ನವದೆಹಲಿ, ಮೇ 29, ಪೂರ್ವ ಲಡಾಕ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಉಲ್ಬಣಗೊಂಡಿರುವ ಗಡಿ ಸಮಸ್ಯೆಯ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಭಯ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ಪುನರುಚ್ಚರಿಸಿದ್ದಾರೆ ಮತ್ತು ಈ ವಿವಾದಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸುವ ಮನಸ್ಥಿತಿಯಲ್ಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷರು ಭಾರತ ಮತ್ತು ಚೀನಾ ನಡುವೆ "ದೊಡ್ಡ ಸಂಘರ್ಷ" ನಡೆಯುತ್ತಿದೆ ಎಂದು ಹೇಳಿದ್ದಾರೆ. 'ಅಮೆರಿಕದ ಮಾಧ್ಯಮಗಳು ನನ್ನನ್ನು ಇಷ್ಟಪಡುವುದಕ್ಕಿಂತ ಭಾರತದಲ್ಲಿ ನನ್ನನ್ನು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಮತ್ತು, ಮಹಾನ್ ಸಂಭಾವಿತ ವ್ಯಕ್ತಿಯಾದ ಮೋದಿಯವರನ್ನು ನಾನು ಇಷ್ಟಪಡುತ್ತೇನೆ '' ಎಂದಿದ್ದಾರೆ.
ಭಾರತ ಮತ್ತು ಚೀನಾ ನಡುವೆ ದೊಡ್ಡ ಸಂಘರ್ಷ ನಡೆಯುತ್ತಿದೆ. 1.4 ಬಿಲಿಯನ್ ಜನರನ್ನು ಹೊಂದಿರುವ ಶಕ್ತಿಶಾಲಿ ಮಿಲಿಟರಿಗಳನ್ನು ಹೊಂದಿರುವ ಎರಡು ದೇಶಗಳೂ ಗಡಿ ವಿವಾದದ ಕಾರಣ ಸಂತೋಷವಾಗಿಲ್ಲ. '' ನಾನು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದೇನೆ. ಚೀನಾದೊಂದಿಗೆ ಏನು ನಡೆಯುತ್ತಿದೆಯೋ ಅದರ ಬಗ್ಗೆ ಅವರು ಉತ್ತಮ ಮನಸ್ಥಿತಿಯಲ್ಲಿಲ್ಲ, '' ಎಂದು ತಿಳಿಸಿದ್ದಾರೆ.
ಭಾರತ ಮತ್ತು ಚೀನಾ ನಡುವೆ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪ ಇನ್ನೂ ನಿಂತಿದೆಯೇ ಎಂಬ ಪ್ರಶ್ನೆಗೆ, '' ಭಾರತ ಮತ್ತು ಚೀನಾ ಬಯಸಿದಲ್ಲಿ ಮಧ್ಯಸ್ಥಿಕೆ ಅಥವಾ ಸಹಾಯಕ್ಕೆ ಸಿದ್ಧ” ಎಂದು ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವೆ ಮಧ್ಯಸ್ಥಿಕೆ ವಹಿಸಲು ತಾನು ಸಿದ್ಧ ಮತ್ತು ಸಮರ್ಥ ಎಂದು ಡೊನಾಲ್ಡ್ ಟ್ರಂಪ್ ಬುಧವಾರವಷ್ಟೇ ಟ್ವೀಟ್ ಮಾಡಿದ್ದರು. ಆದರೆ ಚೀನಾ ದೇಶವು ಮಧ್ಯಸ್ಥಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಚೀನಾ ಜೊತೆಗಿನ ಗಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಗುರುವಾರ ಹೇಳಿದ್ದಾರೆ. ಸನ್ನಿವೇಶವನ್ನು ನಿಭಾಯಿಸಲು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಉಭಯ ದೇಶಗಳೂ ಯಾಂತ್ರಿಕ ವ್ಯವಸ್ಥೆಗಳನ್ನು ಸ್ಥಾಪಿಸಿದ್ದು, ಮಾತುಕತೆಯ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.