ಮುಂಗಾರು ಪೂರ್ವ ಕೃಷಿ ಪರಿಕರ ಮಾರಾಟಗಾರರ ಸಭೆ ಹಾಗೂ ಯೂರಿಯಾ ವಿತರಣಾ ತಂತ್ರಾಂಶದ ಕುರಿತು ಜಾಗೃತಿ ಕಾರ್ಯಕ್ರಮ

ಮುಂಗಾರು ಪೂರ್ವ ಕೃಷಿ ಪರಿಕರ ಮಾರಾಟಗಾರರ ಸಭೆ ಹಾಗೂ ಯೂರಿಯಾ ವಿತರಣಾ ತಂತ್ರಾಂಶದ ಕುರಿತು ಜಾಗೃತಿ ಕಾರ್ಯಕ್ರಮ Pre-monsoon agricultural implements vendors' meeting and awareness program on urea distribution soft

ಲೋಕದರ್ಶನ ವರದಿ 

ಗದಗ  7:   ಕೃಷಿ ಸಂಶೋಧನಾ ಕೇಂದ್ರ, ಗದಗದಲ್ಲಿ ದಿ: 6-4-2026 ರಂದು   ಮುಂಗಾರು ಪೂರ್ವ ಕೃಷಿಪರಿಕರ ಮಾರಾಟಗಾರರ ಸಭೆ ಹಾಗೂ ಯುರಿಯಾ ವಿತರಣಾ ತಂತ್ರಾಂಶದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಂಟಿ ಕೃಷಿ ನಿರ್ದೇಶಕಿ  ಶ್ರೀಮತಿ ಚೇತನಾ ಪಾಟೀಲ ಅವರು ಮಾತನಾಡಿ  ರೈತರು ರಸಗೊಬ್ಬರ ಖರೀದಿಸಲು ಇನ್ನು ಮುಂದೆ ಎಪ್‌.ಐ.ಡಿ  ಸಂಖ್ಯೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಅಲ್ಲದೇ, ತಮ್ಮ ಎಲ್ಲಾ ಜಮೀನುಗಳನ್ನು ಸಹ ಎಪ್‌.ಐ.ಡಿಗೆ  ಕಡ್ಡಾಯವಾಗಿ ಜೋಡಿಸಿರಬೇಕು.

ಈ ಕುರಿತು ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ರೈತನ ಹಿಡುವಳಿ ಹಾಗೂ ಬೆಳೆ ಆಧಾರದ ಮೇಲೆ ರಸಗೊಬ್ಬರವನ್ನು ಕೆ ಕಿಸಾನ್ ತಂತ್ರಜ್ಞಾನ ಹಾಗೂ ಕಓಖ ಮಶೀನ್ ಮೂಲಕವೇ ವಿತರಣೆ ಮಾಡಲಾಗುವುದು. ಇದರಿಂದ, ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಲು ಹಾಗೂ ರೈತರು ಅನವಶ್ಯಕವಾಗಿ ಹೆಚ್ಚುವರಿ ರಸಗೊಬ್ಬರ ಬಳಸದಂತೆ ನಿಯಂತ್ರಿಸಿ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು ಸಹಾಯವಾಗುವ ಬಗ್ಗೆ ತಿಳಿಸಿದರು. 

 ಪ್ರತಿಯೊಬ್ಬ ರಸಗೊಬ್ಬರ ವ್ಯಾಪಾರಸ್ಥರು ಒಬ್ಬ ಕೃಷಿ ವಿಜ್ಞಾನಿಯಂತೆ ರೈತರಿಗೆ ತಿಳುವಳಿಕೆ ನೀಡಿ ದ್ರವ ರೂಪದ ರಸಗೊಬ್ಬರಗಳನ್ನು ಹಾಗೂ ಕಾಂಪ್ಲೆಕ್ಸ್‌ ರೂಪದ ರಸಗೊಬ್ಬರಗಳನ್ನು ಬಳಸಲು ಮನವರಿಕೆ ಮಾಡಿಕೊಡುವಂತೆ ಸೂಚಿಸಿದರು. ನಿಗದಿಪಡಿಸಿದ ಬೆಲೆೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ, ರಸಗೊಬ್ಬರದ ದರ ಹಾಗೂ ದಾಸ್ತಾನನ್ನು ಸಾರ್ವಜನಿಕರಿಗೆ ಕಾಣುವ ಹಾಗೆ ಪ್ರದರ್ಶಿಸುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ತಪ್ಪಿದ್ದಲ್ಲಿ ಪರವಾನಿಗೆ ಅಮಾನತು ಅಥವಾ ರದ್ದು ಮಾಡುವ ಎಚ್ಚರಿಕೆ ನೀಡಿದರು. 

ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ಪ್ರಸ್ತಾವಿಕವಾಗಿ ಮಾತನಾಡಿ, ಈ ಹಿಂದಿನ 2025ರ ಮುಂಗಾರು ಹಂಗಾಮಿನ ಅತೀವೃಷ್ಟಿ ಸಮಯದಲ್ಲಿ ರಸಗೊಬ್ಬರಗಳ ಅಧಿಕ ಬೇಡಿಕೆ ಎದುರಾದಾಗ ತಾಲೂಕಿನ ರಸಗೊಬ್ಬರ ವ್ಯಾಪಾರಸ್ಥರು ಇಲಾಖೆಯೊಂದಿಗೆ ಸಹಕರಿಸಿ ಪರಸ್ಥಿತಿ ನಿಭಾಯಿಸುವಲ್ಲಿ ಬಹಳ ಸಹಕಾರ ನೀಡಿದ್ದೀರಿ. ಪ್ರಸಕ್ತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುಧ್ಧಗಳ ಪರಿಣಾಮವಾಗಿ ರಸಗೊಬ್ಬರ ತಯಾರಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯೆಯವಾಗುವ ಸಾಧ್ಯತೆ ಇದೆ.

ಕೃಷಿ ಇಲಾಖೆಯು ಗೊಬ್ಬರ ತಯಾರಿಕಾ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ತಾಲೂಕಿನ ರೈತರಿಗೆ ಗೊಬ್ಬರ ಸಿಗುವಂತೆ ಪ್ರಯತ್ನಿಸುತ್ತಿದೆ. ಕಾರಣ, ತಾಲೂಕಿನ ರಸಗೊಬ್ಬರ ವ್ಯಾಪಾರಸ್ಥರು ಈ ಹಂಗಾಮಿನಲ್ಲಿಯೂ ತಮಗೆ ಲಭ್ಯವಿರುವ ರಸಗೊಬ್ಬರವನ್ನು, ವಿಶೇಷವಾಗಿ ಅದರಲ್ಲೂ ಯುರಿಯಾ ಗೊಬ್ಬರವನ್ನು ಎಫ್‌ಐಡಿ  ಆಧಾರಿತ ಯುರಿಯಾ ವಿತರಣಾ ತಂತ್ರಾಂಶವನ್ನು ಬಳಸಿ ಪಿಓಸ್  ಮಶೀನ್ ಮೂಲಕ ರೈತರ ದಾಖಲೆಗಳನ್ವಯ ನೀರ್ದೀಷ್ಟ ಮಿತಿಯಲ್ಲಿ ವಿತರಿಸಲು ಸಹಕರಿಸಿ ಎಲ್ಲ ರೈತರ ಹಿತ ಕಾಪಾಡಬೇಕು ಎಂದು ಸೂಚಿಸಿದರು. 

ಮುಖ್ಯ ಅತಿಥಿಗಳಾಗಿ ಉಪ ಕೃಷಿ ನಿರ್ದೇಶಕರಾದ ಶ್ರೀಮತಿ ಸ್ಪೂರ್ಥಿ ಜಿ.ಎಸ್, ಜಿಲ್ಲಾ ವಿಚಕ್ಷಣಾ ಅಧಿಕಾರಿ ಶ್ರೀಮತಿ ಮೇಘನಾ ನಾಡಗೀರ್, ಕೃಷಿ ಸಂಶೋಧನಾ ಕೇಂದ್ರ, ಗದಗ ಮುಖ್ಯಸ್ಥೆ ಶ್ರೀಮತಿ ಕಲಾವತಿ ಹಾಗೂ ಕೃಷಿಪರಿಕರ ಮಾರಾಟಗಾರರ ಸಂಘದ ಉಪಾಧ್ಯಕ್ಷರಾದ ಪ್ರಕಾಶ ಕಗದಾಳ ಭಾಗವಹಿಸಿದ್ದರು. 

ರಸಗೊಬ್ಬರ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಸಂಜಯ್ ರೊದ್ದಂ ಮಾತನಾಡಿ, ಕೃಷಿ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಎಲ್ಲ ವಿತರಕರು ರೈತರ ಹಿತ ಕಾಯುವಲ್ಲಿ ಇಲಾಖೆಗೆ ಸಹಕರಿಸುವುದಾಗಿ ತಿಳಿಸಿದರು.  

ಇಲಾಖೆಯ ಕೃಷಿ ಅಧಿಕಾರಿಗಳಾದ  ಸೌಮ್ಯ, ರಾಜೇಶ್ವರಿ ಹಾಗೂ ಬಸವರಾಜೇಶ್ವರಿ ಇವರು ಯುರಿಯಾ ವಿತರಣಾ ತಂತ್ರಾಶದ ಬಗ್ಗೆ ರಸಗೊಬ್ಬರ ಮಾರಾಟಗಾರರಿಗೆ ವಿವರಿಸಿದರು.   ಗದಗ ತಾಲ್ಲೂಕಿನ ಖಾಸಗಿ ಕೃಷಿ ಪರಿಕರ ಮಾರಾಟಗಾರರು, ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು ಹಾಗೂ ರೈತ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.