ಸಾಗರ ಮಾರಿಜಾತ್ರೆಯಲ್ಲಿ ಪೊಲೀಸ್ ದರ್ಭಾರ್ ಟೈಟ್ ಸೆಕ್ಯೂರಿಟಿ ಹೆಸರಿನಲ್ಲಿ ಭಕ್ತರ ಭಕ್ತಿಗೂ ಖಾಕಿ ಅಡ್ಡಗಾಲು
Police Darbar tight security at Sagar Mari Jatre, devotees face khaki barriers
ಲೋಕದರ್ಶನ ವರದಿ
ಸಾಗರ ಮಾರಿಜಾತ್ರೆಯಲ್ಲಿ ಪೊಲೀಸ್ ದರ್ಭಾರ್ ಟೈಟ್ ಸೆಕ್ಯೂರಿಟಿ ಹೆಸರಿನಲ್ಲಿ ಭಕ್ತರ ಭಕ್ತಿಗೂ ಖಾಕಿ ಅಡ್ಡಗಾಲು
ವರದಿ : ಜಿ. ನಾಗೇಶ್ ಸಾಗರ
ಸಾಗರ 04: ಇಲ್ಲಿನ ಮಾರಿಕಾಂಬಾ ಜಾತ್ರೆಗೆ 400 ವರ್ಷಗಳ ಇತಿಹಾಸವಿದೆ. ಜನರೇ ಮಾರಿಜಾತ್ರೆ ನಡೆಸುತ್ತಾ 100 ವರ್ಷ ಕಳೆದಿದೆ. ಆದರೆ ಹಿಂದಿನ ಯಾವ ವರ್ಷಗಳಲ್ಲೂ ಇಲ್ಲದಷ್ಟು ಬಿಗಿ ಪೊಲೀಸ್ ಬಂದೋಬಸ್ತು, ಹೆಜ್ಜೆಹೆಜ್ಜೆಗೂ ಭಕ್ತರನ್ನು ಅನುಮಾನದಿಂದ ನೋಡಿ ಅವಮಾನಿಸುವ ನಡೆ ಜನಾಕ್ರೋಶಕ್ಕೆ ಕಾರಣವಾಗಿದ್ದು, ಜನಸಮೂಹದ ಜಾತ್ರೆಯಾಗಬೇಕಾಗಿದ್ದ ಮಾರಿಕಾಂಬಾ ದೇವಿ ಜಾತ್ರೆ ಅಧಿಕಾರಿಗಳು ಮತ್ತು ಪೊಲೀಸ್ ಜಾತ್ರೆಯಾಗಿ ಪರಿವರ್ತನೆಯಾಗಿರುವುದಕ್ಕೆ ಹಲವರು ತೀವೃ ವಿರೋಧ ವ್ಯಕ್ತಪಡಿಸಿದ್ದಾರೆ.
ಮೂರು ಲಕ್ಷ ಜನರಿಂದ ದರ್ಶನ : ಸಾಗರ ಮಾರಿಕಾಂಬಾ ದೇವಿ ಜಾತ್ರೆ ಮಂಗಳವಾರದಿಂದ ಅಧಿಕೃತವಾಗಿ ಪ್ರಾರಂಭಗೊಂಡಿದೆ. ಒಂದು ಅಂದಾಜಿನ ಪ್ರಕಾರ ಮಂಗಳವಾರ ಒಂದೇ ದಿನ ಸುಮಾರು 2 ರಿಂದ 3 ಲಕ್ಷದಷ್ಟು ಜನರು ಅಮ್ಮನವರನ್ನು ದರ್ಶಿಸಿದ್ದಾರೆ. ಸೋಮವಾರ ರಾತ್ರಿಯಿಂದಲೆ ಅಮ್ಮನವರ ದರ್ಶನಕ್ಕೆ ನಿಂತ ಜನರಿಗೆ ಮಂಗಳವಾರ ಬೆಳಿಗ್ಗೆ 4ರಿಂದ ದರ್ಶನ ಸಿಕ್ಕಿದ್ದು ರಾತ್ರಿ 11ರವರೆಗೆ ನಿರಂತರವಾಗಿ ಅಮ್ಮನವರ ದರ್ಶನಭಾಗ್ಯ ಎಲ್ಲರಿಗೂ ಸಿಕ್ಕಿದೆ.
