ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವುದು ಯುವಜನರ ಹೊಣೆ: ಶಾಸಕ ಸಿದ್ದು ಸವದಿ
Preserving and nurturing folk art and culture is the responsibility of the youth: MLA Siddu Savadi
ಲೋಕದರ್ಶನ ವರದಿ
ಮಹಾಲಿಂಗಪುರ, ಆ.10 : ಆಧುನಿಕ ಯುಗದಲ್ಲಿ ಯುವಜನರು ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್‌ಆ್ಯಪ್, ಇನ್ಸ್ಟಾಗ್ರಾಂ, ಟೆಲಿಗ್ರಾಂ ಸೇರಿದಂತೆ ಮೊಬೈಲ್ ಬಳಕೆಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವುದರಿಂದ ಮೂಲ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಮರೆಯುವಂತಾಗಿದೆ. ಹಿರಿಯರು ನೀಡಿರುವ ಅಮೂಲ್ಯ ಜಾನಪದ ಪರಂಪರೆಯನ್ನು ಸಂರಕ್ಷಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವ ಗುರುತರ ಜವಾಬ್ದಾರಿ ಇಂದಿನ ಯುವಜನರ ಮೇಲಿದೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಮಹಾಲಿಂಗಪುರದ ಶ್ರೀ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟೆ, ರಬಕವಿ-ಬನಹಟ್ಟಿ ತಾಲೂಕು ಘಟಕ ಹಾಗೂ ಮಹಾಲಿಂಗಪುರ ವಲಯ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನೂತನ ತಾಲೂಕು ಹಾಗೂ ವಲಯ ಘಟಕಗಳ ಉದ್ಘಾಟನೆ ಮತ್ತು ವಿಶ್ವ ಬುಡಕಟ್ಟು ದಿನಾಚರಣೆ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆ ಅನೇಕ ಸಂಕಷ್ಟಗಳನ್ನು ಮೆಟ್ಟಿ ಇಂದಿಗೂ ಸಮಾಜದಲ್ಲಿ ಗಟ್ಟಿಯಾಗಿ ಉಳಿದಿದೆ. ಹಿರಿಯರು ನೀಡಿರುವ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಜಾನಪದ ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ಯುವಜನರಿಗೆ ತಿಳಿಸುವ ಮೂಲಕ ಅವುಗಳ ಉಳಿವಿಗೆ ಶ್ರಮಿಸಬೇಕು ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಮಾತನಾಡಿ, ವಿಶ್ವ ಬುಡಕಟ್ಟು ಜನರು ಈ ನೆಲದ ಮೂಲ ನಿವಾಸಿಗಳಾಗಿದ್ದು, ತಮ್ಮದೇ ಆದ ವಿಶಿಷ್ಟ ಜೀವನಶೈಲಿ ಹೊಂದಿದ್ದಾರೆ. ಕರ್ನಾಟಕದಲ್ಲಿ ಸುಮಾರು 12 ಲಕ್ಷ ಬುಡಕಟ್ಟು ಜನರಿದ್ದು, ಸೋಲಿಗರು, ಸಿದ್ದಿ, ಜೇನು ಕುರುಬ, ಯರವ, ಕೊರಗ ಸೇರಿದಂತೆ ಅನೇಕ ಬುಡಕಟ್ಟು ಸಮುದಾಯಗಳು ತಮ್ಮ ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಬಂದಿವೆ ಎಂದರು.
ಸೈದಾಪುರದ ಪ.ಪೂ. ಮಾತೋಶ್ರೀ ವಿದ್ಯಾವತಿ ತಾಯಿಯವರು ಮಾತನಾಡಿ, ಹಿಂದಿನ ಕಾಲದಲ್ಲಿ ಶಾಲಾ ಶಿಕ್ಷಣ ಪಡೆಯದೇ ಜಾನಪದ ಕಲೆಗಳನ್ನು ತಮ್ಮದೇ ಶೈಲಿಯಲ್ಲಿ ಹಾಡಿ, ಬೆಳೆಸಿ ಬಂದ ಪರಂಪರೆ ಇಂದಿಗೂ ಮಹತ್ವದ್ದಾಗಿದೆ. ಬೀಸುವ ಕಲ್ಲಿನ ಪದಗಳು, ಮಕ್ಕಳ ಮೇಲಿನ ಹಾಡುಗಳು, ವಿವಿಧ ಜಾನಪದ ಪದಗಳು, ದೇವರ ಹಾಡುಗಳು, ಹಂತಿ ಹಾಡುಗಳು, ಭಜನಾ ಪದಗಳು ಹಾಗೂ ಜಾನಪದ ನೃತ್ಯಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಯುವ ಪೀಳಿಗೆಯು ಮೊಬೈಲ್ ಬಳಕೆಗೆ ಕಡಿವಾಣ ಹಾಕಿ ಜಾನಪದ ಕಲೆಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ತಿನ ನೂತನ ರಬಕವಿ-ಬನಹಟ್ಟಿ ತಾಲೂಕು ಘಟಕ ಹಾಗೂ ಮಹಾಲಿಂಗಪುರ ವಲಯ ಘಟಕದ ಪದಾಧಿಕಾರಿಗಳಿಗೆ ಜಿಲ್ಲಾ ಅಧ್ಯಕ್ಷ ಡಿ.ಎಂ. ಸಾಹುಕಾರ್ ಅವರು ಪದಪತ್ರ ವಿತರಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.
ತಾಲೂಕು ಅಧ್ಯಕ್ಷ ಮಹೇಶ್ ಇಟಕಣವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಎಂ.ಎಂ. ಹೊಸಮನಿ, ಶಂಕರಗೌಡ ಪಾಟೀಲ, ಅಲ್ಲಪ್ಪ ಗುಂಜಿಗಾಂವಿ, ಪಂಡಿತ ಬಡಿಗೇರ್, ಆರ.ಬಿ. ನಂಬಿವಾಲೆ, ಡಾ. ಎಸ್.ಕೆ. ಬಂಗಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪತ್ರಕರ್ತ ಲಕ್ಷ್ಮಣ ಕಿಶೋರ್ ನಿರೂಪಿಸಿದರು. ಹುಮಾಯೂನ್ ಸುತಾರ ಸ್ವಾಗತಿಸಿ ವಂದಿಸಿದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 