ಕಾರ್ಮಿಕರು, ಬಿಲ್ಡರ್ಸ್‌ಗೂ ಅನುಕೂಲವಾಗುವಂತೆ ಯೋಜನೆ ರೂಪಿಸಿ: ಡಿ.ಕೆ.ಶಿವಕುಮಾರ್

ಬೆಂಗಳೂರು, ಮೇ 6,ಬಜೆಟ್‌ನಲ್ಲಿ  ಘೋಷಣೆಯಾದ ಯೋಜನೆಗಳಿಗೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಪತ್ರ ಬರೆದು  ಆ ಕೆಲಸಗಳನ್ನೆಲ್ಲ ತಡೆಹಿಡಿದಿರುವುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಖಂಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಯೋಜನೆಗಳಿಗೆ ಪತ್ರ  ಬರೆದು ತಡೆ ನೀಡುವಂತೆ ಸೂಚಿಸಿರುವುದು ಸರಿಯಾದ ಕ್ರಮವಲ್ಲ. ಇದಕ್ಕಾಗಿ ವಿಧಾನಮಂಡಲ ವಿಶೇಷ ಅಧಿವೇಶನ  ಕರೆಯಿಲಿ. ಈ ಬಗ್ಗೆ ಚರ್ಚಿಸಲಿ. ಸರ್ಕಾರಕ್ಕೆ ಅಧಿವೇಶನದಲ್ಲಿ ವಿಪಕ್ಷವಾಗಿ ಬೆಂಬಲಿಸಲು  ಸಿದ್ಧರಿದ್ದೇವೆ. ಅಧಿವೇಶನ ಕರೆದರೆ ನಮ್ಮ ಶಾಸಕರು ಟಿಎ- ಡಿಎಯನ್ನೂ ತೆಗೆದುಕೊಳ್ಳುವುದಿಲ್ಲ ಎಂದರು.
ಹೊರರಾಜ್ಯದಿಂದ  ಕರ್ನಾಟಕಕ್ಕೆ ಬರಲು ಇಚ್ಛಿಸುವ ಕಾರ್ಮಿಕರನ್ನು ಹಾಗೂ ಈಗ ಹೋಗಿರುವ ಕಾರ್ಮಿಕರನ್ನು  ಕರೆತರಬೇಕು. ಕಾರ್ಮಿಕರಿಗೆ ಹಾಗೂ ಬಿಲ್ಡರ್ಸ್‌ ಇಬ್ಬರಿಗೂ ಅನುಕೂಲವಾಗುವಂತೆ ಯೋಜನೆ  ರೂಪಿಸಬೇಕು. ಈ ಸಂಬಂಧ ಸರ್ಕಾರಕ್ಕೆ ಸಲಹೆ ಕೊಡಲು ನಾವುಗಳು ಸಿದ್ಧ. ನಮ್ಮ ಸಲಹೆ ತೆಗೆದುಕೊಂಡರೆ ಸರ್ಕಾರಕ್ಕೂ ಒಳ್ಳೆಯದಾಗುತ್ತದೆ ಎಂದರು.ವಿಶೇಷ ಪ್ಯಾಕೇಜ್ ಘೋಷಿಸದ ಮುಖ್ಯ ಮಂತ್ರಿಗಳಿಗೆ ಸ್ವಲ್ಪ ಮಟ್ಟಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೆಲವು ವರ್ಗದವರಿಗೆ 10 ಸಾವಿರ ಕೊಡಲು ಮನವಿ ಮಾಡಿದ್ದೆವು. ಆದರೆ ಕೇವಲ 5 ಸಾವಿರ ರೂಪಾಯಿ ಕೊಡಲು ನಿರ್ಧರಿಸಿದ್ದಾರೆ. ಅದು ಎಲ್ಲಿಗೂ ಸಾಕಾಗುವುದಿಲ್ಲ.  ಆದರೂ ವಿರೋಧ ಪಕ್ಷಗಳ ಮನವಿಗೆ ಸ್ಪಂದಿಸಿದ್ದಾರೆ. ತಮ್ಮ ಸಚಿವ ಸಂಪುಟದ ಸದಸ್ಯರ ಮಾತನ್ನು ಬಿಟ್ಟು, ಪ್ರತಿಪಕ್ಷ ಗಳ ಮಾತಿಗೆ ಮನ್ನಣೆ ನೀಡಿದ್ದಾರೆ. ಆದರೆ, 5 ಸಾವಿರ ರೂಪಾಯಿ ಸಾಲದು, ಅದನ್ನು ಹೆಚ್ಚಿಸಬೇಕು ಎಂದು ಶಿವಕುಮಾರ್ ಮನವಿ ಮಾಡಿದರು.
ವಿಶೇಷ ಅಧಿವೇಶನ ಕರೆದು ಎಲ್ಲವನ್ನೂ ಸಮಗ್ರವಾಗಿ ಚರ್ಚೆ ಮಾಡೋಣ. ಒಂದು ವರ್ಷ ಅಭಿವೃದ್ಧಿ ನಿಲ್ಲಿಸಿದರೆ ಏನೂ ಆಗುವುದಿಲ್ಲ. ಜೀವ ಹಾಗೂ ಜೀವನ ಮುಖ್ಯ. ಈ ಎಲ್ಲಾ ವಿಚಾರಗಳನ್ನು ಅಧಿವೇಶನದಲ್ಲಿ ಚರ್ಚೆ ಮಾಡೋಣ  ಎಂದು ಸಲಹೆ ನೀಡಿದರು.
ಗ್ರೀನ್ ಝೋನ್  ಪ್ರದೇಶ ಗಳಲ್ಲಿ ಹೋಟಲ್ ತೆರೆಯಲು ಬಿಡುತ್ತಿಲ್ಲ. ಒಂದೊಂದು ಕಡೆ ಒಂದೊಂದು ನಿಯಮ ಆಗಬಾರದು. ಹೊರಗಡೆ ಇರುವ ಕನ್ನಡಿಗರನ್ನು ಕರೆಯುವ ಕೆಲಸ ಆಗಬೇಕು. ಹೊರಗೆ ಹೋಗಿರುವ ಕಾರ್ಮಿಕರನ್ನು ಕರೆ ತರಲು ಪ್ರಯತ್ನಿಸಬೇಕು. ನಮ್ಮ ಪಕ್ಷ ಕೂಡ ಒಂದು ಸಮಿತಿ ಮಾಡಲಿದ್ದು, ವಿಚಾರದಲ್ಲಿ ಸರ್ಕಾರಕ್ಕೆ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದರು.ಕರ್ನಾಟಕ ಸರ್ಕಾರದ ಚಿನ್ಹೆ ಮಾರಾಟಕ್ಕಿದೆ. ಬಾಣಂತಿಯರ ಊಟ ಮಾರಾಟ ಮಾಡಿದ್ದಾರೆ. ಈ ವಿಚಾರವಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ ಅವರು,  ಸಾರಿಗೆ ಇಲಾಖೆಗೆ ಕೊಡುವ ಒಂದು ಕೋಟಿ ಚೆಕ್ ನಮ್ಮ ಬಳಿ ಇದ್ದು,  ರೈಲ್ವೆ ಇಲಾಖೆಗೆ ಕಟ್ಟಲು ಸಿದ್ಧರಿದ್ದೇವೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಚೆಕ್ ಬೇಡ ಎಂದು ಹೇಳಿದ್ದಾರೆ ಎಂದರು.