ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಮುಂಗಾರು-2026 ಅಭಿಯಾನಕ್ಕೆ ಗದಗದಲ್ಲಿ ಚಾಲನೆ
Pradhan Mantri Fasal Bima Yojana Kharif-2026 campaign launched in Gadag
ಗದಗ 27: ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಗಾಳಿ-ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗುವ ಬೆಳೆ ನಷ್ಟದಿಂದ ರೈತರನ್ನು ಆರ್ಥಿಕವಾಗಿ ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಯಲ್ಲಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ ಮುಂಗಾರು-2026 ಅಭಿಯಾನಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು.ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು, ಕೃಷಿಯು ಪ್ರಕೃತಿಯನ್ನು ಅವಲಂಬಿಸಿರುವ ವೃತ್ತಿಯಾಗಿದ್ದು, ಹವಾಮಾನ ವೈಪರೀತ್ಯದಿಂದ ರೈತರಿಗೆ ಅನೀರೀಕ್ಷಿತ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಇಂತಹ ಸಂದರ್ಭಗಳಲ್ಲಿ ರೈತರ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡುವಲ್ಲಿ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಅತ್ಯಂತ ಪರಿಣಾಮಕಾರಿ ಯೋಜನೆಯಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲ ರೈತರು ತಮ್ಮ ಬೆಳೆಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳುವ ಮೂಲಕ ಬೆಳೆ ಭದ್ರತೆಯನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಯೋಜನೆಯಡಿ ಬೆಳೆ ವಿಮೆ ಮಾಡಿಸಿಕೊಂಡರೆ ಪ್ರಕೃತಿ ವಿಕೋಪ, ಮಳೆ ಕೊರತೆ, ಅತಿಯಾದ ಮಳೆ, ಗಾಳಿ, ನೆರೆ ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗುವ ಬೆಳೆ ಹಾನಿಗೆ ವಿಮಾ ಪರಿಹಾರ ದೊರೆಯಲಿದ್ದು, ಇದು ರೈತರ ಆದಾಯದ ಸ್ಥಿರತೆ ಹಾಗೂ ಕೃಷಿ ಚಟುವಟಿಕೆಗಳ ನಿರಂತರತೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಬೆಳೆ ವಿಮೆ ಕುರಿತು ಹೆಚ್ಚಿನ ಮಾಹಿತಿ, ಅರ್ಹತೆ, ನೋಂದಣಿ ಪ್ರಕ್ರಿಯೆ ಹಾಗೂ ಕೊನೆಯ ದಿನಾಂಕ ಸೇರಿದಂತೆ ಅಗತ್ಯ ಮಾಹಿತಿಗಾಗಿ ರೈತರು ತಮ್ಮ ವ್ಯಾಪ್ತಿಯ ಕೃಷಿ ಇಲಾಖೆ ಕಚೇರಿಗಳು, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು.ಅಲ್ಲದೇ 1800 209 4980 ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ರೈತರಲ್ಲಿ ಯೋಜನೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸಿದ್ಧಪಡಿಸಿರುವ ಜಾಗೃತಿ ಕರಪತ್ರಗಳು ಹಾಗೂ ಪೋಸ್ಟರ್‌ಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು. ಜಿಲ್ಲಾದ್ಯಂತ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯ ರೈತರಿಗೆ ಯೋಜನೆಯ ಪ್ರಯೋಜನ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶ್ರೀಮತಿ ಚೇತನಾ ಪಾಟೀಲ, ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್., ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೆ., ತಾಂತ್ರಿಕ ಅಧಿಕಾರಿ ಸಂಜೀವ ಕೃಷಿ ಅಧಿಕಾರಿ ಚಿತ್ರಾ ಬಿ.ಎಂ., ವಾರ್ತಾಧಿಕಾರಿ ವಸಂತ ಮಡ್ಲೂರ, ಮಾಂತೇಶ್ ಮದ್ನೂರ, ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಇಂಡಸ್‌ಇಂಡ್ ಜನರಲ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.ಜಿಲ್ಲೆಯ ಎಲ್ಲಾ ರೈತರು ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ ಪ್ರಯೋಜನ ಪಡೆದು ಬೆಳೆಗಳಿಗೆ ವಿಮಾ ಭದ್ರತೆ ಕಲ್ಪಿಸಿಕೊಳ್ಳುವಂತೆ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಮನವಿ ಮಾಡಲಾಯಿತು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 