ಸೋನೆಭಾದ್ರಕ್ಕೆ ಆಗಸ್ಟ್ 13ರಂದು ಪ್ರಿಯಾಂಕಾ ಭೇಟಿ

ಲಕ್ನೋ, ಆ 11      ಭೂ ವಿವಾದಕ್ಕೆ ಸಂಬಂಧಿಸಿ ಜೂನ್ 17ರಂದು 10 ಮಂದಿ ಬುಡಕಟ್ಟು ಜನರ ಹತ್ಯೆ ನಡೆದ ಉತ್ತರ ಪ್ರದೇಶದ ಸೋನೆಭಾದ್ರ ಜಿಲ್ಲೆಯ ಉಂಭಾ ಗ್ರಾಮಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಗಸ್ಟ್ 13ರಂದು ಭೇಟಿ ನೀಡಲಿದ್ದಾರೆ. ಸಂತ್ರಸ್ತ ಕುಟುಂಬವನ್ನು ಪ್ರಿಯಾಂಕಾ ಅವರು ಆಗಸ್ಟ್ 13ರಂದು ಭೇಟಿ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಗುಂಡಿನ ದಾಳಿ ನಡೆದು 10 ಜನ ಬುಡಕಟ್ಟು ಜನರು ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆಯೇ ಪ್ರಿಯಾಂಕಾ ಅವರು ಸೋನೆಭಾದ್ರಕ್ಕೆ ಹೊರಟಿದ್ದರು. ಆದರೆ ಉತ್ತರ ಪ್ರದೇಶ ಪೊಲೀಸರು 144 ಸೆಕ್ಷನ್ ಜಾರಿ ಮಾಡಿ ಪ್ರಿಯಾಂಕಾ ಅವರನ್ನು ಚುನಾರ್ ಅತಿಥಿ ಗೃಹದಲ್ಲಿ 26 ಗಂಟೆಗಳ ಕಾಲ ಬಂಧನದಲ್ಲಿಟ್ಟಿದ್ದರು. ಆದರೂ ಪ್ರಿಯಾಂಕಾ ಅವರು ಅಲ್ಲೇ ಧರಣಿ ನಡೆಸಿ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡದೆ ದೆಹಲಿಗೆ ತೆರಳುವುದಿಲ್ಲ ಎಂದು ಶಪಥ ಮಾಡಿದ್ದರು. ಕೊನೆಗೆ ಅವರ ಹಠಕ್ಕೆ ಮಣಿದ ಉತ್ತರ ಪ್ರದೇಶ ಸರ್ಕಾರ, ಸಂತ್ರಸ್ತರಲ್ಲಿ ಕೆಲವರನ್ನು ಅತಿಥಿ ಗೃಹಕ್ಕೆ ಕರೆತಂದು ಭೇಟಿ ಮಾಡಿಸಿತು. ಬಳಿಕ ಪ್ರಿಯಾಂಕಾ ಸಂತ್ರಸ್ತ ಕುಟಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿ, ಧರಣಿ ಕೈಬಿಟ್ಟಿದ್ದರು ಮಂಗಳವಾರ ಪ್ರಿಯಾಂಕಾ ಭೇಟಿ ವೇಳೆ ಅವರಿಗೆ ಉತ್ತರ ಪ್ರದೇಶ ಮತ್ತು ದೆಹಲಿಯ ಪಕ್ಷದ ಹಿರಿಯ ನಾಯಕರು ಸಾಥ್ ನೀಡಲಿದ್ದಾರೆ.