೋಗ್ಯ ಸಂರಕ್ಷಣೆ, ನೈಸರ್ಗಿಕ ಕೃಷಿ, ಪಶುಸಂಗೋಪನೆ, ಕೃಷಿ ಅರಣ್ಯ, ಸಾಮೂಹಿಕ ಕೃಷಿ ಉಪಕರಣಗಳ ಬಳಕೆ ಹಾಗೂ ಮಾರುಕಟ್ಟೆ ಸಂಪರ್ಕದ ಮೂಲಕ ರೈತರ ಆದಾಯ ಹೆಚ್ಚಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ.  

ಎಸ್ಬಿಐ ಫೌಂಡೇಶನ್ ಅಧ್ಯಕ್ಷ ಹಾಗೂ ಸಿಇಒ ಪ್ರತುಷ್ ಮೆಹ್ರೋತ್ರಾ ಮತ್ತು ಕೊಪ್ಪಳದ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಸ್ಥಿರ ಜೀವನೋಪಾಯ ಹಾಗೂ ಗ್ರಾಮೀಣಾಭಿವೃದ್ಧಿಯ ಸಂಕೇತವಾಗಿ ಗಣ್ಯರು ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ರೈತರ ಆದಾಯ ಹೆಚ್ಚಳಕ್ಕೆ ಸರ್ಕಾರದ ಜೊತೆಗೆ ವಿವಿಧ ಸಂಸ್ಥೆಗಳು ಹಾಗೂ ಸಂಘಟನೆಗಳ ಸಹಕಾರವೂ ಅಗತ್ಯವಾಗಿದೆ.

ರೈತರ ಆದಾಯದಲ್ಲಿ ಶಾಶ್ವತ ಸುಧಾರಣೆ ತರಲು ಸರ್ಕಾರ, ಸಿಎಸ್‌ಆರ್ ಸಂಸ್ಥೆಗಳು ಹಾಗೂ ಸ್ಥಳೀಯ ಸಂಘಟನೆಗಳ ನಡುವೆ ಸಮನ್ವಯ ಅಗತ್ಯ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.