ಬೆಂಗಳೂರು, ಫೆ 1 : ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್, ಜನಪರ ಮತ್ತು ಅಭಿವೃದ್ಧಿ ಪರ ಬಜೆಟ್ ಆಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕೇಂದ್ರ ಕಾರ್ಯಾಲಯದಲ್ಲಿ ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ, ಅವರಿಂದ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಾಲಿನ ಬಜೆಟ್‍ನಲ್ಲಿ ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕೃಷಿ ಮಂತಾದ ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಈ ಬಜೆಟ್ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ. ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವುದಾಗಿಯೂ ಪ್ರಕಟಿಸಲಾಗಿದೆ. ಹಾಗೆಯೇ ನವೋದ್ಯಮಗಳಿಗೆ 5 ವರ್ಷಗಳ ಕಾಲ ತೆರಿಗೆ ವಿನಾಯಿತಿ ನೀಡುವ ಮೂಲಕ ದೊಡ್ಡ ಪ್ರೋತ್ಸಾಹ ನೀಡಲಾಗಿದೆ. ಇದರಿಂದ ನವೋದ್ಯಮಗಳು ದುಪ್ಪಟ್ಟು ಆಗಲಿವೆ ಎಂದು ಹೇಳಿದರು.
ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಮಾಡುವ ಕುರಿತು ಬಜೆಟ್‍ನಲ್ಲಿ ಪ್ರಸ್ತಾಪಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಹಾಗೆಯೇ ಸ್ವಚ್ಛ ಕುಡಿಯುವ ನೀರು ಪೂರೈಕೆ ಯೋಜನೆಗೆ 3 ಲಕ್ಷ 60 ಸಾವಿರ ಕೋಟಿ ರೂ. ಒದಗಿಸಲಾಗಿದೆ. ಈ ವರ್ಷ 20 ಲಕ್ಷ ಸೌರ ಶಕ್ತಿ ಚಾಲಿತ ಪಂಪ್ ಸೆಟ್ ಗಳನ್ನು ನೀಡುವ ನಿರ್ಧಾರದಿಂದ ರೈತರು ವಿದ್ಯುತ್ ಕಡಿತ ಸಮಸ್ಯೆ ಇಲ್ಲದೆ ನೆಮ್ಮದಿಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಬಹುದಾಗಿದೆ ಎಂದು ಅವರು ಹೇಳಿದರು.
18 ಸಾವಿರದ 600 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರು ಸಬರ್ಬನ್ ರೈಲು ಯೋಜನೆಯನ್ನು ಪ್ರಕಟಿಸಲಾಗಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೀಘ್ರವೇ ವಿಶೇಷ ಉದ್ದೇಶಕ ವಾಹಕ ರೂಪಿಸಲಿವೆ. ಈ ಯೋಜನೆಯಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.
ಬಜೆಟ್ ನಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸುವ ಅನೇಕ ಯೋಜನೆಗಳನ್ನು ಪ್ರಕಟಿಸಲಾಗಿದೆ. ಇದರಿಂದ ಬಂಡವಾಳ ಹೂಡಿಕೆ ಹೆಚ್ಚಾಗಲಿದೆ. ಜಾಗತಿಕ ಸವಾಲುಗಳ ನಡುವೆಯೂ ಆರ್ಥಿಕ ಉತ್ತೇಜನಕ್ಕೆ ವಿಶೇಷ ಒತ್ತು ನೀಡಿ ಸುಧಾರಣೆ ಕ್ರಮಗಳನ್ನು ಪ್ರಕಟಿಸಿರುವ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು ಎಂದು ಡಾ.ಅಶ್ವಥ್ ನಾರಾಯಣ್ ಹೇಳಿದ್ದಾರೆ.