ಸಹಕಾರ ಸಪ್ತಾಹ ಅಂಗವಾಗಿ “ಒಬ್ಬ ಸದಸ್ಯ ಒಂದು ಸಸಿ” ಅಭಿಯಾನಕ್ಕೆ ಚಾಲನೆ

ಸಹಕಾರ ಸಪ್ತಾಹ ಅಂಗವಾಗಿ “ಒಬ್ಬ ಸದಸ್ಯ ಒಂದು ಸಸಿ” ಅಭಿಯಾನಕ್ಕೆ ಚಾಲನೆ  “One Member, One Sapling” campaign launched as part of Cooperative Week

ಲೋಕದರ್ಶನ ವರದಿ 

ಗದಗ 01:  ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್, ಕೆ.ಸಿ.ಸಿ ಬ್ಯಾಂಕ್ ಧಾರವಾಡ ಹಾಗೂ ಧಾರವಾಡ ಹಾಲು ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾದ್ಯಂತ “ಕೇಂದ್ರ ಸಹಕಾರ ಸಚಿವಾಲಯ ಪ್ರಾರಂಭಗೊಂಡು ಐದು ವರ್ಷ ಪೂರ್ಣಗೊಂಡಿರುವ ಸುಸಂದರ್ಭ”ದ ಅಂಗವಾಗಿ ಸಹಕಾರ ಸಪ್ತಾಹ ಆಚರಿಸಲಾಯಿತು.  

ಸಹಕಾರ ಸಪ್ತಾಹದ ಮೂರನೇ ದಿನದ ಅಂಗವಾಗಿ ಬುಧವಾರ ಶಿರಹಟ್ಟಿ ಪಟ್ಟಣದ ಶ್ರೀ ಸಿ.ಸಿ.ಎನ್‌. ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ನಂತರ ಶಿರಹಟ್ಟಿ ತಾಲ್ಲೂಕು ಪಂಚಾಯತ್ ಸಭಾಭವನದಲ್ಲಿ “ಶಿರಹಟ್ಟಿ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿ ನೆಡುವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  

ಕಾರ್ಯಕ್ರಮವನ್ನು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಲಿಂಗರಾಜಗೌಡ ಎಚ್‌. ಪಾಟೀಲ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಮಾಲಿನ್ಯದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ಶುದ್ಧ ಗಾಳಿ, ಶುದ್ಧ ನೀರು ಮತ್ತು ಉತ್ತಮ ಆಹಾರವು ಆರೋಗ್ಯಕರ ಜೀವನಕ್ಕೆ ಅಗತ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಸಸಿ ನೆಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ಹೇಳಿದರು.  

ಮಾಜಿ ಉಪನ್ಯಾಸಕ ಹಾಗೂ ಪರಿಸರವಾದಿ ಸಿ.ಎಸ್‌. ಅರಸನಾಳ ಮಾತನಾಡಿ, ಪ್ರಕೃತಿ ಮಾನವನ ಆಸೆಗಳನ್ನು ಪೂರೈಸಬಲ್ಲದು ಆದರೆ ದುರಾಸೆಗಳನ್ನು ಪೂರೈಸಲು ಸಾಧ್ಯವಿಲ್ಲ. ಪ್ಲಾಸ್ಟಿಕ್ ಮತ್ತು ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಗಿಡಗಳನ್ನು ಹೆಚ್ಚಾಗಿ ನೆಡುವ ಮೂಲಕ ಗ್ರಾಮ ಹಾಗೂ ಸಮಾಜವನ್ನು ಸ್ವಚ್ಛವಾಗಿಡಬೇಕು. “ಮನೆಗೊಂದು ಮರ, ಊರಿಗೊಂದು ವನ” ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ಪರಿಸರ ರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.  

ಶಿರಹಟ್ಟಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾತನಾಡಿ, ಕೇಂದ್ರ ಸಹಕಾರ ಸಚಿವಾಲಯದ ಸ್ಥಾಪನೆಯ ಉದ್ದೇಶಗಳನ್ನು ಜನರಿಗೆ ಪರಿಚಯಿಸುವುದು, ಸಹಕಾರ ಮನೋಭಾವವನ್ನು ಬಲಪಡಿಸುವುದು ಹಾಗೂ ಹಸಿರು ಪರಿಸರ ನಿರ್ಮಾಣಕ್ಕೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. “ಒಬ್ಬ ಸದಸ್ಯ ಹಿ ಒಂದು ಸಸಿ” ಎಂಬ ಸಂದೇಶದ ಮೂಲಕ ಪ್ರತಿಯೊಬ್ಬ ಸದಸ್ಯರೂ ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ಶಿರಹಟ್ಟಿ ಜನತಾ ಬಜಾರ್ ಅಧ್ಯಕ್ಷ ತಿಪ್ಪಣ್ಣ ಕಂಚಿಗೇರಿ, ಸಹಕಾರ ಅಭಿವೃದ್ಧಿ ಅಧಿಕಾರಿಗಳು, ಸಹಕಾರ ಸಂಘಗಳ ಅಧಿಕಾರಿಗಳು, ಕೆ.ಸಿ.ಸಿ ಬ್ಯಾಂಕ್ ಪ್ರತಿನಿಧಿಗಳು ಹಾಗೂ ವಿವಿಧ ಸಹಕಾರ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.