ಪ್ರತಿವರ್ಷ ಸಾವಿರಾರು ರೂಪಾಯಿ ಖರ್ಚು ಮಾಡಿ ಪಾಸ್ ಖರೀದಿ ಮಾಡಿ ಅಮ್ಮನವರ ದರ್ಶನ ಮಾಡುತ್ತಿದ್ದವರಿಗೆ ಈ ಬಾರಿ ತೀವೃ ನಿರಾಶೆ ಕಾದಿತ್ತು. ಪೊಲೀಸರು ಪಾಸ್ ಇದ್ದವರನ್ನು ಸಹ ಒಳಗೆ ಬಿಡದೆ ಸತಾಯಿಸಿದ್ದಾರೆ. ಮಾಮೂಲಿ ಸಾಲಿನಲ್ಲಿ ಬಂದವರು ಸುಲಭವಾಗಿ ದೇವರ ದರ್ಶನ ಪಡೆದಿದ್ದರೇ, ಪಾಸ್ ಪಡೆದವರು ಅರ್ಧ ದಿನ ದರ್ಶನಕ್ಕಾಗಿ ಕಾಯುವ ಸ್ಥಿತಿ ಪೊಲೀಸರಿಂದ ಉಂಟಾಗಿದೆ.
ಎದೆಗೆ ಕೈಹಾಕಿ ದೂಡುವ ಆರಕ್ಷಕರು : ದೇವಿ ದರ್ಶನಕ್ಕೆ ಸೋಮವಾರ ಪೊಲೀಸರು ಬಿಗು ಕಾವಲು ಮಾಡಿದ್ದರ ಬಗ್ಗೆ ವ್ಯಾಪಕ ಟೀಕೆ, ಬಿಜೆಪಿ ಪ್ರತಿಭಟನೆ, ಸಮಿತಿಯ ಧರಣಿ ಎಲ್ಲವೂ ನಡೆದಿತ್ತು. ಮಂಗಳವಾರವಾದರೂ ಪೊಲೀಸರು ತಮ್ಮ ವರ್ತನೆ ತಿದ್ದಿಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು. ಮಂಗಳವಾರ ಪೊಲೀಸರ ದರ್ಭಾರು ಇನ್ನೂ ಜೋರಾಗಿತ್ತು. ಮಂಗಳವಾರ ಅಮ್ಮನವರಿಗೆ ಪೂಜೆ ಸಲ್ಲಿಸಿ ಭಂಡಾರ ಒಯ್ದು ಕುರಿ ಕಡಿಯುವವರಿಗೆ ಪೊಲೀಸರು ದರ್ಶನಕ್ಕೆ ತೀವ್ರ ತೊಂದರೆ ಕೊಟ್ಟಿದ್ದಾರೆ. ದೇವಸ್ಥಾನದ ಹಿಂಭಾಗದಿಂದ ಪಾಸ್ ಹಿಡಿದು ದರ್ಶನಕ್ಕೆ ಬಂದವರ ಎದೆಗೆ ಕೈಹಾಕಿ ಹಿಂದೆ ಹೋಗುವಂತೆ ದೂಡಿದ್ದಾರೆ. ಈ ಸಂದರ್ಭದಲ್ಲಿ ಸಣ್ಣಪುಟ್ಟ ತಳ್ಳಾಟ ಸಹ ನಡೆದಿದೆ. ಪಾಸ್ ತೋರಿಸಿದರೂ ಪೊಲೀಸರು ಕ್ಯಾರೆ ಎನ್ನದೆ ಭಕ್ತರನ್ನು ಅವಮಾನಿಸಿದ್ದಾರೆ ಎನ್ನಲಾಗುತ್ತಿದೆ.
