ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಕಳಿಸಲು ಆಗ್ರಹಿಸಿ ಮನವಿ

ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಕಳಿಸಲು ಆಗ್ರಹಿಸಿ ಮನವಿ  Petition demanding that a criminal case be filed and sent to jail

ತಾಳಿಕೋಟಿ 24: ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಭೀಮಣ್ಣ ಕೋಟಾರಗಸ್ತಿ ಎಂಬ ವ್ಯಕ್ತಿ ತಾಳಿಕೋಟಿ ತಾಲೂಕಿನ ಅಸ್ಕಿ ಗ್ರಾಮದ ಕೆಲವು ಗ್ರಾಮಸ್ಥರ ಆಧಾರ ಕಾರ್ಡ ಮತ್ತು ಪಡಿತರ ಚೀಟಿ ದಾಖಲೆಗಳನ್ನು ಅಕ್ರಮವಾಗಿ ಪಡೆದು ಅದರಲ್ಲಿ ತಿದ್ದುಪಡಿ ಮಾಡಿರೋದನ್ನು ರದ್ದುಪಡಿಸಿ ಸದರಿ ಗ್ರಾಮಸ್ಥರಿಗೆ ಮೊದಲಿನಂತೆ ದಾಖಲೆ ಪತ್ರಗಳನ್ನು ತಿದ್ದುಪಡಿ ಮಾಡಿಕೊಡುವುದು ಹಾಗೂ ಮೋಸ ಮಾಡಿದ ವ್ಯಕ್ತಿ ಭೀಮಣ್ಣ ಕೋಟಾರಗಸ್ತಿ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಆತನನ್ನು ಜೈಲಿಗೆ ಕಳಿಸುವಂತೆ ಆಗ್ರಹಿಸಿ ಭೀಮ ಆರ್ಮಿ ಜಿಲ್ಲಾ ಅಧ್ಯಕ್ಷ ಡಿ.ಕೆ. ದ್ಯಾವಪ್ಪ ದೊಡ್ಡಮನಿ ಇವರ ನೇತೃತ್ವದಲ್ಲಿ ಗ್ರಾಮಸ್ಥರು ತಹಸಿಲ್ದಾರ್ ಡಾ.ವಿನಯಾ ಹೂಗಾರ ಇವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಮನವಿ ಪತ್ರದಲ್ಲಿ ತಾಳಿಕೋಟಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಹೆಚ್ಚಿನ ಜನರು ಕೂಲಿ ಕಾರ್ಮಿಕರು, ಬಡವರು ಹಾಗೂ ಒಕ್ಕಲಿಗರು ಇದ್ದು ಹೆಚ್ಚಿನ ಸಂಖ್ಯೆಯಲ್ಲಿ ಅವಿದ್ಯಾವಂತರಿದ್ದಾರೆ. ಇದರ ದುರುಪಯೋಗವನ್ನು ಪಡೆಸಿಕೊಂಡ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಕ್ರಿಮಿನಲ್ ವ್ಯಕ್ತಿ ಭೀಮಣ್ಣ ಕೋಟಾರಗಸ್ತಿ ಎಂಬವನು ಸನ್ 2017-18ರಲ್ಲಿ ಗ್ರಾಮಕ್ಕೆ ಬಂದು ಈ ಬಡ ಜನರಿಗೆ ತಪ್ಪು ಮಾಹಿತಿ ನೀಡಿ ನಿಮಗೆ ಮನೆ ಕೊಡಿಸುತ್ತೇನೆ ಎಂದು ನಂಬಿಸಿ ಅವರ ಆಧಾರ್ ಕಾರ್ಡ್‌ ಹಾಗೂ ರೇಷನ್ ಕಾರ್ಡ್‌ ಪಡೆದುಕೊಂಡು ಅವರನ್ನು ಆನ್ಲೈನ್ ಸೆಂಟರ್ ಗೆ ಕರೆದುಕೊಂಡು ಹೋಗಿ ಮೋಸದಿಂದ ಅವರ (ತಂಭ ಇಂಪ್ರೆಷನ್) ಹೆಬ್ಬೆಟ್ಟಿನ ಗುರುತು ಪಡೆದುಕೊಂಡು ಮೋಸ ಮಾಡಿದ್ದು ಸುಮಾರು 50ರಿಂದ 100 ಜನರು ಈತನ ಮೋಸದ ಈ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಪ್ರತಿ ವ್ಯಕ್ತಿಯಿಂದ ತಲಾ 30 ರಿಂದ 50, ಸಾವಿರ ರೂಪಾಯಿ ಪಡೆದುಕೊಂಡಿರುತ್ತಾನೆ.  

 ಇಲ್ಲಿಯವರೆಗೂ ಮನೆಗಳನ್ನು ಕೊಡದೆ ಮೋಸ ಮಾಡಿರುತ್ತಾನೆ. ಈ ಸತ್ಯ ಗೊತ್ತಾದ ನಂತರ ಗ್ರಾಮಸ್ಥರು ಈ ವ್ಯಕ್ತಿಯನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಈ ಮೊದಲು ತಹಸಿಲ್ದಾರ್ ಇವರಲ್ಲಿ ಮನವಿ ಮಾಡಿದ್ದು ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಆದ್ದರಿಂದ ಮೋಸದಿಂದಾಗಿ ಮೂಲ ಆಧಾರ ಕಾರ್ಡ್‌ ಹಾಗೂ ಪಡಿತರ ಚೀಟಿ ತಿದ್ದುಪಡಿ ಆಗಿರುವುದರಿಂದ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಇವರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ತೀವ್ರ ಸಂಕಷ್ಟ ದಲ್ಲಿದ್ದಾರೆ ಕಾರಣ ಹಳ್ಳಿಯ ಮುಗ್ಧ ಜನರಿಗೆ ಮೋಸ ಮಾಡಿದ ಬೋರಗಿ ಗ್ರಾಮದ ಕೋಟಾರಗಸ್ತಿ ಎಂಬ ಈ ವ್ಯಕ್ತಿಯನ್ನು ಬಂಧಿಸಿ ಆತನ ಮೇಲೆ ಕ್ರಿಮಿನಲ್ ಮುಖದ್ದಮೆ ದಾಖಲಿಸಿ ಅವನನ್ನು ಜೈಲಿಗೆ ಅಟ್ಟಿ ಮುಕ್ತ ಜನರಿಗೆ ನ್ಯಾಯ ಒದಗಿಸಿ ಅವರ ಮೂಲ ದಾಖಲೆ ಪತ್ರಗಳನ್ನು ಸರಿಪಡಿಸಿಕೊಡಬೇಕು ಎಂದು ಭೀಮ ಆರ್ಮಿ ಜಿಲ್ಲಾ ಅಧ್ಯಕ್ಷ ಡಿ.ಕೆ.ದ್ಯಾವಪ್ಪ ದೊಡ್ಮನಿ ಇವರ ನೇತೃತ್ವದಲ್ಲಿ ಗ್ರಾಮಸ್ಥರು ಅಗ್ರಹಿಸಿದ್ದಾರೆ. ಈ ಸಮಯದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಜೈ ಭೀಮ ಮುತ್ತಗಿ, ವಿದ್ಯಾರ್ಥಿ ಯುವ ಮುಖಂಡ ಹರ್ಷವರ್ಧನ ಪೂಜಾರಿ, ಅನಿಲ್ ಗೊಟಖಂಡಕಿ, ಈರಣ್ಣ ಕೂಚಬಾಳ, ದೇವಪ್ಪ ಪೂಜಾರಿ ಹಾಗೂ ನೊಂದ ಮಹಿಳೆಯರು ಇದ್ದರು.