ಪೆರಿಯಾರ್ ತತ್ವ ಸದಾ ಪ್ರಸ್ತುತ : ಡಾ. ಎ. ಕೆ. ಮಠ

Periyar's philosophy is always relevant: Dr. A. K. Math

ಗದಗ 14: ಶೋಷಿತ ಜನಾಂಗ ಮತ್ತು ಸ್ತ್ರೀಯರಿಗೆ ಸಮಾನತೆ ಇಲ್ಲದಿದ್ದ ಕಾಲದಲ್ಲಿ ಪೆರಿಯಾರರು ತಂದ ಸಮಾಜ ಸುಧಾರಣೆಯ ಪ್ರಯತ್ನಗಳು ಶ್ಲಾಘನೀಯವಾಗಿವೆ ಎಂದು ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎ. ಕೆ. ಮಠ ತಿಳಿಸಿದರು.   

ನಗರದ ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐ.ಸಿ.ಪಿ.ಆರ್ ಸಹಯೋಗದೊಂದಿಗೆ  ಇತಿಹಾಸ ವಿಭಾಗದ ವತಿಯಿಂದ ರಾಮಸ್ವಾಮಿ ಅಯ್ಯಂಗಾರ ಅವರ ತತ್ವಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   

ರಾಮಸ್ವಾಮಿ ನಾಯ್ಕರ್ ಅವರ ಹಿಂದಿ ವಿರೋಧ, ಜನಸಮುದಾಯಗಳ  ಆಚರಣೆಗಳ ವಿರೋಧ, ದೇವರ ಚಿತ್ರವನ್ನು ಸಾರ್ವಜನಿಕವಾಗಿ ಸುಡುವ ರೀತಿ ಇವೆಲ್ಲಾ ಕ್ರಾಂತಿಕಾರಕ ವ್ಯಕ್ತಿತ್ವವೆಂದು ತೋರಿಸುತ್ತವೆ. ಪೆರಿಯಾರ್ ರಾಮಸ್ವಾಮಿ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದ ಮಹಾನ್ ಕ್ರಾಂತಿಕಾರಿ. ಜಾತೀಯತೆ, ಮೂಢ ನಂಬಿಕೆಗಳು, ಸ್ತ್ರೀ ಮತ್ತು ಕೆಳವರ್ಗದ ಜನಜೀವನದ ಶೋಷಣೆಯಲ್ಲಿ ತತ್ತರಿಸಿ ಕೊಳೆತು ನಾರುತ್ತಿದ್ದ ಭಾರತೀಯ ಜನಜೀವನದಲ್ಲಿ ಪೆರಿಯಾರ್ ರಾಮಸ್ವಾಮಿಯವರು ಮಾಡಿದ ಕ್ರಾಂತಿ ಮಹತ್ವಪೂರ್ಣವಾದುದು ಎಂದರು.   

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ. ದೊಡ್ಡಬಸವರಾಜ ಎ. ಕೆ ಅವರು ಮಾತನಾಡಿ ಸಮಾಜ ಸುಧಾರಣೆಗಳ ಬಗೆಗೆ ಆಸ್ಥೆ ಹೊಂದಿದ್ದ ರಾಮಸ್ವಾಮಿ ನಾಯರ್ ಅವರಿಗೆ ರಾಜಕೀಯ ಲಾಭ ಪಡೆದು ಅಧಿಕಾರ ನಡೆಸುವುದು ಬೇಕಿರಲಿಲ್ಲ. ಸಮಾಜೋದ್ಧಾರ ಅವರ ಮುಖ್ಯ ಉದ್ದೇಶ.  ಯುನೆಸ್ಕೋ  ರಾಮಸ್ವಾಮಿ ಅವರಿಗೆ ನೀಡಿರುವ ಪ್ರಶಸ್ತಿ ಪತ್ರ ಹೀಗೆ ಹೇಳುತ್ತದೆ. ಇವರು ನವಯುಗದ ಪ್ರವಾದಿ, ದಕ್ಷಿಣ ಪೂರ್ವ ಏಷ್ಯಾದಲ್ಲಿನ ಸಾಕ್ರೆಟಿಸ್‌. ಕ್ರಾಂತಿಕಾರಕ ಬದಲಾವಣೆಗಳ ಪಿತಾಮಹರಾದ ಈತ ಎಲ್ಲಾ ರೀತಿಯ ಅಜ್ಞಾನ, ಮೂಢನಂಬಿಕೆ, ಕಟ್ಟುಪಾಡು, ಮನುಷ್ಯ ಮನುಷ್ಯನ ನಡುವಿನ ಭೇಧಗಳಿಗೆ ಕಡುವಿರೋಧಿಯಾಗಿದ್ದಾರೆ" ಎನ್ನುವ ಮಾತುಗಳನ್ನು ನೆನಪಿಸಿಕೊಂಡರು.   

ಮತ್ತೂರ್ವ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಸೋಮಶೇಖರ ಕನಕಾಚಲ ಮಾತನಾಡಿ ’ದ್ರಾವಿಡರ ಸ್ವಾಭಿಮಾನ’ ಎಂಬುದು ರಾಮಸ್ವಾಮಿ ಅವರ ಕ್ರಾಂತಿಕಾರಕ ಮಾತು. ಹಿಂದಿಯನ್ನು ರಾಷ್ಟ್ರಭಾಷೆ ಎಂದು ಮಾಡಿ ಅದರಡಿಯಲ್ಲಿ ದ್ರಾವಿಡ ಸಂಸ್ಕೃತಿಯನ್ನು ನಾಶಮಾಡುವ ಪ್ರವೃತ್ತಿಯನ್ನು ಅವರು ವಿರೋಧಿಸಿದರು. ಒಂದು ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಭಾಷೆಯನ್ನೇ ಅಳವಡಿಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯ ಅವರದು. ಸ್ವಾತಂತ್ರ ಹೋರಾಟದ ಚಳುವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು. ಈ ದೇಶವನ್ನ ಎಂದಿಗಾದರೂ ಶತಮಾನಗಳಷ್ಟು ಹಿಂದಕ್ಕೆ ಸರಿಸಿಬಿಡಬಹುದಾದ ಶಕ್ತಿ ಇರುವುದು ಇಲ್ಲಿನ ಕೋಮುವಾದ ಮತ್ತು ಜಾತಿವಾದಗಳಿಗಿದೆ ಎಂದು ಪೆರಿಯಾರ್ ಭಾವಿಸಿದ್ದರು. ಇದನ್ನೇ ಬುದ್ಧ, ಬಸವ, ಕನಕ, ಅಂಬೇಡ್ಕರ್, ಕುವೆಂಪು ಅವರೆಲ್ಲಾ ಮಾಡಿದ್ದು ಎನ್ನುವುದು ಗಮನಾರ್ಹವೆಂದರು.   

ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ವಿಠ್ಠಲ ಕೋಳಿ ಎಲ್ಲರನ್ನೂ ಸ್ವಾಗತಿಸಿದರು. ಕು. ಬಸವರಾಜ ಕಮತರ ಪ್ರಾರ್ಥಿಸಿದರು. ಕು. ಮೇಘಾ ಮುದ್ದಿ ನಿರೂಪಿಸಿದರು. ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.