ಕವಿ, ಸಾಹಿತಿ, ಲೇಖಕ, ಚಿಂತಕ ಹಾಗೂ ವಾಗ್ಮಿಗಳು... ಇತ್ತೀಚೆಗೆ ಇವುಗಳು ಅರ್ಥ ಕಳೆದುಕೊಂಡ ಪದಗಳು...!

ವಿಜಯನಗರ ಸಾಮ್ರಾಜ್ಯ ಎನ್ನುವುದು ಕರ್ನಾಟಕದ ಇತಿಹಾಸದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡ ರಾಜಮನೆತನ. ಹಕ್ಕಬುಕ್ಕರಿಂದ ಸಾಮ್ರಾಜ್ಯ ನಿರ್ಮಾಣವಾಗಿದ್ದರೂ ಕೂಡ ಅದನ್ನು ಸುವರ್ಣಯುಗಕ್ಕೆ ಕೊಂಡೊಯ್ದ ಕೀರ್ತಿ ಕೃಷ್ಣ ದೇವರಾಯನಿಗೆ ಸಲ್ಲುತ್ತದೆ. ಕಾರಣ ಆತ ತನ್ನ ಆಡಳಿತದಲ್ಲಿ ಕಲೆ ಹಾಗೂ ಸಾಹಿತ್ಯಕ್ಕೆ ಅಪಾರವಾದ ಮನ್ನಣೆ ಕೊಟ್ಟಿದ್ದನು. ಅಲ್ಲಸಾನಿ ಪೆದ್ದನ, ನಂದಿ ತಿಮ್ಮನ, ಮಾದಯ್ಯಗಿರಿ ಮಲ್ಲನ, ಧೂರ್ಜತಿ, ಅಯ್ಯಲರಾಜು ರಾಮಭದ್ರಡು, ಪಿಂಗಳಿ ಸೂರನ, ರಾಮಭೂಷಣ ಹಾಗೂ ತೆನಾಲಿ ರಾಮಕೃಷ್ಣ ಎನ್ನುವಂತ ಎಂಟು ಜನ ಕವಿಗಳಿಗೆ ಆಶ್ರಯದಾತನಾಗಿದ್ದ. ಅವರ ಪಾಂಡಿತ್ಯದಿಂದಾಗಿ ಅವರು ಅಷ್ಟದಿಗ್ಗಜರು ಎಂದು ಖ್ಯಾತಿಯನ್ನು ಪಡೆದುಕೊಂಡರು. ಮಾತ್ರವಲ್ಲ ಭಾರತದ ಸಾಹಿತ್ಯ ಚರಿತ್ರೆಗೆ ಮಹತ್ತರವಾದ ಕೊಡುಗೆಯನ್ನು ನೀಡುವಲ್ಲಿ ಯಶಸ್ವಿಯಾದರು. ಇಂದು ನಾವೇಲ್ಲ ಭಾರತದ ಷೇಕ್ಸಪೀಯರ್ ಎಂದು ಸಂಬೋಧಿಸುವ ಕವಿರತ್ನ ಕಾಳಿದಾಸನಿಗೆ ಭೋಜರಾಜನು ಆಶ್ರಯ ನೀಡಿದನು. ಅದರ ಪರಿಣಾಮವಾಗಿ ‘ಅಭಿಜ್ಞಾನ ಶಾಕುಂತಲೆ’, ‘ಮೇಘಧೂತ’ದಂತಹ ಮಹಾನ್ ಕಾವ್ಯಗಳು ಈ ಜಗತ್ತಿಗೆ ಸಮರೆ​‍್ಣಯಾದವು. ಚಾಲುಕ್ಯ ದೊರೆಗಳ ಆಶ್ರಯ ದೊರೆತ ಪರಿಣಾಮವಾಗಿ ಪಂಪನಿಂದ ‘ಪಂಪ ಭಾರತ’ ಸೃಷ್ಠಿಯಾಯಿತು. ಶ್ರೀವಿಜಯನಿಗೆ ಅಮೋಘವರ್ಷ ನೃಪತುಂಗ ಆಶ್ರಯದಾತನಾಗಿದ್ದರಿಂದ ‘ಕವಿರಾಜ ಮಾರ್ಗ’ ರಚನೆಯಾಗಿ ಕನ್ನಡದ ಚರಿತ್ರೆಯನ್ನು ಅರಿತುಕೊಳ್ಳುವುದಕ್ಕೆ ನೆರವಾಯಿತು. ಇವರೆಲ್ಲ ರಾಜಾಶ್ರಯ ಪಡೆದ ಕವಿಗಳಾಗಿದ್ದರು. ಆದರೆ ರಾಜಾಶ್ರಯ ಪಡೆದಿದ್ದಾರೆ ಎನ್ನುವ ಕಾರಣಕ್ಕಾಗಿ ಅವರಿಗೆ ಮರ್ಯಾದೆ ದೊರೆಯುತ್ತಿತ್ತು ಎನ್ನುವುದಕ್ಕಿಂತ ಅವರು ಜನರ ಜೀವನಾಡಿ, ಸುಂದರ ಸಾಲುಗಳ ಹಂದರ ಹಾಕುವ ಕವಿ ಎನ್ನುವ ಕಾರಣಕ್ಕಾಗಿ ಮರ್ಯಾದೆ ಪಡೆದುಕೊಳ್ಳುತ್ತಿದ್ದರು. ಅವರೂ ಅಷ್ಟೇ ಈ ನಾಡು ನುಡಿಯನ್ನು ಶ್ರೀಮಂತಗೊಳಿಸಿಕೊಳ್ಳುವುದಕ್ಕಾಗಿ ತಮ್ಮ ಶ್ರಮವಹಿಸಿ ಬರೆಯುತ್ತಿದ್ದರೇ ಹೊರತು ಪ್ರಚಾರಕ್ಕಾಗಿ ಅಲ್ಲ. ಬೆಳಗುವ ಸೂರ್ಯನಿಗೇಕೆ ಪ್ರಚಾರ ಅಲ್ಲವೇ? ಜಗತ್ತು ಬದಲಾಗುತ್ತ ಸಾಗಿತು. ಆಡಳಿತ ವ್ಯವಸ್ಥೆ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ ಹೆಜ್ಜೆ ಹಾಕಲು ಪ್ರಾರಂಭಿಸಿತು. ಹಂತ ಹಂತವಾಗಿ ಎಲ್ಲವೂ ಪರಿವರ್ತನೆಯಾಯಿತು. ಆಗ ಕವಿಗಳ ಜೊತೆಯಲ್ಲಿ ಸಾಹಿತಿಗಳು ಎನ್ನುವ ಹೆಸರೂ ಕೂಡ ಪ್ರವರ್ಧಮಾನಕ್ಕೆ ಬಂದಿತು. ರಾಜಾಶ್ರಯದ ಕವಿಗಳು ಮಾಯವಾಗುತ್ತಿದ್ದಂತೆ ಭಾವಾಶ್ರಯದ ಕವಿಗಳು ಹುಟ್ಟಿಕೊಂಡರು. ಅವರು ಅರ್ಧಕ್ಕೆ ನಿಲ್ಲಿಸಿ ಹೋದ ಕಾರ್ಯವನ್ನು ಮುಂದುವರಿಸಿಕೊಂಡು ಹೊರಟರು. ಜಾತಿ ಧರ್ಮಗಳ ಹಂಗು ತೊರೆದು, ನಾಡು ನುಡಿಗಾಗಿ ಜೀವ ಬಸಿದು, ಎದೆಯ ಭಾವಗಳನ್ನು ಬೆಸೆದು ಕವಿತೆಗಳನ್ನು ಕಟ್ಟಿದರು. ಸಾಹಿತ್ಯ ವಲಯವನ್ನು ಶ್ರೀಮಂತಗೊಳಿಸಿದರು. ಆಗ ಕವಿ, ಸಾಹಿತಿ ಎಂದರೆ ಅದೆಷ್ಟು ಗೌರವಿತ್ತು. ವೇದಿಕೆಯ ಮೇಲೆ ಅವರಿದ್ದರೆ ಆ ವೇದಿಕೆಯೇ ಕಳೆಗಟ್ಟುತ್ತಿತ್ತು. ಅಲ್ಲಿ ಅವನೊಬ್ಬ ಕವಿಯಾಗಿದ್ದರೆ ಆ ಕವಿಯ ಮಾತುಗಳನ್ನಾಲಿಸಲು ಸಾವಿರಾರು ಕಿವಿಗಳು ಜೊತೆಯಾಗುತ್ತಿದ್ದವು. ಪ್ರೇಕ್ಷಕರು ಸಹ ಅವರ ಮಾತಿಗಾಗಿ ಚಾತಕ ಪಕ್ಷಿಯ ಹಾಗೆ ಕುಳಿತಿರುತ್ತಿದ್ದರು. ಈಗ ಎಲ್ಲವೂ ಬದಲಾಗಿದೆ ಕವಿಗೊಂದು ಜಾತಿ, ಅವನು ಬರೆಯುವ ಕವಿತೆಗೊಂದು ಪಂಥ, ಅವನ ಭಾವನೆಗೊಂದು ಧರ್ಮ, ಅವನ ಬೆಂಬಲಕ್ಕೊಂದು ಪಕ್ಷ ಹುಟ್ಟಿಕೊಂಡಿದೆ. ಈ ದಶಕದಲ್ಲಂತೂ ಅತ್ಯಂತ ಅರ್ಥಹೀನ ಪದಗಳೆಂದರೆ ಕವಿ, ಸಾಹಿತಿ, ಲೇಖಕ, ಚಿಂತಕ ಹಾಗೂ ವಾಗ್ಮಿ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. 

