ಗೃಹ ಸಚಿವ ಅಮೀತ ಶಾ ರಾಜೀನಾಮೆಗೆ ಆಗ್ರಹಿಸಿ ಮನವಿ

Petition demanding resignation of Home Minister Amit Shah

ಜಮಖಂಡಿ 24: ಡಾ.ಬಿ.ಆರ್‌.ಅಂಬೇಡ್ಕರವರನ್ನು ಕೇಂದ್ರ ಗೃಹ ಸಚಿವ ಅಮೀತ ಶಾ  ಅವಮಾನಿಸಿದ್ದು, ಕೂಡಲೇ ಅವರ ರಾಜೀನಾಮೆಯನ್ನು ಪಡೆಯಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಸಾಗರ ಬಣ)  ಪದಾಧಿಕಾರಿಗಳು ಒತ್ತಾಯಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.  

ನಗರದ ಮಿನಿವಿಧಾನಸೌಧ ಆವರಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಸಾಗರ ಬಣ)  ಕೆಲಕಾಲ ಪ್ರತಿಭಟನೆಯನ್ನು ನಡೆಸಿ, ಎಸಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. 

ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಮಾತನಾಡಿ, ಅಂಬೇಡ್ಕರ ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿ ಭಾರತಕ್ಕೆ ಸಂವಿಧಾನವನ್ನು ನೀಡಿ ಆ ಸಂವಿಧಾನದಿಂದ ದೇಶದ ಶೋಷಿತರು, ಮಹಿಳೆಯರು, ಅಲ್ಪಸಂಖ್ಯಾತರು ಸೇರಿ ಎಲ್ಲರಿಗೂ ಮತದಾನ ಶಿಕ್ಷಣದ ಹಕ್ಕಿನವರೆಗೆ ಹಕ್ಕು ನೀಡಿ ದೇಶದ ಪ್ರತಿಯೊಬ್ಬ ಪ್ರಜೆ ಘನತೆ ಗೌರವದಿಂದ ಬದುಕುವಂತಹ ಸಂವಿಧಾನ ನೀಡಿದ ಮಹಾನ ವ್ಯಕ್ತಿಯ ಬಗ್ಗೆ ಅಮೀತ ಶಹಾ ಸಂಸತ್‌ನಲ್ಲಿ ಅಂಬೇಡ್ಕರ್ ಅಂಬೇಡ್ಕರ್ ಅನ್ನುವುದು ನಿಮಗೆ ವ್ಯಸನವಾಗಿದೆ ಅದರ ಬದಲು ಭಗವಾನ ಭಗವಾನ ಅಂದಿದ್ದರೆ, ಸ್ವರ್ಗಕ್ಕೆ ಹೋಗುತ್ತಿದ್ದಿರಿ ಎಂದು ಅವಮಾನಿಸಿದ್ದಾರೆ ಅದನ್ನು ಖಂಡಿಸುತ್ತೆವೆ ಎಂದರು. 

ತಾಲ್ಲೂಕು ಸಂಚಾಲಕ ಬಸವರಾಜ ದೊಡಮನಿ ಮಾತನಾಡಿ, ಅವರ ಮಾತಿನಿಂದ ಆರ್,ಎಸ್,ಎಸ್ ಸಿದ್ದಾಂತ ಅರ್ಥವಾಗುತ್ತದೆ, ದೇಶದ ಸಂವಿಧಾನವನ್ನು ವಿರೋಧಿಸುತ್ತಾ ಬಂದಿರುವ ಮನಸ್ಮೃತಿ ಸಿದ್ದಾಂತದ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು, ರಾಜೀನಾಮೆ ಪಡೆದು ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು  

ಒತ್ತಾಯಿಸಿದರು. 

ಇದೇ ಸಂದರ್ಭದಲ್ಲಿ ಸದಾಶಿವ ಐನಾಪೂರ,  ಅಪ್ಪಶಿ ಕಾಂಬಳೆ, ರವಿ ಚಲವಾದಿ, ಅಡಿವೆಪ್ಪ ಮರೇಗುದ್ದಿ, ಅಶೋಕ ಶಿಂಗೆ, ಹಣಮಂತ ಮಾದರ, ವಿಠ್ಠಲ ಕಾಂಬಳೆ, ಶಾಮರಾವ ಮಾದರ, ತುಕಾರಾಮ ಬನ್ನೂರ, ರವಿ ಸುತಾರ, ಯಲ್ಲಪ್ಪ ಕಾಂಬಳೆ, ದೀಪಕ ಕಂಕಣವಾಡಿ ಸೇರಿದಂತೆ ಅನೇಕರು ಇದ್ದರು.