ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರೊ. ಚಂದ್ರಕಾಂತ ಯಾತನೂರ ವಯೋನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಪ್ರೊ. ಟಿ. ಎಂ. ಭಾಸ್ಕರ್ ಅಭಿಮತ

ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರೊ. ಚಂದ್ರಕಾಂತ ಯಾತನೂರ ವಯೋನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಪ್ರೊ. ಟಿ. ಎಂ. ಭಾಸ್ಕರ್ ಅಭಿಮತ Prof. T. M. Bhaskar's speech at the retirement felicitation ceremony of Prof. Chandrakant Yatanur of

ಲೋಕದರ್ಶನ ವರದಿ 

ಕಲಬುರಗಿ 26 : ರೈತ ಕುಟುಂಭದಲ್ಲಿ ಜನಿಸಿರುವ ಪ್ರೊ. ಚಂದ್ರಕಾಂತ ಯಾತನೂರ ಸಮಚಿತ್ತ ಭಾವನೆಯಿಂದ ಉನ್ನತ ಹುದ್ದೆಯ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ತಮ್ಮ ಸುದೀರ್ಘ ಸೇವೆಯಲ್ಲಿ ಗುರು ಶಿಷ್ಯ ಪರಂಪರೆ ಮೌಲ್ಯಗಳಿಗೆ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುರಿ ಮತ್ತು ಸಾಧನೆಗೆ ಮಾರ್ಗದರ್ಶನ ನೀಡುವ ಮೂಲಕ ವಿಶ್ವವಿದ್ಯಾಲಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅಭಿಪ್ರಾಯಪಟ್ಟರು. 

 ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ. ಆರ್‌. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಚಂದ್ರಕಾಂತ ಯಾತನೂರ ಅವರ ವಯೋನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ರೈತ ಕುಟುಂಭದಲ್ಲಿ ಜನಿಸಿ ಹಿರಿಯರ ಸಂಸ್ಕಾರ ಮತ್ತು ಶ್ರೇಷ್ಠ ವಿದ್ವಾಂಸರ ಮಾರ್ಗದರ್ಶನದಲ್ಲಿ ಬೆಳೆದ ಪ್ರೊ. ಯಾತನೂರ  ಗುರುಗಳ ನಡೆ, ನುಡಿ, ಶಿಸ್ತು ಮೈಗೂಡಿಸಿಕೊಂಡು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ.

ರಾಜನೀತಿಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಪಡೆದು ಗುಣಮಟ್ಟದ ಬೋಧನೆ ಮತ್ತು ಸಂಶೋಧನೆಯಲ್ಲಿ ಪ್ರಯೋಗಶೀಲತೆ ಮತ್ತು ಹೊಸ ಅನ್ವೇಷಣೆ ತಂದಿದ್ದಾರೆ. ಆಡಳಿತಾತ್ಮಕ ಕರ್ತವ್ಯಗಳಲ್ಲಿ ಸ್ವಾಭಿಮಾನದ ಹೆಜ್ಜೆ ಮೂಲಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನು ಅತ್ಯಂತ ಸೌಜನ್ಯದಿಂದ ಕಂಡಿದ್ದಾರೆ. ತಮ್ಮ 35 ವರ್ಷಗಳ ಸೇವೆಯಲ್ಲಿ ಕಪ್ಪು ಚುಕ್ಕೆಯಿಲ್ಲದೆ, ಯಾವುದೇ ಕಲಹ ಮತ್ತು ಸಂಘರ್ಷಗಳಿಲ್ಲದೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ವಿವಿಧ ಸ್ಥಾನ, ಹುದ್ದೆಗಳನ್ನು ಅಲಂಕರಿಸಿ ಬದ್ಧತೆಯಿಂದ ಕೆಲಸ ನಿರ್ವಹಿಸಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹೆಮ್ಮೆ ತಂದಿದ್ದಾರೆ ಎಂದರು.     

ಆದಿಕವಿ ಶ್ರೀ. ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹರೀಷ ರಾಮಸ್ವಾಮಿ ಚಂದ್ರಯಾನ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ ಮುಗ್ಧತೆ ಮತ್ತು ಸರಳ ಸ್ವಭಾವದ ಪ್ರೊ. ಚಂದ್ರಕಾಂತ್ ಯಾತನೂರ ಅವರನ್ನು ನಿವೃತ್ತಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ಸತ್ಕರಿಸುತ್ತಿರುವುದು ನಿಜಕ್ಕೂ ಅವಿಸ್ಮರಣೀಯ. ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶಗಳಿವೆ. ಒಬ್ಬ ಸಾಧಕನಿಗೆ ವೃತ್ತಿ ಮತ್ತು ನಿವೃತ್ತಿ ಮುಖ್ಯವಲ್ಲ. ಸೇವಾ ಅವಧಿಯಲ್ಲಿ ಮಾಡಿದ ಕೆಲಸ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಬಹಳ ಮುಖ್ಯ. ತಮ್ಮ ಜ್ಞಾನದಿಂದ ಅಪಾರ ಸಂಖ್ಯೆಯ ವಿದ್ಯಾರ್ಥಿ ಸಂಶೋಧಕರನ್ನು ಬೆಳೆಸಿರುವ ಪ್ರೊ ಯಾತನೂರ ಅವರ ನಿವೃತ್ತಿ ಬದುಕು ಆರೋಗ್ಯದಾಯಕವಾಗಿರಲಿ ಎಂದು ಆಶಿಸಿದರು.   

ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ. ಎಂ. ಬಾಯಿನ್ ಮುಖ್ಯ ಅತಿಥಿಯಾಗಿ ಮಾತನಾಡಿ ಪ್ರೊ. ಚಂದ್ರಕಾಂತ್ ಯಾತನೂರ ಸ್ನೇಹಪರ ಜೀವಿ. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್‌.ಡಿ ಪದವಿ ಪಡೆದು ರಾಜ್ಯಶಾಸ್ತ್ರ ವಿಭಾಗದಲ್ಲಿ ಬೋಧಕರಾಗಿ ಸೇವೆಗೆ ನೇಮಕಗೊಂಡು ವಿಭಾಗವನ್ನು ಕಟ್ಟಿ ಬೆಳೆಸಿದ್ದಾರೆ. ವಿಶ್ವವಿದ್ಯಾಲಯದ ಉನ್ನತ ಹುದ್ದೆಗಳನ್ನು ಅಲಂಕರಿಸಿ ಉತ್ತಮ ಆಡಳಿತ ನಡೆಸಿದ್ದಾರೆ. ಕುಲಸಚಿವ, ಕುಲಪತಿಯಾಗಿ ವಿಶ್ವವಿದ್ಯಾಲಯಕ್ಕೆ ಗೌರವ ತಂದಿದ್ದಾರೆ. ವಿಶ್ವವಿದ್ಯಾಲಯ ಕಟ್ಟುವ ಮತ್ತು ಬೆಳೆಸುವ ಕನಸು, ವಿವಿಧ ಆಯಾಮಗಳ ಬಗ್ಗೆ ಅವರಿಗೆ ದೂರದೃಷ್ಟಿಯಿತ್ತು. ಸದಾ ನಗು, ಕಾರ್ಯದಲ್ಲಿ ಶಿಸ್ತು ಮತ್ತು ವೈಜ್ಞಾನಿಕ ಆಲೋಚನೆ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಧನಾತ್ಮಕ ಚಿಂತನೆ ಬೆಳೆಸಿದ್ದಾರೆ ಎಂದರು.  

ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಚಂದ್ರಕಾಂತ ಯಾತನೂರ ಮಾತನಾಡಿ ಬಡತನದಲ್ಲೂ ತಂದೆ ತಾಯಿ ಜನ್ಮ ನೀಡಿದ್ದಾರೆ. ನಂತರ ತಂದೆ ಸ್ಥಾನದಲ್ಲಿ ನಿಂತು ಅಣ್ಣ ಮತ್ತು ಅತ್ತಿಗೆ ನನಗೆ  ವಿದ್ಯೆ ಕಲಿಸಿ ಸಲುಹಿದರು. ಉತ್ತಮ ನಡೆ ನುಡಿ ಕಲಿಸಿದರು. ಸಂಸ್ಕಾರ ನೀಡಿ ಮನುಷ್ಯನನ್ನಾಗಿ ಬೆಳೆಸಿ ಮಾರ್ಗದರ್ಶನ ಮಾಡಿದ್ದಾರೆ. ಕುಟುಂಭ ವರ್ಗದ ಪ್ರೀತಿ ಮತ್ತು ಕಾಳಜಿಯನ್ನು ಸ್ಮರಿಸಿಕೊಂಡ ಅವರು ಗುರುಗಳ ಸಹಾಯ, ಪ್ರೋತ್ಸಾಹ ಮತ್ತು ಸೇವಾ ಅವಧಿಯ ಘಟನೆಗಳನ್ನು ಮೆಲುಕು ಹಾಕಿದರು.   

