ವಿಜಯನಗರ ಜಿಲ್ಲೆಯಲ್ಲಿ ಭವ್ಯ ಕಂಠೀರವ ಸ್ಟುಡಿಯೋ ನಿರ್ಮಾಣಕ್ಕೆ ಸಿದ್ಧತೆ
Preparations underway for the construction of a grand Kanteerava Studio in Vijayanagara district
ಹೊಸಪೇಟೆ, ಆ.6: ಕನ್ನಡ ಚಲನಚಿತ್ರರಂಗದ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪ ಭವ್ಯ ಕಂಠೀರವ ಸ್ಟುಡಿಯೋ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದೆ. ಸ್ಟುಡಿಯೋ ನಿರ್ಮಾಣಕ್ಕಾಗಿ ಸರ್ಕಾರಿ ಜಮೀನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಅಂತಿಮ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮಹಬೂಬ್ ಪಾಷಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಠೀರವ ಸ್ಟುಡಿಯೋದ 60ನೇ ವರ್ಷದ ಅಂಗವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲೂ ಸ್ಟುಡಿಯೋ ವಿಸ್ತರಣೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು.
ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಸಮೀಪದ ಕಣವಿಹಳ್ಳಿ ಗ್ರಾಮದ ಸರ್ವೆ ನಂ. 65/1ರಲ್ಲಿ ಇರುವ ಸರ್ಕಾರಿ ಜಮೀನನ್ನು ಸ್ಟುಡಿಯೋ ನಿರ್ಮಾಣಕ್ಕೆ ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕನಿಷ್ಠ 25 ಎಕರೆ ಜಾಗವನ್ನು ಮೀಸಲಿಡುವಂತೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಉತ್ತಮ ಸಂಪರ್ಕ ವ್ಯವಸ್ಥೆ ಇರುವುದರಿಂದ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹಾಗೂ ಸ್ಥಳಾಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ಹೊಸ ಸ್ಟುಡಿಯೋಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಈ ಭಾಗದ ಕಲಾವಿದರು, ತಂತ್ರಜ್ಞರು ಮತ್ತು ನಿರ್ದೇಶಕರಿಗೆ ತಮ್ಮ ಪ್ರದೇಶದಲ್ಲೇ ಹೆಚ್ಚಿನ ಉದ್ಯೋಗ ಹಾಗೂ ಅವಕಾಶಗಳು ದೊರೆಯಲಿವೆ ಎಂದು ತಿಳಿಸಿದರು.
ವಿಜಯನಗರ ಜಿಲ್ಲೆಯ ಹಂಪಿ, ತುಂಗಭದ್ರಾ ಜಲಾಶಯ ಸೇರಿದಂತೆ ಬಾದಾಮಿ, ಐಹೊಳೆ, ಪಟ್ಟದಕಲ್ಲು ಮೊದಲಾದ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳಿಗೆ ಸಮೀಪದಲ್ಲಿರುವುದರಿಂದ ಹೊರಾಂಗಣ ಚಿತ್ರೀಕರಣಕ್ಕೂ ಈ ಸ್ಟುಡಿಯೋ ಪ್ರಮುಖ ಕೇಂದ್ರವಾಗಲಿದೆ ಎಂದರು.
ಸಿನಿಮಾಗಳಷ್ಟೇ ಅಲ್ಲದೆ, ವೆಬ್ ಸರಣಿಗಳು, ದೂರದರ್ಶನ ಧಾರಾವಾಹಿಗಳು, ರಿಯಾಲಿಟಿ ಶೋಗಳು ಹಾಗೂ ಇತರೆ ಮನರಂಜನಾ ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ಅಗತ್ಯವಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಸ್ಟುಡಿಯೋದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಿದೆ ಎಂದು ಹೇಳಿದರು.
ಜಮೀನು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಯೋಜನಾ ವರದಿ ಸಿದ್ಧಪಡಿಸಿ ಕಾಮಗಾರಿ ಆರಂಭಿಸಲಾಗುವುದು. ಕಾಮಗಾರಿ ಆರಂಭವಾದ ಬಳಿಕ ಸ್ಟುಡಿಯೋ ನಿರ್ಮಾಣ ಪೂರ್ಣಗೊಳ್ಳಲು ಸುಮಾರು ಎರಡು ವರ್ಷಗಳ ಅವಧಿ ಬೇಕಾಗಬಹುದು ಎಂದು ಮಹಬೂಬ್ ಪಾಷಾ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಮಾತನಾಡಿ, ಸ್ಟುಡಿಯೋ ನಿರ್ಮಾಣಕ್ಕೆ ಅಗತ್ಯವಿರುವ 25 ಎಕರೆ ಜಾಗವನ್ನು ಗುರುತಿಸಲಾಗಿದೆ. ಜಿಲ್ಲಾಡಳಿತದ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಅಂತಿಮ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 