ಈ ಲೇಖನ ಬರೆಯುವಾಗ ನನಗಾದ ನೋವು ಅಷ್ಟಿಷ್ಟಲ್ಲ. ಬರವಣಿಗೆಯಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು, ಅಕ್ಷರಗಳ ಮೂಲಕ ಅನ್ನ ಸಂಪಾದಿಸಬೇಕು ಎಂದು ಹೊರಟ ನಾನು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆದುಕೊಂಡೆ. ಆದರೆ ಕಲಿತ ಮೇಲೆಯೇ ಅದರ ನಿಜ ಸ್ವರೂಪ ಏನೆಂದು ನನಗೆ ಅರ್ಥವಾಗಿದ್ದು. ಇತ್ತೀಚೆಗಂತೂ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳೆಲ್ಲ ಬದಲಾಗಿ ಬಿಟ್ಟಿವೆ. ಬರೆಯುವ ಅಕ್ಷರಗಳೆಲ್ಲವೂ ಬಣ್ಣ ಬಣ್ಣಗೊಂಡಿವೆ. ಕೆಲವು ಅಕ್ಷರಗಳಿಗೆ ಹಸಿರು ಬಣ್ಣ, ಮತ್ತೆ ಕೆಲವು ಕೇಸರಿ ಬಣ್ಣ, ಇನ್ನೂ ಕೆಲವು ನೀಲಿ ಬಣ್ಣದಿಂದ ಕೂಡಿವೆ. ಆದರೆ ಭಾವನೆಗಳು ಮಾತ್ರ ಬಣ್ಣಗೆಟ್ಟಿವೆ. ಈ ಕಾರಣದಿಂದಾಗಿಯೇ ಅಕ್ಷರ ಲೋಕ ಇಂದು ತನ್ನತನವನ್ನು ಕಳೆದುಕೊಂಡು ಶೋಕ ಪಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಇಲ್ಲದ ಜಾತಿ ಹಾಗೂ ಧರ್ಮವನ್ನು ಸ್ವಾತಂತ್ರ್ಯ ಬಂದ ನಂತರ ಅಂಟಿಸಿ ಅವರನ್ನು ಧರ್ಮದ ಹಾಗೂ ಜಾತಿಯ ಬ್ರ್ಯಾಂಡ್ ಮಾಡಲಾಯಿತು. ಸಮಾನತೆಗಾಗಿ ಅನುಭವ ಮಂಟಪ ಸ್ಥಾಪಿಸಿ, ಎಲ್ಲ ಜಾತಿಯವರನ್ನು ಒಂದೇ ಸೂರಿನಡಿ ಸೇರಿಸಿ, ಮಾನವ ಧರ್ಮ ದೊಡ್ಡದು ಎಂದು ಸಾರಿದ ಬಸವಣ್ಣನೆಂಬ ಆ ಪುಣ್ಯಾತ್ಮನಿಗೆ ಇಂದು ಒಂದು ಜಾತಿ ಇಲ್ಲ ಹಾಗೂ ಧರ್ಮವಿಲ್ಲ. ಆದರೆ ಅವರ ಅನುಭವ ಮಂಟಪದಲ್ಲಿ ಜೊತೆಯಾದ ಅಮರಗಣಂಗಳಿಗೆ ಮಾತ್ರ ಜಾತಿ ಇದೆ. ಅದೇ ಕಾರಣಕ್ಕಾಗಿ ತಮ್ಮ ಜಾತಿಯಲ್ಲಿ ಹುಟ್ಟಿದ ವಚನಕಾರನಿಗೆ ಆ ಜಾತಿಯವರಿಂದ ಬಹು ಪರಾಕ. ಬಸವಣ್ಣನಿಗೆ ಮಾತ್ರ ಡೋಂಟ್ ಕೇರ್‌. ಆದರೆ ಹೆಸರಿಗೆ ಮಾತ್ರ ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಆದರೆ ಅದರೊಳಗಡೆ ಬರೀ ರಾಜಕೀಯದ ದೊಂಬರಾಟ. 

