ಗರ್ಭಿಣಿ ಸ್ತ್ರೀಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು: ಡಾ.ಹನುಮಂತಪ್ಪ
Pregnant women should undergo regular health check-ups: Dr. Hanumanthappa
ಬಳ್ಳಾರಿ 24: ಗರ್ಭಿಣಿ ಸ್ತ್ರೀಯರಿಗೆ ಪ್ರತಿ ತಿಂಗಳು 9ನೇ ಮತ್ತು 24ನೇ ತಾರೀಖಿನಂದು ಗಂಡಾಂತರ ಗರ್ಭಿಣಿಯರ ಆರೋಗ್ಯ ತಪಾಸಣೆ ಕೈಗೊಳ್ಳುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಎಲ್ಲಾ ಗರ್ಭೀಣಿ ಸ್ತ್ರೀಯರು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಹೇಳಿದರು.
ಸೋಮವಾರ, ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ ಹಿನ್ನಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಗನಕಲ್ಲು, ಸಮುದಾಯ ಆರೋಗ್ಯ ಕೇಂದ್ರ ಮೋಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಯರ‌್ರಗುಡಿಗೆ ಭೇಟಿ ನೀಡಿ ಪರೀಶೀಲಿಸಿ ಅವರು ಮಾತನಾಡಿದರು.ಸಾಮಾನ್ಯವಾಗಿ 12 ವಾರದ ಒಳಗೆ ಗರ್ಭಿಣಿ ಎಂದು ತಿಳಿದ ದಿನವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸುವ ಮೂಲಕ ತಾಯಿ ಕಾರ್ಡ್‌ನಲ್ಲಿ ತಮ್ಮ ಎಲ್ಲಾ ಮಾಹಿತಿ ಒದಗಿಸಬೇಕು. ಇಲಾಖೆಯಡಿ ವೈದ್ಯರ ಸೂಚನೆಯಂತೆ ಪ್ರತಿ ತಿಂಗಳು ತೂಕ, ರಕ್ತದ ಪ್ರಮಾಣ ಹಾಗೂ ಇತರೆ ಅಗತ್ಯ ಪರೀಕ್ಷೆಗಳನ್ನು ಮಾಡಿಸುವುದರಿಂದ ಹೆರಿಗೆ ಸಮಯದಲ್ಲಿ ಅನಗತ್ಯ ಒತ್ತಡ ಉಂಟಾಗದಂತೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಪ್ರತಿ ತಿಂಗಳು 24 ನೇಯ ತಾರೀಖಿನಂದು ಎಲ್ಲಾ ಗರ್ಭಿಣಿ ಸ್ತ್ರೀಯರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಮುಖ್ಯವಾಗಿ ಗಂಡಾಂತರ ಗರ್ಭಿಣಿಯರು (ಚೊಚ್ಚಲು ಗರ್ಭಿಣಿ, ಎತ್ತರ ಕಡಿಮೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿ-ಜವಳಿ ಗರ್ಭಿಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್) ಎಂದು ಗುರ್ತಿಸಿದ ನಂತರ ನಿರ್ಲಕ್ಷಿಸುವಂತಿಲ್ಲ ಎಂದು ಮನವರಿಕೆ ಮಾಡಿದರು.
ತೀವ್ರ ರಕ್ತಹೀನತೆಯಂತಹ ಸನ್ನಿವೇಶದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆ ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ ಮಾಡಬೇಕು. ಸುಧಾರಣೆಯಾಗದಿದ್ದಲ್ಲಿ ತಜ್ಞರ ಬಳಿ ತಪ್ಪದೇ ತೆರಳಬೇಕು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸಬೇಕು. ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ್-ಟಿ, ನಿರೋಧ ಬಳಸಲು ಸಲಹೆ ಮಾಡಿದರು.
ವೈದ್ಯರು ಎಲ್ಲಾ ಗರ್ಭಿಣಿಯರ ತಾಯಿಕಾರ್ಡ್ ಪರೀಶೀಲಿಸಿ ಗೆಸ್ಟೋಸಿಸ್ ಸ್ಕೋರ್ ಬಗ್ಗೆ ಪರೀಶೀಲಿಸಲು ಹಾಗೂ ತಾಯಿಕಾರ್ಡ್‌ನಲ್ಲಿ ಗರ್ಭಿಣಿಯ ಆರೋಗ್ಯ ತಪಾಸಣೆ ಮಾಹಿತಿಯನ್ನು ತುಂಬಲು ವೈದ್ಯರಿಗೆ ಸೂಚಿಸಿದರು.
ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದರ ಜೊತೆಗೆ ವೈದ್ಯರ ಸಲಹೆಯಂತೆ ಉಚಿತವಾಗಿ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಟ 180 ಹಾಗೂ ಒಂದು ವೇಳೆ ರಕ್ತಹೀನತೆಯ ಪ್ರಮಾಣ ತೀವ್ರವಾಗಿದ್ದಲ್ಲಿ ದಿನಕ್ಕೆ 2 ರಂತೆ 360 ಮಾತ್ರೆಗಳನ್ನು 6 ತಿಂಗಳ ಅವಧಿಯಲ್ಲಿ ಸೇವಿಸಲು ಮತ್ತು ಇದರ ಜೊತೆಯಲ್ಲಿ ದೈಹಿಕವಾಗಿ ಸದೃಢವಾಗಿರಲು ಕ್ಯಾಲ್ಸಿಯಮ್ ಮಾತ್ರೆಗಳನ್ನು ಸಹ ನುಂಗಲು ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ.ರೇವಣಸಿದ್ದಪ್ಪ, ಡಾ.ಭಾರತಿ, ಡಾ.ಶರತ್‌ಚಂದ್ರ, ಡಾ.ಸೈಯದ ಹಫೀಜ ಸೇರಿದಂತೆ ಶುಶ್ರೂಷಣಾಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ ವರ್ಗದವರು, ತಾಯಂದಿರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 