‘ಪ್ರಧಾನಮಂತ್ರಿ ಮಾತೃ ವಂದನಾ’ ಯೋಜನೆ: 1.28 ಕೋಟಿ ಫಲಾನುಭವಿಗಳಿಗೆ 5,280 ಕೋಟಿ ರೂ. ನೇರ ವರ್ಗಾವಣೆ

ನವದೆಹಲಿ, ಫೆ 3 :     ‘ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ(ಪಿಎಂಎಂವಿವೈ) ಆರಂಭವಾದಾಗಿನಿಂದ  ಒಂದು ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಮಧ್ಯಪ್ರದೇಶ ಅಗ್ರಸ್ಥಾನದಲ್ಲಿದ್ದು, ಆಂಧ್ರಪ್ರದೇಶ ಮತ್ತು ಹರಿಯಾಣ ನಂತರದ ಸ್ಥಾನಗಳಲ್ಲಿವೆ.

ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ  ದಾದ್ರಾ ಮತ್ತು ನಗರ್ ಹವೇಲಿ ಮೊದಲ ಸ್ಥಾನ,  ಹಿಮಾಚಲ ಪ್ರದೇಶ ಮತ್ತು ಚಂಡೀಗಢ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. 

ಸೋಮವಾರ ಇಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಜವಳಿ ಸಚಿವೆ ಸ್ಮೃತಿ ಜುಬಿನ್ ಇರಾನಿ ಮಾತನಾಡಿ, ಈ ಯೋಜನೆಯಡಿ 5,280 ಕೋಟಿ ರೂ ಹಣವನ್ನು 1.28 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ವರ್ಗಾಯಿಸಲಾಗಿದೆ ಎಂದು ಹೇಳಿದರು.  

ಜಿಲ್ಲಾಡಳಿಗಳು, ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಯೋಜನೆ ಯಶಸ್ವಿಯಾಗಲು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಯೋಜನೆಯನ್ನು ಯಶಸ್ವಿಯಾಗಿ ಜಾರಿ ಗೊಳಿಸಿದ ತಮಿಳುನಾಡು, ಅಸ್ಸಾಂ, ತ್ರಿಪುರಾ ಮತ್ತು ಮಣಿಪುರ ರಾಜ್ಯಗಳು ನಿರೂಪಿಸಿವೆ. ಡಿಸೆಂಬರ್ 2ರಿಂದ 8ರವರೆಗೆ ನಡೆದ ಮಾತೃ ವಂದನಾ ಸಪ್ತಾಹ ವೇಳೆ ಒಂದೇ 2.78 ಲಕ್ಷ ಅರ್ಜಿಗಳು ಬಂದಿವೆ ಎಂದು ಸಚಿವರು ತಿಳಿಸಿದ್ದಾರೆ.