ವೃತ್ತಿನಿರತ ಪತ್ರಕರ್ತರು ಕೋವಿಡ್‌ ವಿಮಾ ವ್ಯಾಪ್ತಿಗೆ: ಡಾ.ಕೆ.ಸುಧಾಕರ್

ಬೆಂಗಳೂರು, ಮೇ 6, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕೋವಿಡ್ ಸಂದರ್ಭದಲ್ಲಿ ವೃತ್ತಿ ನಿರತ ಪತ್ರಕರ್ತರನ್ನು ವಿಮಾ ವ್ಯಾಪ್ತಿಗೆ ತರಲಾಗುವುದು ಭರವಸೆ ನೀಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.ಕೋವಿಡ್‌ ವಿರುದ್ಧ ಹೋರಾಡುತ್ತಿರುವ ಸರ್ಕಾರೊಂದಿಗೆ ಕೈಜೋಡಿಸಿ ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಮಾಧ್ಯಮದವರನ್ನು ಕೂಡ ಕೊರೋನಾ ವಾರಿಯರ್ಸ್‌ ಎಂದು ಪರಿಗಣಿಸಿ ಅವರನ್ನೂ ಆರೋಗ್ಯ ವಿಮೆ ಸೌಲಭ್ಯ ವ್ಯಾಪ್ತಿಗೆ ತರಬೇಕು ಎಂದು ಇತ್ತೀಚೆಗೆ ಪತ್ರಕರ್ತರ ಸಂಘ ಮುಖ್ಯಮಂತ್ರಿಯವರಿಗೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ.ಲಾಕ್ ಡೌನ್ ನಿಂದಾಗಿ ತೊಂದರೆ ಎದುರಿಸುತ್ತಿರುವ ಎಲ್ಲ ವರ್ಗದ ಜನರಿಗೆ ನೆರವಾಗಲು 1,610 ಕೋಟಿ ರೂ. ಮೊತ್ತದ ಪ್ಯಾಕೇಜ್ ಅನ್ನು ಮುಖ್ಯಮಂತ್ರಿಯವರು ಘೋಷಿಸಿದ್ದಾರೆ. ನೇಕಾರರ ಸಮ್ಮಾನ್ ಯೋಜನೆ, ಚಾಲಕರಿಗೆ, ಕಟ್ಟಡ ಕಾರ್ಮಿಕರಿಗೆ ಸಹಾಯಧನ, ಉದ್ದಿಮೆಗಳ ಉತ್ತೇಜನ ಸೇರಿದಂತೆ ಹಲವು ಮಹತ್ವಪೂರ್ಣ,  ಜನಪರ ಘೋಷಣೆಗಳನ್ನು ಮಾಡಿದ್ದಾರೆ ಎಂದು ಸಚಿವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.