  ಕುಲಪತಿ ಪ್ರೊ. ಶಶಿಕಾಂತ್ ಎಸ್‌. ಉಡಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರೊ. ಚಂದ್ರಕಾಂತ್ ಯಾತನೂರ ಅವಿಭಕ್ತ ಕುಟುಂಭದಲ್ಲಿ ಬೆಳೆದು ಅಣ್ಣನ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ. ವಿಶ್ವವಿದ್ಯಾಲಯ ಎಲ್ಲವನ್ನೂ ಕೊಟ್ಟಿದೆ ಎಂಬ ತೃಪ್ತಭಾವ ಅವರಿಗಿದೆ. ತಂದೆ ತಾಯಿ ನೀಡಿದ ಸಂಸ್ಕಾರದಿಂದ ಕೆಲಸದಲ್ಲಿ ಶಿಸ್ತು, ಸಹನೆ, ನಿಯಮ ಪಾಲನೆ, ಕರ್ತವ್ಯ ನಿಷ್ಠೆ ಮತ್ತು ಹೃದಯವಂತಿಕೆ ಅವರಿಗೆ ಬಂದಿದೆ. ನಾನು ಕುಲಪತಿಯಾಗಿ ಒಂಬತ್ತು ತಿಂಗಳು ಕಳೆದಿದೆ. ಅಲ್ಪ ಅವಧಿಯಲ್ಲಿ ನಾನು ಗಮನಿಸಿದಂತೆ ಪ್ರೊ. ಯಾತನೂರ ವೃತ್ತಿ ಬದ್ಧತೆ ಮತ್ತು ಕರ್ತವ್ಯ ನಿಷ್ಠೆ ಮೀರದಂತೆ ಕೆಲಸ ಮಾಡಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣವನ್ನು ಗೌರವಿಸಬೇಕು. ಒಳ್ಳೆಯ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಇದೇ ಸಂದರ್ಭದಲ್ಲಿ ತಮ್ಮ ಶೈಕ್ಷಣಿಕ ಬೆಳವಣಿಗೆಗೆ ಮತ್ತು ಬದುಕಿಗೆ ನೆರವು ಮತ್ತು ಉತ್ತೇಜನ ನೀಡಿದ ಸಹೋಧರರ ಪ್ರೋತ್ಸಾಹವನ್ನು ನೆನಪಿಸಿಕೊಂಡರು.   

ಪ್ರೊ. ಚಂದ್ರಕಾಂತ ಯಾತನೂರ ಅಭಿನಂದನಾ ಸಮಿತಿ ಅಧ್ಯಕ್ಷ ಡಾ. ಅನಿಲಕುಮಾರ ಹಾಲು ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರೊ. ಚಂದ್ರಕಾಂತ ಯಾತನೂರ ಅವರ ಶಿಷ್ಯ ಬಳಗ ದೇಶದ ನಾನಾ ಕಡೆಗಳಲ್ಲಿ ವಿವಿಧ ವೃತ್ತಿಗಳಲ್ಲಿ  ಕೆಲಸ ಮಾಡುತ್ತಿದ್ದಾರೆ. ಪ್ರೊ. ಚಂದ್ರಕಾಂತ ಯಾತನೂರ  ಬೋಧನೆ ಮತ್ತು ಜ್ಞಾನ ಮರೆಯುವಂತಿಲ್ಲ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿರುವುದು ಅವರ ಜ್ಞಾನ ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರೀತಿ ಬಾಂದವ್ಯ ಇತರರಿಗೆ ಮಾದರಿ ಎಂದರು.    

ಕಲಬುರಗಿ ವಿಶ್ರಾಂತ ಎಸ್‌ಪಿ ಜಿ. ಎಂ. ಯಾತನೂರ ಹಾಗೂ ಶ್ರೀಮತಿ ಅಂಜನಾ ಯಾತನೂರ ಮಾತನಾಡಿದರು. ಪೃಥ್ವಿರಾಜ್ ಜಯಂತ್ ಚಂದ್ರಯಾನ ಕುರಿತು ಮಾತನಾಡಿದರು. ಪ್ರೊ. ಶ್ರೀರಾಮುಲು, ಎಂ. ಎಚ್‌. ಪ್ರಹ್ಲಾದಪ್ಪ, ಡಾ. ವಿಷ್ಣುವರ್ಧನ್ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು, ವಿಶ್ರಾಂತ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಯಾತನೂರು ಗ್ರಾಮದ ಹಿರಿಯರು, ಕುಟುಂಭ ವರ್ಗ, ಸ್ನೇಹಿತ ಬಳಗ ಸೇರಿದಂತೆ ನಾಗರೀಕರು ಭಾಗವಹಿಸಿದ್ದರು.  ವಿದ್ಯಾರ್ಥಿನಿ ಶಿವಲೀಲಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಆಕಾಶವಾಣಿ ಕೇಂದ್ರದ ಉದ್ಘೋಷಕಿ ಶಶಿಕಲಾ ಜಡೆ ಕಾರ್ಯಕ್ರಮ ನಿರ್ವಹಿಸಿದರು.  ಡಾ. ವೆಂಕಟೇಶ್ ಪೂಜಾರಿ ವಂದಿಸಿದರು.