ಸಮಿತಿಯವರಿಗೆ ತಡೆ : ಜನರನ್ನು ಕಾನೂನು ವ್ಯವಸ್ಥೆ ದೃಷ್ಟಿಯಿಂದ ತಡೆಯುವುದು ಮಾಮೂಲಿ. ಆದರೆ ಪೊಲೀಸರು ಸೋಮವಾರ ತಹಶೀಲ್ದಾರ್ ರಶ್ಮಿ ಅವರನ್ನು ಸಹ ದೇವಸ್ಥಾನದ ಒಳಗೆ ಹೋಗಲು ಬಿಡದೆ ತಡೆದಿದ್ದಾರೆ. ಇದರ ಜೊತೆಗೆ ಸಮಿತಿಯವರು ತಮ್ಮ ಕೆಲಸ ಕಾರ್ಯಗಳಿಗಾಗಿ ದೇವಸ್ಥಾನದ ಕಚೇರಿಗೆ ಹೋಗಲು ತಮ್ಮ ಬಳಿ ಇರುವ ಪಾಸ್ ತೋರಿಸಿದರೂ ಅವಕಾಶ ಕೊಡಲಿಲ್ಲ. ಮಂಗಳವಾರ ವಸ್ತು ಪ್ರದರ್ಶನ ಸಮಿತಿ ಸಂಚಾಲಕ ತಾರಾಮೂರ್ತಿ ದೇವಿಯ ಭಂಡಾರ ತೆಗೆದುಕೊಳ್ಳಲು ಹೋದಾಗ ಅವರನ್ನು ತಳ್ಳಿದ್ದಾರೆ. ತಾರಾಮೂರ್ತಿ ತಮ್ಮ ಬಳಿ ಇದ್ದ ಪಾಸ್, ಬ್ಯಾಗ್ ಇನ್ನಿತರೆಯನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇರೆಬೇರೆ ಸಮಿತಿ ಸಂಚಾಲಕರು ಸಹ ಪಾಸ್ ತೋರಿಸಿದರೂ ಅಮ್ಮನವರ ಹತ್ತಿರ ಹೋಗಲು ಬಿಡದೆ ಹೊರತಳ್ಳುತ್ತಿರುವ ಪೊಲೀಸ್ ವರ್ತನೆಗೆ ಬೇಸತ್ತು ಹೋಗಿದ್ದಾರೆ. ಪತ್ರಕರ್ತರು ಅಧಿಕೃತ ಪ್ರೆಸ್‌ಕಾರ್ಡ್ ತೋರಿಸಿದರೂ ಒಳಗೆ ಬಿಡುವುದಿಲ್ಲ ಎಂದು ವಾಪಾಸ್ ಕಳಿಸುತ್ತಿದ್ದಾರೆ.