ಮೇಲೆ ಉಲ್ಲೇಖಿಸಿದ ಕವಿಗಳು ಈ ನಾಡಿನ ಏಳ್ಗೆಗೆ ಭಾಷೆಯ ಶ್ರೀಮಂತಿಕೆಯನ್ನು ಬೆಳೆಸುವುದಕ್ಕೆ ಮುಂದಾದರು. ಅದೇ ಕಾರಣಕ್ಕಾಗಿ ಅವರನ್ನು ನಾವು ಇಂದಿಗೂ ಸ್ಮರಿಸುತ್ತೇವೆ. ‘ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವಾ ಬಾರಾ’ ಎಂದು ಹೇಳಿದ ಕುವೆಂಪು, ‘ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಹ ಲೋಹದದಿರ ಉತ್ತುಂಗದ ನಿಲುಕನಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ’ ಎಂದು ಕನ್ನಡಮ್ಮನಿಗೆ ಅಕ್ಷರದಾರತಿ ಮಾಡಿದ ಕೆ.ಎಸ್‌.ನಿಸಾರ ಅಹ್ಮದ, ‘ಒಂದೇ ಒಂದೇ ಒಂದೇ ಕರ್ನಾಟಕ ಒಂದೇ, ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೆ’ ಎಂದು ಅಖಂಡ ಕರ್ನಾಟಕದ ಕುರಿತು ಹಾಡಿ ಹೊಗಳಿದ ವರಕವಿ ಬೇಂದ್ರೆ, ‘ನರಕಕ್ಕಿಳ್ಸಿ, ನಾಲ್ಗೆನ್ ಸೀಳ್ಸಿ, ಬಾಯ್ ಹೊಲ್ಸಿ ಹಾಕ್ಸುದ್ರು ಮೂಗ್ನಲ್ಲಿ ಕನ್ನಡ್ ಪದವಾಡ್ತಿನಿ’ ಎಂದು ಕನ್ನಡ ಭಾಷೆಯ ಅಭಿಮಾನ ವ್ಯಕ್ತ ಪಡಿಸಿದ ಜಿ.ಪಿ.ರಾಜರತ್ನಂ, ‘ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ ಹಿಮಾಲಯಕೆ ಮುತ್ತನಿಡುವ ಬೆತ್ತೆರೆಗಳ ಗಾನದಲ್ಲಿ, ಬಯಲ ತುಂಬ ಹಸಿರ ರಾಶಿ ಉಕ್ಕಿ ಹರಿವ ನದಿಗಳಲ್ಲಿ, ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರಘೋಷ ಮೊಳಗುವಲ್ಲಿ, ಕಣ್ಣು ಬೇರೆ ನೋಟ ಒಂದೇ, ನಾವು ಭಾರತೀಯರು’ ಎಂದು ಭಾರತದ ಹಿರಿಮೆ ಸಾರಿದ ಕೆ.ಎಸ್‌.ನರಸಿಂಹಸ್ವಾಮಿ, ‘ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ ಎಂದು ಏಕೀಕರಣಕ್ಕೆ ಹೊಸ ಮಾರ್ಗ ಹಾಕಿದ ಹುಯಲಗೋಳ ನಾರಾಯಣ ರಾಯರು, ‘ಕನ್ನಡ ನೆಲದ ಫುಲ್ಲೆನಗೆ ಪಾವನ ತುಲಸಿ, ಕನ್ನಡ ನೆಲದ ನೀರ್ವೊನಲೆನಗೆ ದೇವನದಿ, ಕನ್ನಡ ನೆಲದ ಕಲ್ಲೆಮಗೆ ಶಾಲಗ್ರಾಮ ಶಿಲೆ’ ಎಂದು ಕನ್ನಡ ನಾಡಿನ ಕುರಿತು ಹೆಮ್ಮೆ ಮೂಡಿಸಿದ ಸಾಲಿ ರಾಮಚಂದ್ರರಾಯರು, ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಎಂದು ವಾಸ್ತವಕ್ಕೆ ಸಾಹಿತ್ಯದ ಕನ್ನಡಿ ಹಿಡಿದ ಡಾ.ಸಿದ್ಧಲಿಂಗಯ್ಯನವರು ‘ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ’ ಎಂದು ಹಾಡಿದ ಚೆಂಬಳಕಿನ ಕವಿ ಚನ್ನವೀರ ಕಣವಿ ಅವರು ಸೇರಿದಂತೆ ನೂರಾರು ಜನ ಕವಿಗಳನ್ನು ಸಾಹಿತಿಗಳನ್ನು ನಾವು ನೋಡುತ್ತೇವೆ. ಅವರ ಬರವಣಿಗೆಯನ್ನು ಹೃದಯ ತುಂಬಿ ಓದುತ್ತೇವೆ. ಆದರೆ ನಾವೆಲ್ಲ ಅವರನ್ನು ಇಷ್ಟ ಪಟ್ಟಿದ್ದು ಇಂದಿಗೂ ಕೂಡ ಅಭಿಮಾನಿಸಿದ್ದು ಅವರು ಬರೆದ ಸಾಹಿತ್ಯದಿಂದಲೇ ಹೊರತು ಅವರ ಜಾತಿ ಇಂದಲ್ಲ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಕವಿಗಳಿಗೂ ಹಾಗೂ ಸಾಹಿತಿಗಳಿಗೂ ಒಂದೊಂದು ಜಾತಿ ಧರ್ಮ ಇದೆ ಎನ್ನುವುದು ನನಗೆ ಇತ್ತೀಚೆಗೆ ಅರ್ಥವಾಗುತ್ತಿದೆ. ಅದರಲ್ಲೂ ಈ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ನಡೆಯುತ್ತಿರುವ ಹಾರಾಟಗಳು, ಹೋರಾಟಗಳು, ಧರ್ಮದ ದೊಂಬರಾಟಗಳು, ಜಾತಿಯ ಕಿತ್ತಾಟಗಳು, ರಾಜಕೀಯ ಮೇಲಾಟಗಳು, ಅಧಿಕಾದ ಆರ್ಭಟಗಳು, ಸೈದ್ಧಾಂತಿಕ ಸಂಘರ್ಷಗಳು ಹಾಗೂ ಎಡಬಲದ ಬಡಿದಾಟಗಳನ್ನು ನೋಡಿದಾಗ ಇಲ್ಲಿ ಸಾಹಿತಿ, ಲೇಖಕ, ಕವಿ ಎನ್ನುವ ಅನ್ವರ್ಥಕ ನಾಮಗಳು ಕೇವಲ ವ್ಯರ್ಥ. ಕಾರಣ ಎಲ್ಲರ ಎದೆಯಲ್ಲಿಯೂ ಕೂಡ ಬರೀ ಸ್ವಾರ್ಥ ತುಂಬಿದೆ ಎನ್ನುವುದು ಗೊತ್ತಾಗುತ್ತಿದೆ. 

