ತಗ್ಗು ಗುಂಡಿಗಳಲ್ಲಿ ಗಿಡ ನೆಟ್ಟು ಆಕ್ರೋಶ* ಜನಜಾಗೃತಿ ಸಂಘದಿಂದ ವಿಭಿನ್ನ ಹೋರಾಟ

ಧಾರವಾಡ 02: ಸಾಧನಕೇರಿ ಕೆರೆಯ ಬಂಡ್ ಮೇಲೆ ಹಾದು ಹೋಗಿರುವ "ಕಾಂಟನ್ ಮೆಂಟ್ " ರೋಡ್ ಸಂಪೂರ್ಣ ಹದಗೆಟ್ಟ ಹಿನ್ನಲೆಯಲ್ಲಿ ಧಾರವಾಡದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರ ನೇತೃತ್ವದಲ್ಲಿ ತಗ್ಗು ಗುಂಡಿಗಳಲ್ಲಿ ಗಿಡ ನೆಟ್ಟು ವಿಭಿನ್ನ ಹೋರಾಟ ನಡೆಸಲಾಯಿತು.

ಆ ಮೂಲಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ದ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೂ, ಸಂಬಂಧಪಟ್ಟ ಅಧಿಕಾರಿಗಳಿಗೂ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲದ ಹಿನ್ನಲೆಯಲ್ಲಿ ಶುಕ್ರವಾರ ಬೆಳ್ಳಂ ಬೆಳಗ್ಗೆ ಬೀದಿಗಿಳಿದು ಈ ರೀತಿಯ ಸಾಂಕೇತಿಕ ಹೋರಾಟ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದರು. 

 ಬೆಳಿಗ್ಗೆ ವಾಯು ವಿಹಾರಕ್ಕೆ ಬಂದ ಹಿರಿಯ ನಾಗರಿಕರು, ಜನಜಾಗೃತಿ ಸಂಘದ ಸದಸ್ಯರು  ರಸ್ತೆ ಪಕ್ಕದ ಕಂಟಿಗಳನ್ನು ಗುಂಡಿಗಳಲ್ಲಿ ನಿಲ್ಲಿಸಿ ಜಾಗೃತಿ ಮೂಡಿಸುವ ಜೊತೆಗೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. 

ಕಳೆದ ಎರಡು ವರ್ಷಗಳಿಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಗಳ ನಿರ್ವಹಣೆಯನ್ನು ಸರಿಯಾಗಿ ಮಾಡದೆ ಸರ್ಕಾರದಿಂದ ಬಂದ ಮಳೆಗಾಲ ಪೂರ್ವ ಹಾಗೂ ಮಳೆಗಾಲದ ನಂತರ ರಸ್ತೆಗಳ ನಿರ್ವಹಣಾ ಅನುದಾನವನ್ನು ಗುತ್ತಿಗೆದಾರರೊಂದಿಗೆ ಸೇರಿ ಲಪಟಾಯಿಸಿರುವ ಕುರಿತು ಧಾರವಾಡ ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿಬೇಕು ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು  ಧಾರವಾಡದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ತಿಳಿಸಿದರು.

ಈ ರಸ್ತೆಯೂ ವರಕವಿ ದ.ರಾ. ಬೇಂದ್ರೆಯವರು ನಡೆದಾಡಿದ ರಸ್ತೆಯಾಗಿದ್ದು, ಧಾರವಾಡ ಜಿಲ್ಲೆಯಷ್ಟೇ ಅಲ್ಲದೆ, ರಾಜ್ಯದ ವಿವಿಧ ಭಾಗಗಳಿಂದ ದಿನನಿತ್ಯ ನೂರಾರು ಪ್ರವಾಸಿಗರು ಬಾರೋ ಸಾಧನಕೇರಿ ಪ್ರವಾಸಿ ತಾಣ ವೀಕ್ಷಿಸಲು ಆಗವಿಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಇದ್ದರೂ ಜಾಣ ಕುರುಡುತನ ತೋರಿಸುತ್ತಿರುವುದು ಸರಿಯಾದ ಬೆಳವಣಗೆ ಅಲ್ಲ. ಇದರಿಂದಾಗಿ ಜಿಲ್ಲೆಗೆ ದೊಡ್ಡ ಹಿನ್ನಡೆಯಾಗಲಿದೆ. 

ಧಾರವಾಡ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಧಾರವಾಡ ತಾಲೂಕಿನಲ್ಲಿಯೇ ಸುಮಾರು ಅಂದಾಜು 45-ರಿಂದ 50 ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ ಮಳೆಗಾಲ ಪೂರ್ವ ಹಾಗೂ ಮಳೆಗಾಲದ ನಂತರ ಕಾಮಗಾರಿಗೆ ಒಂದರಿಂದ ಎಳು ಲಕ್ಷ ರೂಪಾಯಿಯವರೆಗೆ ಸರಕಾರಿ ಕಡತಗಳಲ್ಲಿಯೇ ರಸ್ತೆ ನಿರ್ವಹಣೆ ಮಾಡಿರುವುದು ರಸ್ತೆಗಳ ಸ್ಥಿತಿಗತಿ ನೋಡಿದರೆಯೇ ಗೊತ್ತಾಗುತ್ತದೆ.    ಹೀಗಾಗಿ ಈ ಬಗ್ಗೆ ಧಾರವಾಡ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಕುಲೂಂಕುಶ ತನಿಖೆ ನಡೆಸಿ, ಸರಕಾರದ ಹಣವನ್ನು ತಪ್ಪಿತಸ್ಥ ಅಧಿಕಾರಿಗಳಿಂದ ಹಾಗೂ ಗುತ್ತಿಗೆದಾರರಿಂದ ಮರುವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ರಕ್ಷಕಾಲನಿಯ ಸಹೋದರಿ ಒಬ್ಬರು ಸ್ಕೂಟಿ ಮೇಲೆ ಬರುವಾಗ ನಮ್ಮ ಕಣ್ಣ ಮುಂದೆಯೇ ಗುಂಡಿಯಲ್ಲಿ ಬಿದ್ದದ್ದು ನೋಡಿ ತುಂಬಾ ಬೇಸರವಾಯಿತು. ಮುಂದೆ ಬರುವವರು ಜಾಗರೂಕತೆಯಿಂದ ಬರಲಿ ಅಂತಾ ತಗ್ಗು ಗುಂಡಿಗಳಲ್ಲಿ ಗಿಡ ನೆಟ್ಟು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಖಂಡಿಸಲಾಯಿತು.

 ಇದಕ್ಕೆ ಹೈಕೋರ್ಟ್ ವಕೀಲರಾದ ನೀಲೇಂದ್ರ ಗೂಂಡೆ,  ಅರವಿಂದ ಸರ್ ದೇಶಮುಖ, ಪರಪ್ಪಎಸ್.ಕೆ , ಆನಂದ ದಿಕ್ಷಿತ್, ವಸಂತ ಅಣ್ವೇಕರ್, ಜನ ಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ  ರಾಘವೇಂದ್ರ ಶೆಟ್ಟಿ, ಸುರೇಶ ಕೆ, ಸೇರಿದಂತೆ ಅನೇಕರು ಕೈಗೊಡಿಸಿದ್ದರು.