ಮಾಸ್ಕೋ, ಏಪ್ರಿಲ್ ೧೧, ಕೋವಿಡ್ -೧೯ ಸೋಂಕಿನಿಂದ ಗುಣಮುಖಗೊಂಡ ವ್ಯಕ್ತಿಗಳ ದೇಹದಲ್ಲಿ ರೋಗ ನಿರೋಧಕ ಕಣಗಳನ್ನು ತೆಗೆದು, ರೋಗದಿಂದ ಬಳಲುತ್ತಿರುವ ಮತ್ತೊಬ್ಬ ವ್ಯಕ್ತಿಗೆ ಸೇರಿಸುವ ಪ್ಲಾಸ್ಮಾ ಚಿಕಿತ್ಸಾ ವಿಧಾನ ಬಳಸಲು ಟರ್ಕಿ ಆರೋಗ್ಯ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ. ಪ್ಲಾಸ್ಮಾ ಥೆರೆಪಿ ಈಗಾಗಲೇ ಪರಿಣಾಮಕಾರಿ ಚಿಕಿತ್ಸೆ ಎಂಬುದು ಸಾಬೀತಾಗಿದೆ ಎಂದು ಟರ್ಕಿ ರೆಡ್ ಕ್ರಸೆಂಟ್ ಅಧ್ಯಕ್ಷ ಡಾ. ಕೆರಮ್ ಕಿನಿಕ್ ಸ್ಪುಟ್ನಿಕ್ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆಕೋವಿಡ್-೧೯ ಚಿಕಿತ್ಸೆ ಕಲ್ಪಿಸಲು ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನ ಅತ್ಯಂತ ಪರಿಣಾಮಕಾರಿ ಎಂದು ಈಗ ಹಲವಾರು ಆರೋಗ್ಯ ತಜ್ಞರು ಸ್ಪಷ್ಟವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಈ ವಾರದ ಆರಂಭದಲ್ಲಿ ಈ ಥೆರಪಿಯನ್ನು ಬಳಸಲು ನಾವು ಆರಂಭಿಸಿದ್ದು, ಒಬ್ಬ ಪ್ಲಾಸ್ಮಾ ದಾನಿ ಮೂವರು ಕೊರೊನಾ ವೈರಸ್ ರೋಗಿಗಳಿಗೆ ನೆರವಾಗಬಹುದು ಎಂದು ಅವರು ಹೇಳಿದ್ದಾರೆ.
ಇದೊಂದು ಪರಿಣಾಮಕಾರಿ ಚಿಕಿತ್ಸಾ ವಿಧಾನವಾಗಿದ್ದು, ಆರೋಗ್ಯ ಸಚಿವಾಲಯ ಈಗ ತನ್ನ ಅಧಿಕೃತ ಅನುಮೋದನೆ ನೀಡಿದೆ. ಇನ್ನೂ ಮುಂದೆ ಈ ವಿಧಾನವನ್ನು ಬಳಸಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ಕಲ್ಪಿಸಲಾಗುವುದು ಎಂದು ಎಂದು ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳ ಮುಖ್ಯಸ್ಥರೂ ಆಗಿರುವ ಡಾ. ಕಿನಿಕ್ ಹೇಳಿದ್ದಾರೆ ಟರ್ಕಿ ವೈದ್ಯರು ಮೊದಲ ರಕ್ತದ ಪ್ಲಾಸ್ಮಾ ವನ್ನು ನಾಲ್ಕು ದಿನಗಳ ಹಿಂದೆ ಕೋವಿಡ್ ರೋಗಿಯೊಬ್ಬರಿಗೆ ವರ್ಗಾಯಿಸಿದ್ದಾರೆ. ಥೆರಪಿಯಿಂದ ರೋಗಿಯ ಮೇಲೆ ಪರಿಣಾಮಕಾರಿ ಬದಲಾವಣೆ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ. ಡಾ. ಕಿನಿಕ್ ಅವರ ಪ್ರಕಾರ, ಪ್ಲಾಸ್ಮಾ ಥೆರಪಿ ಬಳಕೆ ತರಬಹುದಾದ ಚಿಕಿತ್ಸಾ ವಿಧಾನವಾಗಿದ್ದು, ಅತ್ಯಂತ ಸರಳ, ಪರಿಣಾಮ ಕಾರಿ ಎಂಬುದು ಸಾಬೀತಾಗಿದೆ. ಮೇಲಾಗಿ ಕೋವಿಡ್ -೧೯ ರೋಗಕ್ಕೆ ಯಾವುದೇ ಅನುಮೋದಿತ ಔಷಧಿ ಇಲ್ಲದಿರುವುದರಿಂದ. ಈ ವಿಧಾನವನ್ನು ವೈದ್ಯರು ಬಳಸಬಹುದಾಗಿದೆ ಎಂದು ಹೇಳಿದ್ದಾರೆ. ಶುಕ್ರವಾರ ಟರ್ಕಿಯಲ್ಲಿ ೪, ೭೪೭ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕು ಪ್ರಕರಣಗಳ ಸಂಖ್ಯೆ ೪೭ ಸಾವಿರಕ್ಕೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ನಿತ್ಯವೂ ೪೦೦೦ ಪ್ರಕರಣಗಳು ಪತ್ತೆಯಾಗುತ್ತಿವೆ. ಈವರೆಗೆ ೧೦೦೬ ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.