ನನಗೊಬ್ಬ ಪುಣ್ಯಾತ್ಮ ಹೇಳಿದ ಮಾತಿಂದು ನೆನಪಾಗುತ್ತಿದೆ. “ನೀವು ಏನೇ ಬರೀರಿ, ಏನೇ ಬಡಕೋರಿ. ಆದರೆ ನಿಮ್ಮ ಜಾತಿಯನ್ನು ಮುಂದಿಟ್ಟು ನಡೆಯದೇ ಹೋದರೆ ನಿಮ್ಮನ್ನು ಯಾರೂ ಗುರುತಿಸುವುದೂ ಇಲ್ಲ, ನಿಮ್ಮನ್ಯಾರು ಬೆಳೆಸುವುದೂ ಇಲ್ಲ”. ಅಂದು ಆತ ಹೇಳಿದಾಗ ಹರಿಯೋ ನೀರಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಎಂದು ಹೇಳಿದ್ದೆ. ಆದರೆ ಹರಿಯೋ ನದಿಯನ್ನೇ ಆಣೆಕಟ್ಟು ಕಟ್ಟಿ ಬಂಧಿಸುವ ಈ ಜನಗಳು ಇನ್ನು ಜಾತಿ ಧರ್ಮವೆಂಬ ಆಣೆಕಟ್ಟಿನಲ್ಲಿ ಪ್ರತಿಭೆಗಳನ್ನು ಬಂಧಿಸಿಡುವುದು ಯಾವ ಲೆಕ್ಕ. ನನಗೆ ಈಗ ಈ ಸತ್ಯದ ಅರಿವಾಗಿದೆ. ಆದರೂ ಮನಸ್ಸು ಜಾತಿಯ ಬೆಂಬಲದಿಂದಾಗಲಿ ಧರ್ಮದ ಏಣಿಯನ್ನು ಬಳಸಿಕೊಂಡಾಗಲಿ ಮೇಲೆ ಬರುವುದಕ್ಕೆ ಒಪ್ಪುತ್ತಿಲ್ಲ. ನನ್ನ ಕಥೆ ಹಾಗಿರಲಿ. ವಾಸ್ತವದ ವಿಚಾರಕ್ಕೆ ಬರೋಣ, ಈ ಪಠ್ಯಪುಸ್ತಕ ಪರಿಷ್ಕರಣೆಯ ವಿಚಾರದಲ್ಲಿ ಏನೆಲ್ಲ ಆವಾಂತರಗಳು ನಡೆಯುತ್ತಿವೆ ಎನ್ನುವುದನ್ನು ನೋಡಿದಾಗ ಈ ದೇಶದ ಸ್ಥಿತಿ ಹೇಗಿದೆ ಎನ್ನುವುದು ನಮ್ಮ ಕಣ್ಣಿಗೆ ರಾಚುತ್ತದೆ. ಮೊದ ಮೊದಲು ಧರ್ಮದ ಹೆಸರಲ್ಲಿ ಆರಂಭವಾದ ಈ ವಿಚಾರ ನಂತರದಲ್ಲಿ ಸೈದ್ಧಾಂತಿಕ ಸಮರಕ್ಕೆ ತಿರುಗಿತು. ಅಷ್ಟರಲ್ಲಿಯೇ ರಾಜಕೀಯ ಒಳ ತೂರಿಸಿಕೊಂಡು ಬಂದು ಉರಿವ ಬೆಂಕಿಗೆ ಪೆಟ್ರೋಲ್ ಸುರಿಯಿತು. ಮೊದಲೇ ಧಗ ಧಗಿಸುವ ಬೆಂಕಿಯಲ್ಲಿ ಜಾತಿಯು ತನ್ನ ಚಳಿ ಕಾಯಿಸಿಕೊಳ್ಳುವುದಕ್ಕೆ ಶುರುವಿಟ್ಟುಕೊಂಡಿತು. ಪರ ವಿರೋಧದ ಕೆಸರೆರೆಚಾಟಗಳ ಮಧ್ಯದಲ್ಲಿ ಇದ್ದವರು ಇರದವರು ಸೇರಿ ಅವರ ಅವರ ಬರವಣಿಗೆಯನ್ನು ವಾಪಸ್ ಪಡೆಯುವ ಹಾಗೂ ಅಧಿಕಾರಗಳನ್ನು ಬಿಟ್ಟುಕೊಡುವ ಕಾರ್ಯಕ್ಕೆ ಅಣಿಯಾದರು. ನಿಜ ಹೇಳಬೇಕೆಂದರೆ ಇವರೆಲ್ಲರ ವಿಚಾರಗಳೇ ಗೊಂದಲ ಮೂಡಿಸುತ್ತಿದೆ. ಪಠ್ಯ ಪುಸ್ತಕ ಬ್ರಾಹ್ಮಣೀಕರಣವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಅಂದರೆ ಅಳವಡಿಸಿದ ಪಠ್ಯಗಳಲ್ಲಿ ಬಹಳಷ್ಟು ಜನ ಲೇಖಕರು ಬ್ರಾಹ್ಮಣರಾಗಿದ್ದಾರೆ ಎನ್ನುವ ವಾದ ಇದೆ. ಆದರೆ ನನ್ನ ವಾದ ಇಷ್ಟೇ. ಬರೆದವನಿಗೆ ಒಂದು ಜಾತಿ ಅಥವಾ ಧರ್ಮ ಇರಬಹುದು. ಆದರೆ ಅವರಿಂದ ಹೊರ ಹೊಮ್ಮಿದ ಸಾಹಿತ್ಯಕ್ಕೆ ಯಾವ ಜಾತಿ? ಯಾವ ಧರ್ಮ?. ಆದರೆ ಇಲ್ಲಿ ಈ ಜಾತಿ ಧರ್ಮದ ಸಂಘರ್ಷದ ಫಲವೇ ಇಂದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎನ್ನವುದು ಮಾತ್ರ ಸುಳ್ಳಲ್ಲ. 

ಮೊದಲೇ ಈ ದೇಶದಲ್ಲಿ ಕವಿ, ಸಾಹಿತಿ, ಲೇಖಕ, ಚಿಂತಕ ಹಾಗೂ ವಾಗ್ಮಿ ಎನ್ನುವ ಪದಗಳು ಅರ್ಥ ಕಳೆದುಕೊಂಡಿವೆ. ಆಮಂತ್ರಣ ಪತ್ರಿಕೆಗಳಲ್ಲಿ ಅವರ ಗುರುತು ಹೇಳಿಕೊಳ್ಳುವುದಕ್ಕೆ ಇವುಗಳು ಬಳಕೆಯಾಗುತ್ತಿರುವುದು ದೌರ್ಭಾಗ್ಯದ ವಿಷಯವಾಗಿದೆ. ನಾನೊಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ವೇದಿಕೆಯ ಮೇಲೆ ನಿಂತು ಭಾಷಣ ಮಾಡುವುದಕ್ಕೆ ಮುಂದಾದ ವ್ಯಕ್ತಿಯ ಹೆಸರನ್ನು ಹೇಳುವಾಗ ಅವರು ಖ್ಯಾತ ಸಾಹಿತಿಗಳು, ಪ್ರಕರ ವಾಗ್ಮಿಗಳು ಮತ್ತು ಈ ನಾಡಿನ ಶ್ರೇಷ್ಠ ಚಿಂತಕರು ಎಂದು ಸಂಬೋಧಿಸಿದ್ದು ನನಗೆ ದಿಗ್ಭ್ರಮೆ ಮೂಡಿಸಿತು. ಕಾರ್ಯಕ್ರಮದ ನಂತರ “ಸರ್ ತಮ್ಮ ಪರಿಚಯವಾಗಿ ಬಹಳ ಖುಷಿ ಆಯಿತು. ನಾನೂ ಆಗಗ ಏನೇನೊ ಬರೆಯುತ್ತಿರುತ್ತಿರುತ್ತೇನೆ. ತಮ್ಮ ಕೃತಿಗಳನ್ನು ನನಗೆ ಕೊಟ್ಟರೆ ಓದುತ್ತೇನೆ” ಎಂದು ಕೇಳಿದೆ. ಅದಕ್ಕೆ ಆ ವ್ಯಕ್ತಿ, “ಇಲ್ಲ ಸಾರ್ ನಾನು ಯಾವ ಕೃತಿಯನ್ನು ಬರೆದಿಲ್ಲ. ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತೇನೆ. ಕವಿಗೋಷ್ಠಿ ಇದ್ದಾಗ ನಾನು ಮುಖ್ಯ ಅಥಿತಿಯಾಗಿ ಭಾಗವಹಿಸುತ್ತೇನೆ. ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ ಮಾಡುತ್ತೇನೆ. ಸದಾ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದರಿಂದ ನನಗೆ ಬರೆಯುವುದಕ್ಕೆ ಸಮಯ ಸಿಕ್ಕಿಲ್ಲ ಸರ್‌. ಆದರೆ ನಾನು ಸಾಹಿತಿ ಎನ್ನುವ ಕಾರಣಕ್ಕಾಗಿ ಸಾಕಷ್ಟು ಪ್ರಶಸ್ತಿ ಸಂದಿವೆ” ಎಂದರು. ಆವಾಗ ನನಗೆ ನನ್ನ ತಪ್ಪಿನ ಅರಿವಾಯಿತು. ಓಹ್ ಹೋ..! ಇಲ್ಲಿ ಸಾಹಿತಿ ಎಂದರೆ ಬರೆಯಬಾರದು. ಬದಲಿಗೆ ಸಾಹಿತ್ಯದ ಹೆಸರಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಊಟದ ವ್ಯವಸ್ಥೆ ಮಾಡಬೇಕು. ಆಗ ಸಾಹಿತಿ ಎಂದು ಪರಿಚಿತರಾಗುತ್ತೇವೆ. ನಮ್ಮನ್ನು ನಾವು ಚಿಂತಕರು ಎಂದು ಕರೆದುಕೊಂಡರೆ ಚಿಂತಕರಾಗುತ್ತವೆ. ಮತ್ತು ಸಿಕ್ಕ ಸಿಕ್ಕಂತೆ ಮಾತನಾಡಿದರೆ, ಕರೆದವರ ಪರವಾಗಿ ಬಹುಪರಾಕ್ ಹೇಳಿದರೆ ವಾಗ್ಮಿಗಳಾಗುತ್ತೇವೆ ಎನ್ನುವುದನ್ನು ಅರ್ಥೈಸಿಕೊಂಡೆ. ಅಲ್ಲಿಗೆ ಈ ಪದಗಳ ಮೇಲೆ ಗದಾ ಪ್ರಹಾರ ಮಾಡಲಾಗಿದ್ದು ಸಾಹಿತ್ಯ ಕ್ಷೇತ್ರ ಎನ್ನುವುದು ಅರ್ಥಹೀನವಾಗುತ್ತಿದೆ ಎನಿಸಿತು. 

ಇದನ್ನೇಕೆ ಇಲ್ಲಿ ಉಲ್ಲೇಖಿಸುತ್ತಿದ್ದೇನೆ ಎನ್ನುವ ಪ್ರಶ್ನೆ ನಿಮ್ಮದು ಎಂದು ನನಗೆ ಗೊತ್ತು. ಕಾರಣ ಇಷ್ಟೆ. ವಾಸ್ತವದ ಘಟನೆಗಳನ್ನು ನೋಡಿದಾಗ ಈ ನಾಡಿನ ತುಂಬ ಹಾಡು ಬಾರದವನು ಗಾಯಕ, ಮಂತ್ರವೇ ಬಾರದವನು ಅರ್ಚಕ, ಬರೆಯಲು ಬಾರದವನು ಸಾಹಿತಿ, ಭಾವನೆಗಳೇ ಇಲ್ಲದವನು ಕವಿ, ಮಾತಿನ ಮಿತಿಯನ್ನು ಅರಿಯದವನು ವಾಗ್ಮಿ, ಸ್ವಯಂ ಚಿಂತೆಯಲ್ಲಿ ತೊಡಗಿರುವವನು ಚಿಂತಕ ಎನ್ನುವುದು ಸತ್ಯವಾಗಿದೆ. ಆದರೆ ಇವರಿಗೇ ಇರಬೇಕಾದ ಯಾವ ಅರ್ಹತೆಯೂ ಇಲ್ಲ. ಆದರೆ ಇವರ ಬೆನ್ನಿಗೆ ಜಾತಿ ಇದೆ. ಧರ್ಮವಿದೆ. ಪಕ್ಷವಿದೆ. ಸಿದ್ಧಾಂತದ ಪಥವಿದೆ. ಅಂದಮೇಲೆ ಸಮಾಜದಲ್ಲಿ ಇವರೇ ಮೇಲಿನವರು. ಈಗ ರಚನೆಯಾದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯದು ಇದೇ ಕಥೆ. ಹಿಂದಿದ್ದ ಸಮಿತಿಯದೂ ಇಂತದ್ದೇ ಒಂದು ಕಥೆ ಇದೆ. ಆದರೆ ಈ ಕಥೆಗಳಿಂದ ನಮಗೇನು ಲಾಭವಿದೆ ಹೇಳಿ. ಸಾಮಾನ್ಯ ಓದುಗನಾಗಿ ನಾನು ಕೇಳುವುದಿಷ್ಟೇ ನಮ್ಮ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡಬಲ್ಲ ಗಟ್ಟಿ ಶಿಕ್ಷಣವನ್ನು ಕೊಟ್ಟರೆ ಅದೇ ನಿಜವಾದ ಶಿಕ್ಷಣ ಅಲ್ಲವೇ? ಗುರುಕುಲ ಪದ್ಧತಿಯಲ್ಲಿ ಮಕ್ಕಳಿಗೆ ನೀಡುತ್ತಿದ್ದ ನೈತಿಕ ಶಿಕ್ಷಣಕ್ಕೆ ಮೆಕಾಲೆ ಬಂದು ಮಣ್ಣುಕೊಟ್ಟ. ಇಂಗ್ಲೀಷ್ ಶಿಕ್ಷಣವನ್ನು ಕಲಿತ ಕಂಗ್ಲೀಷ್ ಜನಗಳು ಮಾಹಿತಿ ಶಿಕ್ಷಣಕ್ಕೆ ಮುನ್ನುಡಿ ಬರೆದು, ಮಕ್ಕಳಿಗೆ ಬದುಕಿನ ಪಾಠ ಕಲಿಸಿಕೊಡುವ ಬದಲು ಸುಶಿಕ್ಷಿತ ನಿರುದ್ಯೋಗಿಗಳನ್ನು ಮತ್ತು ಅಹಂಕಾರಿಗಳನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾದರು. ಇಂದು ಇವರು ಪಠ್ಯ ಪುಸ್ತಕದಲ್ಲಿ ಧರ್ಮ ಬೋಧನೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಅಂದು ಅವರು ಪಠ್ಯ ಪುಸ್ತಕದಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎನ್ನುತ್ತಿದ್ದರು. ಮುಂದೆ ಬರುವವರು ಇನ್ನೇನು ಹೇಳುತ್ತಾರೋ ಗೊತ್ತಿಲ್ಲ. ಅಂದಮೇಲೆ ನಮ್ಮ ಮಕ್ಕಳಿಗೆ ಇವರೇನು ಹೇಳುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಟಿಪ್ಪು ಬಂದಾಗ ಬಲ ವಿರೋಧ, ಹೆಡಗೇವಾರ್ ಬಂದಾಗ ಎಡ ವಿರೋಧ. ಎಡಬಲದ ನಡುವಲ್ಲಿ ಸಿಕ್ಕ ನಮ್ಮ ಮಕ್ಕಳ ಭವಿಷ್ಯದ ಕುರಿತು ನಿಜಕ್ಕೂ ಚಿಂತೆಯಾಗುತ್ತಿದೆ. ಬಸವಣ್ಣನವರ ವಿಷಯಕ್ಕೆ ಲಿಂಗಾಯತರ ಹೋರಾಟ, ಹೆಡಗೇವಾರ್ ವಿಷಯಕ್ಕೆ ಆರ್‌ಎಸ್‌ಎಸ್ ಹೋರಾಟ, ಕುವೆಂಪು ವಿಚಾರಕ್ಕೆ ಒಕ್ಕಲಿಗರ ಹೋರಾಟ. ಮತ್ತೆ ಮಾತೆತ್ತಿದರೆ ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಇದೆಲ್ಲವನ್ನು ನೋಡಿದಾಗ ಇಲ್ಲಿ ಬೆಂಕಿಯ ತಪ್ಪೊ? ಇಲ್ಲ ಬೆಣ್ಣೆಯ ತಪ್ಪೊ? ಗೊತ್ತಾಗುತ್ತಿಲ್ಲ. ಆದರೆ ಇವುಗಳ ಮಧ್ಯದಲ್ಲಿ ಬೆಣ್ಣೆ ಕರಗಿದ್ದಂತೂ ಸತ್ಯ. ಬೆಣ್ಣೆ ಕರಗಿ ತುಪ್ಪವಾದ ಮೇಲೆ ನನಗೆ ಮತ್ತದೇ ಬೆಣ್ಣೆ ಬೇಕು ಎಂದು ಹಠ ಹಿಡಿದಂತಾಗಿದೆ. ಇವರಿಗೆ ಬೆಣ್ಣೆ ಸಿಗುವುದೂ ಇಲ್ಲ. ಬೆಂಕಿ ತನ್ನ ತಪ್ಪನ್ನು ಒಪ್ಪಿಕೊಳ್ಳುವುದು ಇಲ್ಲ. ಇದರ ಮಧ್ಯದಲ್ಲಿ ಕರಗಿದ ಬೆಣ್ಣೆಯಿಂದ ಸಿಕ್ಕ ತುಪ್ಪವನ್ನು ಗಪ್ಪನು ನುಂಗಿ ಕುಳಿತವರೇ ಮುಂಜಾನೆ ಧಿಕ್ಕಾರ ಕೂಗುತ್ತಾರೆ, ಸಂಜೆಯಾದರೆ ಜೈ ಕಾರ ಹಾಕುತ್ತಾರೆ. ಇವರನ್ನು ನಂಬಿ ಕೂತ ನಮ್ಮಂತ ಸಾಮಾನ್ಯ ಜನ ಬೆಪ್ಪರಾಗುತ್ತಾರೆ. ಇಲ್ಲಿ ಎಲ್ಲವು ಮೂರು ದಿನದ ಹಾರಾಟ ಮತ್ತೆ ಯಾಥಾ ಸ್ಥಿತಿ. 

- * * * -