ಅರುಣ್ ಜೇಟ್ಲಿ ನಿಧನಕ್ಕೆ ಪ್ರಧಾನಿ ಸೇರಿ ಗಣ್ಯರ ಸಂತಾಪ

 ನವದೆಹಲಿ, ಆಗಸ್ಟ್ 24    ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರ ನಿದನಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್,  ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. 

 ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಸ್ತುತ ಯುಎಇಯಲ್ಲಿರುವ ಪ್ರಧಾನಿ ಮೋದಿ, ದೂರವಾಣಿ ಮೂಲಕ ಜೇಟ್ಲಿ ಕುಟುಂಬದೊಂದಿಗೆ ಮಾತನಾಡಿದರು. ತಮ್ಮ ಭೇಟಿಯನ್ನು ಮೊಟಕುಗೊಳಿಸದಂತೆ ಜೇಟ್ಲಿ ಕುಟುಂಬ ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ. ಯುಎಇ ನಂತರ ಮೋದಿ ಅವರು ಬಹ್ರೇನ್ಗೆ ಭೇಟಿ ನೀಡಲಿದ್ದಾರೆ. 

 ಅರುಣ್ ಜೇಟ್ಲಿ ಅವರು ರಾಜಕೀಯ ದೈತ್ಯ, ಉನ್ನತ ಕಾನೂನು ಜ್ಞಾನ ಹೊಂದಿದ್ದರು. ಅವರು ಭಾರತಕ್ಕೆ ಶಾಶ್ವತ ಕೊಡುಗೆ ನೀಡಿದ ಧೀಮಂತ ನಾಯಕ. ಅವರ ನಿಧನ ಬಹಳ ದುಃಖಕರವಾಗಿದೆ. ಅವರ ಪತ್ನಿ ಸಂಗೀತ  ಮತ್ತು ಮಗ ರೋಹನ್ ಅವರೊಂದಿಗೆ ಮಾತನಾಡಿ ಸಂತಾಪ ಸೂಚಿಸಿರುವೆ. ಓಂ ಶಾಂತಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 

 ಜಿಎಸ್ಟಿ ವ್ಯವಸ್ಥೆಗೆ ಕಾರಣವಾದ ಮಾಜಿ ಹಣಕಾಸು ಸಚಿವರ ನಿಧನಕ್ಕೆ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಸಂತಾಪ ಸೂಚಿಸಿದ್ದಾರೆ. 

 ಕಾನೂನು ಮತ್ತು ರಾಜಕೀಯ ಎರಡೂ ವಿಷಯಗಳಲ್ಲಿ ಸುದೀರ್ಘ ಅನುಭವ ಹೊಂದಿರುವ ಜೇಟ್ಲಿ, ಪ್ರಧಾನಿ ಮೋದಿ ಅವರ ಉತ್ತಮ ನೀತಿ ನಿರೂಪಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. 

 ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಗಸ್ಟ್ 9 ರಂದು ಏಮ್ಸ್ ನಲ್ಲಿ ದಾಖಲಿಸಲಾಗಿತ್ತು. ಮೃತರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ.