ಹುಬ್ಬಳ್ಳಿ,ಆ 12 ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಕ್ಕೆ ನಾವು ತೊಂದರೆ ಮಾಡುವುದಿಲ್ಲ, ಪರಿಹಾರ ಕಾರ್ಯದಲ್ಲಿ ಪಕ್ಷ ರಾಜಕೀಯ ಮಾಡುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯಿಂದ ಹಾನಿಗೀಡಾದ ಕುಂದಗೋಳ ಕ್ಷೇತ್ರಕ್ಕೆ ಬೇಟಿ ನೀಡುತ್ತಿದ್ದು, ಈಗಾಗಲೇ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ ನೆರೆ ಸಂತ್ರಸ್ಥರನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳು ಉದ್ದೇಶದಿಂದ ಕ್ಷೇತ್ರಕ್ಕೆ ಬಂದಿದ್ದೇನೆ. ಪ್ರವಾಹ ಸಂದರರ್ಭದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸಹಾಯ ಹಸ್ತ ಚಾಚುವಂತೆ ಸೂಚನೆ ನೀಡಿದ್ದು ಕುಂದಗೋಳಕ್ಕೆ ಬೇಟಿ ನೀಡಿ ಬಳಿಕ ಹುಬ್ಬಳ್ಳಿ, ಬೈಲಹೊಂಗಲ, ರಾಯಚೂರು, ಕೊಪ್ಪಳ ಭಾಗ ಸೇರಿದಂತೆ ಇತರೆ ಕಡೆ ಪ್ರವಾಸ ಮಾಡಲಾಗುವುದು ಎಂದು ಅವರು ತಿಳಿಸಿದರು. ರಾಜ್ಯದ ಇತಿಹಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳಿಲ್ಲದೆ ಸ್ವಾತಂತ್ರ್ಯ ದಿನಾಚರಣೆ ವೇಳೆ ಜಿಲ್ಲೆಗಳಲ್ಲಿ ಅಧಿಕಾರಿಗಳು ಧ್ವಜಾರೋಣ ಮಾಡುತ್ತಿದ್ದಾರೆ. ಇದು ಬಿಜೆಪಿ ಸರ್ಕಾರ ಅಧಿಕಾರಿಗಳಿಗೆ ನೀಡಿದ ಕೊಡುಗೆ ಎಂದು ಅವರು ಲೇವಡಿ ಮಾಡಿದರು. ನಿನ್ನೆ ರಾಜ್ಯಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 16 ನಂತರ ದೆಹಲಿಗೆ ಬರುವಂತೆ ಮುಖ್ಯಮಂತ್ರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ 16ರ ಬಳಿಕ ಸಂಪುಟ ರಚನೆ ಬಗ್ಗೆ ಮಾತನಾಡುತ್ತಾರೆ. ರಾಷ್ಟ್ರೀಯ ಪಕ್ಷಕ್ಕೆ ರಾಜ್ಯದಲ್ಲಿ ಸಚಿವ ಸಂಪುಟ ಅಗತ್ಯತೆ ಬಗ್ಗೆ ಅವರಿವಿಲ್ಲ ಎಂದು ಅವರು ವ್ಯಂಗ್ಯವಾಡಿದರು. ಸಂತ್ರಸ್ತರಿಗೆ ನೆರವು ನೀಡುವ ಹೆಸರಲ್ಲಿ ಕೆಲವರು ಡಬ್ಬಿ ಹಿಡಿದು ನಗರಗಳಲ್ಲಿ ದೇಣಿಗೆ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಕೈಗಾರಿಕೆಗಳಲ್ಲಿ ಹಾಗೂ ಜನವಸತಿ ಪ್ರದೇಶ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಹಣ ನೀಡಬೇಕೆಂದು ಕರೆ ಮಾಡಿ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತರ ಹೆಸರಲ್ಲಿ ವಸೂಲಿ ಮಾಡುವ ಕೆಲಸ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ನೆರವು ಸಂಗ್ರಹಿಸುವವರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ತಹಶೀಲ್ದಾರ್ ಹಾಗೂ ವಿಭಾಗಾಧಿಕಾರಿಗಳಿಂದ ಅನುಮತಿ ಪಡೆದು ದೇಣಿಗೆ ಸಂಗ್ರಹಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಗಮನ ಹರಿಸಿ ಕಟ್ಟುನಿಟ್ಟಿನ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು. ರಾಜ್ಯದ 17 ಜಿಲ್ಲೆಗಳಲ್ಲಿ ನೆರೆಯಿಂದ ಅಪಾರ ಪ್ರಮಾಣದ ಆಸ್ತಿ, ಬೆಳೆ, ಮನೆಗಳು ಹಾನಿಗೀಡಾಗಿವೆ. ಕೇಂದ್ರ ಸರ್ಕಾರ ತಕ್ಷಣ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಕನಿಷ್ಟ 10,000 ಕೋಟಿ ರೂ ಪರಿಹಾರವನ್ನು ರಾಜ್ಯಕ್ಕೆ ನೀಡಬೇಕೆಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಆಗ್ರಹ ಮಾಡಿದ್ದಾರೆ.