ಬೆಂಗಳೂರು, ಸೆ 18 ಭಾರತ ದೇಶ ಕೈಗಾರಿಕೆಯಲ್ಲಿ ಮುಂದಿದ್ದು, ಈ ಅಭಿವೃದ್ಧಿಗೆ ಕರ್ನಾಟಕ ಹೆಚ್ಚು ಬಲವನ್ನು ತುಂಬಿದೆ. ರಾಜ್ಯ ಸರಕಾರ ಶೀಘ್ರವೇ ನೂತನ ಕೈಗಾರಿಕಾ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕರಡು ಪ್ರತಿಯನ್ನು ಸಿದ್ಧಪಡಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ನಗರದಲ್ಲಿಂದು ವಿದೇಶಿ ರಾಯಭಾರಿಗಳು ಹಾಗೂ ವಿದೇಶಿ ಹೂಡಿಕೆದಾರರು, ಉದ್ಯಮಿಗಳೊಂದಿಗೆ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆಯಲ್ಲಿ ವಹಿಸಿ ಅವರು ಮಾತನಾಡಿದರು.
ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನ ಹೊಂದಿದೆ. ಮುಂದಿನ ದಿನಗಳಲ್ಲಿ ವಿದೇಶ ನೇರ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನ ತರುವತ್ತ ಸ್ನೇಹಪರ ವಾತಾವರಣವನ್ನು ರಾಜ್ಯದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಕ್ಕೆಂದು ನೂತನ ಕೈಗಾರಿಕಾ ನೀತಿಯನ್ನು ಸಿದ್ಧಪಡಿಸಲಾಗುತ್ತಿದೆ. ಈ ನೀತಿಯಲ್ಲಿ ಹಿಂದುಳಿದ ಜಿಲ್ಲೆಗಳು, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಆಟೋಮೊಬೈಲ್ ಕ್ಷೇತ್ರ ಕುಸಿತದ ಬಗ್ಗೆ ಆತಂಕ ಮೂಡಿದೆ. ಕರ್ನಾಟಕದಲ್ಲಿ ಆಟೋಮೊಬೈಲ್ ಕ್ಷೇತ್ರವನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ. ಕೈಗಾರಿಕೋದ್ಯಮಿಗಳಿಗೆ ಭೂಮಿ ಸ್ವಾಧೀನ ಹಾಗೂ ಸುಲಲಿತವಾಗಿ ಉದ್ಯಮ ನಡೆಸಲು ನಮ್ಮ ಸರಕಾರ ಸಂಪೂರ್ಣ ಸಹಕಾರ ನೀಡುವ ರೀತಿಯಲ್ಲಿ ನೀತಿಯನ್ನು ಸಡಿಲ ಮಾಡಲಾಗುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಉದ್ಯಮ ನಡೆಸಲು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆದಾರರಿಗೆ ಬೇಕಾದ ಸ್ನೇಹಮಯ ವಾತಾವರಣ ನಿರ್ಮಾಣ ಮಾಡಿಕೊಡುವ ಹೊಣೆಗಾರಿಕೆ ನಮ್ಮ ಸರಕಾರದ ಮೇಲಿದೆ ಎಂದರು.
ಈ ವೇಳೆ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಇರುವ ವಾತಾವರಣ, ಸೌಲಭ್ಯ, ವಿನಾಯಿತಿ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಬಳಿಕ ಮಾತನಾಡಿದ ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ದೇಶದ ಆರ್ಥಿಕತೆ ಬೆಳವಣಿಗೆಗೆ ಕರ್ನಾಟಕದ ಪಾಲು ಹೆಚ್ಚಿದೆ. ಕೈಗಾರಿಕೆಯಲ್ಲಿನ ಪ್ರತಿ ವಲಯಗಳಿಗೂ ಪ್ರಾಮುಖ್ಯತೆ ನೀಡಲು ಪ್ರತ್ಯೇಕವಾಗಿ ಕ್ಲಸ್ಟರ್ ಡೆವಲಪ್ಮೆಂಟ್ ಪ್ರೋಗ್ರಾಮ್ ನನ್ನು ಪರಿಚಯಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಕಾನ್ಸುಲೇಟ್ ಆಫ್ ಫೆಡರಲ್ ರಿಪಬ್ಲಿಕ್ ಆಫ್ ಜನರಲ್, ಕಾನ್ಸುಲೇಟ್ ಜೆನರಲ್ ಆಫ್ ಇಸ್ರೇಲ್, ಕಾನ್ಸಲ್ ಜೆನರಲ್ ಆಫ್ ಸ್ವಿಜರ್ಲ್ಯಾಂಡ್, ಕಾನ್ಸಲ್ ಆಫ್ ಜಪಾನ್, ಡೆನ್ಮಾರ್ಕ್,ಕೆನಡಾ ಟ್ರೇಡ್ ಕಮಿಷನರ್, ಮಾಲ್ಡ್ವೀಸ್ , ಸ್ಪೈನ್ ಇತರೆ ದೇಶದ ರಾಯಭಾರಿಗಳು ಪಾಲ್ಗೊಂಡಿದ್ದರು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ಇಲಾಖೆ ನಿರ್ದೇಶಕರು ಅಧಿಕಾರಿಗಳು ಉಪಸ್ಥಿತರಿದ್ದರು.