ಬೆಂಗಳೂರು,ಸೆ 18 ಪೊಲೀಸರ ವೇತನ ಪರಿಷ್ಕರಣೆಯನ್ನು ರಾಜ್ಯ ಸರ್ಕಾರ ತಡೆಹಿಡಿದಿಲ್ಲ ಎಂದು ಗೃಹ ಸಚಿವ ಬಸವರಾಜು ಬೊಮ್ಮಾಯಿ ಸ್ಪಷ್ಟಪಡಿಸಿದರು.
ವಿಕಾಸಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಕಾರಣಗಳಿಂದಾಗಿ ಒಂದರೆಡು ದಿನ ವಿಳಂಬ ಮಾಡಲಾಗಿದೆ ಅಷ್ಟೇ. ಎರಡು ದಿನಗಳ ಒಳಗಾಗಿ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಹೊಸ ವೇತನ ಪರಿಷ್ಕರಣಾ ಪಟ್ಟಿ ಆದೇಶವನ್ನು ಪ್ರಕಟವಾಗುತ್ತದೆ ಎಂದು ತಿಳಿಸಿದರು.
ನೆರೆ ಪರಿಹಾರ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ಕಾಂಗ್ರೆಸ್ ಶಾಸಕರ ಪ್ರತಿಭಟನೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಕಾಂಗ್ರೆಸ್ ಶಾಸಕರಿಗೆ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇಲ್ಲ. 2009 ರಲ್ಲೂ ಪ್ರವಾಹ ಸಂಭವಿಸಿತ್ತು.ಆಗ ಕಾಂಗ್ರೆಸ್ ನಾಯಕರು ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಅವರು ರಾಜ್ಯದಲ್ಲಿ ಸತತ ಬರ ಇದ್ದರೂ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರಲಿಲ್ಲ. ಪರಿಹಾರ ವಿತರಣೆಯನ್ನೂ ಮಾಡಿರಲಿಲ್ಲ.ಈಗ ಪ್ರತಿಭಟನೆಗೆ ಬಂದಿದ್ದಾರೆ ಎಂದು ಕಿಡಿ ಕಾರಿದರು.
ನೆರೆ ಹಾವಳಿ ಕುರಿತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ.ಕೆಲವೇ ದಿನದಲ್ಲಿ ಪರಿಹಾರ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಇಷ್ಟರಲ್ಲೇ ಕೇಂದ್ರ ಸರ್ಕಾರ ನೆರೆ ಪರಿಹಾರದ ಹಣ ಬಿಡುಗಡೆ ಮಾಡೇ ಮಾಡುತ್ತದೆ ಆತುರ ಏಕೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರವೂ ಸಹ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಯಾವುದೇ ಕೊರತೆ ಮಾಡಿಲ್ಲ ಎಂದು ತಿಳಿಸಿದರು.
ಸಂಜೆಯೊಳಗಾಗಿ ಟ್ರಾಫಿಕ್ ದಂಡ ಪ್ರಮಾಣವನ್ನು ಇಳಿಕೆ ಮಾಡಿ ಆದೇಶ ಹೊರಡಿಸಲಾಗುತ್ತದೆ.
ಕೇರಳ ಮಾದರಿಯಲ್ಲೇ ರಾಜ್ಯದಲ್ಲೂ ದಂಡದ ಪ್ರಮಾಣ ಕಡಿಮೆಯಾಗುತ್ತದೆ.ಎಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬೇಕು ಎಂಬುದನ್ನು ಈಗ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಪ್ರಕಟಿಸುತ್ತೇವೆ ಎಂದು ತಿಳಿಸಿದರು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದರು.