ಸಮ್ಮೇಳನ ಮುಗಿದ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ರಾಜೀನಾಮೆ ನೀಡಲಿ : ಪ್ರೊ ಆರ್ ಕೆ ಹುಡುಗಿ

ಕಲಬುರಗಿ, ಫೆ 6 :   ಆಳುವ ವರ್ಗಗಳ ಅಡಿಯಾಳಾಗಿ ಕೆಲಸ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮನುಬಳಿಗಾರ್ ಈ ಅಖಿಲ ಭಾರತ ಸಮ್ಮೇಳನ ಮುಗಿದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹಿರಿಯ ಸಾಹಿತಿ ಪ್ರೊ.ಆರ್.ಕೆ.ಹುಡಗಿ ಆಗ್ರಹಿಸಿದ್ದಾರೆ . 

ಗುರುವಾರ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ 85 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಾದ ಬಳಿಕ ಹೋರಾಟಗಾರ್ತಿ ಕೆ.ನೀಲಾ ಮನುಬಳಿಗಾರ್ ರಾಜೀನಾಮೆ ನೀಡಬೇಕು ಎಂದು ಮುಖ್ಯ ವೇದಿಕೆಯಲ್ಲಿಯೇ ಒತ್ತಾಯಿಸಿದ್ದರು. ಇಂದು ಕೂಡ ಅವರ ರಾಜೀನಾಮೆ ನೀಡಬೇಕು ಎಂದು  ಸಾಹಿತಿ ಆರ್.ಕೆ.ಹುಡಗಿ ಒತ್ತಾಯಿಸಿದ್ದಾರೆ. 

ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ನಾಡು, ನುಡಿ ಸೇವೆ ಮಾಡಲಿ, ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಾಗ ಅದರ ವಿರುದ್ಧ ಹೋರಾಟ ಮಾಡಬೇಕು ಎಂಬ ಕಾರಣಕ್ಕೆ ಅವರನ್ನು ಚುನಾಯಿಸಿದ್ದೇವೆ. ಆದರೆ, ಅವರು ಆಳುವವರ ಕೈಕೆಳಗೆ ಕಾರ್ಯನಿರ್ವಹಿಸುತ್ತಿದ್ದಾರೆ  ಎಂದು ಆರೋಪಿಸಿದರು.

ಸಮ್ಮೇಳನದ ಎರಡನೇ ದಿನದಂದು ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಸಮಾನಾಂತರ ವೇದಿಕೆಯಲ್ಲಿ ನಡೆದ ಕಲಬುರಗಿ ಜಿಲ್ಲಾ ದರ್ಶನ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿಗೆ ಶಿರಸಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಆಯ್ಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಮಧ್ಯಪ್ರವೇಶ ಮಾಡಿದ ಕ್ರಮ ಸಮಂಜಸವಲ್ಲ. ಪರಿಷತ್ತಿನ ಅಧ್ಯಕ್ಷರಾಗಿ ಒಂದು ಸಮಿತಿ ಬಹುಮತದಿಂದ ಆಯ್ಕೆ ಮಾಡಿದ ಅಧ್ಯಕ್ಷರನ್ನು ಬದಲಿಸಬೇಕು ಎಂದು ಒತ್ತಡ ಹೇರಿದಾಗ ಪರಿಷತ್ತಿನ ಅಧ್ಯಕ್ಷರಾಗಿ ನಿಮ್ಮ ಮೌನ ಸರಿಯಲ್ಲ ಎಂದು ಅವರು ಕಿಡಿಕಾರಿದರು.

ಸಚಿವ ಸಿ.ಟಿ.ರವಿ ಅನುದಾನ ನೀಡುವುದಿಲ್ಲ ಎಂದಾಗ, ಸಮ್ಮೇಳನ ನಡೆಸಿದರೆ ಪೆಟ್ರೋಲ್ ಬಾಂಬ್ ಹಾಕುತ್ತೇವೆ ಎಂದಾಗ  ಮನುಬಳಿಗಾರ್ ಅವರು ಏಕೆ ಪ್ರತಿಕ್ರಿಯಿಸಲಿಲ್ಲ.  ಸ್ವಾಯತ್ತ ಸಂಸ್ಥೆಯಾದ ಕಸಾಪ ಒಂದು ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವಷ್ಟು ಸ್ವತಂತ್ರವಿಲ್ಲವೇ  ಎಂದು ಪ್ರಶ್ನಿಸಿದ  ಅವರು, ಸಿ.ಟಿ.ರವಿಯವರೇ ಸಮ್ಮೇಳನಕ್ಕೆ ಅನುದಾನ ನೀಡುವುದಕ್ಕೆ ನೀವು ನಿಮ್ಮ ಮನೆಯಿಂದ ಏನಾದರೂ ಹಣ ಕೊಡುತ್ತೀರಾ? ಸಾರ್ವಜನಿಕರ ತೆರಿಗೆ ಹಣದಲ್ಲಿಯೇ ಅನುದಾನ ನೀಡುವುದು ಎಂಬುದನ್ನು ನೀವು ಮರೆಯಬೇಡಿ ಎಂದು ಕಿಡಿಕಾರಿದರು.

ಭಾವೈಕ್ಯತೆಯ ನೆಲೆಗಳು ವಿಷಯದ ಕುರಿತು ರಿಯಾಜ್ ಅಹ್ಮದ್ ಬೋಡೆ ಮಾತನಾಡಿ, ಕಲ್ಯಾಣ ಕರ್ನಾಟಕ ಭಾವೈಕ್ಯತೆಯ ಸೆಲೆಯಾಗಿದ್ದು ಅದು ಇಂದು, ನಾಳೆಗೆ ಸೀಮಿತವಾಗಿಲ್ಲ. ದಖನ್ ಆಡಳಿತ ಕಾಲದಿಂದಲೂ ಇಲ್ಲಿ ಹಿಂದೂ – ಮುಸ್ಲಿಮರು ಭಾವೈಕ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದರು.

ವಚನ ಚಳಿವಳಿಕಾರಾದ ಅಲ್ಲಮಪ್ರಭು ಬಸವ, ,ಅಕ್ಕಮಹಾದೇವಿ ಸೇರಿ ಅನೇಕರು ಹಾಕಿಕೊಟ್ಟಿರುವ ಮಾರ್ಗ ಅವರುಗಳ ಪ್ರಭಾವ ಇನ್ನೂ ಜೀವಂತವಾಗಿದೆ ಎಂದರು. 

ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಒಗ್ಗೂಡಿ ಬಾಳುವುದನ್ನು ಈ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಅಂದಿನ ಸಾಂಸ್ಕೃತಿಕ, ಸಾಹಿತ್ಯಿಕ ಸಂಸ್ಕೃತಿ ಇಂದು ಮುಂದುವರಿದಿದೆ ಎಂದು ಅವರು ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ಐತಿಹಾಸಿಕ ಪರಂಪರೆ ವಿಷಯದ ಕುರಿತು ಡಾ.ಶಂಭುಲಿಂಗವಾಣಿ , ಪ್ರವಾಸೋದ್ಯಮ ತಾಣಗಳು ಹಾಗೂ ಅಭಿವೃದ್ಧಿ ವಿಷಯದ ಕುರಿತು ಡಾ.ಶಶಿಶೇಖರರೆಡ್ಡಿ ಹಾಗೂ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಡಾ.ಅಮೃತಾ ಕಟಕೆ ವಿಷಯ ಮಂಡಿಸಿದರು.