ಯಾವ ವರ್ಷವೂ ಇಲ್ಲದ ಸೆಕ್ಯೂರಿಟಿ ಯಾಕೆ : ಹಿಂದಿನ ಯಾವ ವರ್ಷವೂ ಇಷ್ಟೊಂದು ಸೆಕ್ಯೂರಿಟಿ ಇರಲಿಲ್ಲ. ಕಾಗೋಡು ತಿಮ್ಮಪ್ಪ, ಗೋಪಾಲಕೃಷ್ಣ ಬೇಳೂರು ಹಿಂದಿನ ಎರಡು ಬಾರಿ, ಹರತಾಳು ಹಾಲಪ್ಪ ಒಂದು ಬಾರಿ ಶಾಸಕರಾಗಿದ್ದಾಗ ಇಷ್ಟೊಂದು ಬಿಗು ಸೆಕ್ಯೂರಿಟಿ ವಿಧಿಸಿ ದೇವಿ ಜಾತ್ರೆ ಮಾಡಿರಲಿಲ್ಲ. ಆದರೆ ಈ ವರ್ಷ 500 ಪೊಲೀಸ್, ಗೃಹರಕ್ಷಕ ಸಿಬ್ಬಂದಿಗಳನ್ನು ಹಾಕಿ ಜಾತ್ರೆ ನಡೆಸುವ ಅಗತ್ಯ ಏನಿತ್ತು ಎನ್ನುವುದು ಸದ್ಯದ ಪ್ರಶ್ನೆ. ಹಿಂದೆಲ್ಲಾ 100 ಜನರೂ ಇಲ್ಲದೆ ಜಾತ್ರೆ ವ್ಯವಸ್ಥಿತವಾಗಿ ನಡೆಯುತಿತ್ತು. ಈ ಬಾರಿ ಶಾಸಕರು ಏಕೆ ಇಷ್ಟೊಂದು ಟೈಟ್ ಸೆಕ್ಯೂರಿಟಿ ವಿಧಿಸಿದ್ದಾರೆ. ಶಾಸಕರು ಬಂದೋಬಸ್ತು ಕೊಡಿ ಎಂದಿದ್ದನ್ನೇ ಪೊಲೀಸ್ ಇಲಾಖೆ ತಪ್ಪಾಗಿ ಭಾವಿಸಿ ಇಷ್ಟೊಂದು ಪೊಲೀಸ್ ನೇಮಿಸಿ ಜನರನ್ನು ಭಯಬೀಳಿಸುತ್ತಿದೆಯಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಬುಧವಾರ ಶಾಸಕರು ದಾವಣಗೆರೆ ವಿಭಾಗದ ಐಜಿಯವರು ಸಾಗರಕ್ಕೆ ಬಂದಾಗ ಈ ಸಂಬಂಧ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನಾದರೂ ಪರಿಸ್ಥಿತಿ ಸುಧಾರಿಸುತ್ತದೆಯಾ, ಪೊಲೀಸರಿಗೆ ಮಾರಿಕಾಂಬಾ ಭಕ್ತರ ಮೇಲೆ ಕರುಣೆ ಬರುತ್ತದೆಯಾ ಕಾದು ನೋಡಬೇಕಾಗಿದೆ.
ಇನ್ನೂ ಏಳುದಿನಗಳ ಕಾಲ ಜಾತ್ರೆ ನಡೆಯಲಿದೆ. ರಾಜ್ಯದ ಬೇರೆಬೇರೆ ಭಾಗಗಳಿಂದ ಅಮ್ಮನವರ ದರ್ಶನ ಮಾಡಲು ಭಕ್ತರು ಸಾಗರಕ್ಕೆ ಬರುತ್ತಾರೆ. ರಕ್ಷಣೆ ಹೆಸರಿನಲ್ಲಿ ಜನರನ್ನು ಪೊಲೀಸ್ ತೆಕ್ಕೆಗೆ ತಳ್ಳದಂತೆ ಶಾಸಕರೂ ಸೂಕ್ತ ಸೂಚನೆ ನೀಡಬೇಕು. ಸೋಮವಾರ ಅಮ್ಮನವರ ಮೆರವಣಿಗೆ ಸಂದರ್ಭದಲ್ಲಿ ಸಹ ನಾಲ್ಕಾರು ಜನರಿಗೆ ಪೊಲೀಸ್ ಬೆತ್ತದ ರುಚಿ ಸಿಕ್ಕಿದೆ. ಅದು ಮತ್ತೆ ಮರುಕಳಿಸದಂತೆ ಶಾಸಕರು ಗಮನ ಹರಿಸಬೇಕು ಎನ್ನುವುದು ಭಕ್ತರ ಮನವಿಯಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 