ಕೊಪ್ಪಳ 27: ಜನಗಣತಿ 2021 ರ ಕರ್ತವ್ಯಕ್ಕೆ ನೇಮಿಸಿದ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳು ಜನಗಣತಿ ಪ್ರಕ್ರಿಯೆ ಕುರಿತು ಯಾವುದೇ ಗೊಂದಲಕ್ಕೆ ಆಸ್ಪದ ಕೊಡದಂತೆ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದರು.
ಜಿಲ್ಲಾ ಪಂಚಾಯತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಇಂದು (ಫೆ.27) ಆಯೋಜಿಸಲಾಗಿದ್ದ ಭಾರತ ಜನಗಣತಿ 2021, ಮನೆಪಟ್ಟಿ ಮತ್ತು ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಪರಿಷ್ಕರಣೆಯ ಜಿಲ್ಲಾ, ತಾಲ್ಲೂಕು, ನಗರ ಹಾಗೂ ಪಟ್ಟಣ ಜನಗಣತಿ ಅಧಿಕಾರಿಗಳ 2 ದಿನದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತದ ಜನಗಣತಿ -2021 ಪ್ರಕ್ರಿಯೆಯಲ್ಲಿ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಸಂಪೂರ್ಣ ಮಾಹಿತಿ ಹೊಂದಿರಬೇಕು. ಜನಗಣತಿ ಮಾಡುವ ಸಂದರ್ಭ ಅಧಿಕಾರಿಗಳಿಗೆ ಯಾವುದೇ ಸಣ್ಣ ಸಮಸ್ಯೆ, ಗೊಂದಲಗಳಿದ್ದಲ್ಲಿ ಕೂಡಲೇ ಅವುಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಹಾರವನ್ನು ಕಂಡುಕೊಳ್ಳಬೇಕು. ಮುಖ್ಯವಾಗಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹೆಚ್ಚು ಸಕ್ರಿಯರಾಗಬೇಕು. ಕಳೆದ ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸಿದಷ್ಟೇ ಅಚ್ಚುಕಟ್ಟಾಗಿ ಜನಗಣತಿ ಕರ್ತವ್ಯವನ್ನು ನಿರ್ವಹಿಸಬೇಕು. ಜನಗಣತಿ ಕರ್ತವ್ಯಕ್ಕೆ ನೇಮಿಸಿದ ಅಧಿಕಾರಿಗಳು ಎನ್.ಪಿ.ಆರ್, ಎನ್.ಆರ್.ಸಿ, ಸಿ.ಎ.ಎ ಗಳ ನಡುವಿನ ವ್ಯತ್ಯಾಸಗಳ ಕುರಿತು ಸಂಪೂರ್ಣ ತಿಳುವಳಿಕೆ ಹೊಂದಿರಬೇಕು. ಜನಗಣತಿ ಕುರಿತು ಯಾವುದೇ ಸಂದರ್ಭದಲ್ಲಿ ಸಮಸ್ಯೆ ಅಥವಾ ಗೊಂದಲ ಉಂಟಾದಲ್ಲಿ ಮೇಲಾಧಿಕಾರಿಗಳನ್ನು ಸಂಪಕರ್ಿಸಿ ಪರಿಹರಿಸಿಕೊಳ್ಳಿ. ಈ ಬಾರಿಯ ಜನಗಣತಿಯಲ್ಲಿ ಎಲ್ಲ ಅಧಿಕಾರಿಗಳು ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿ, ಜನಗಣತಿಯಲ್ಲಿ ಜಿಲ್ಲೆಗೆ ಮೊದಲ ಸ್ಥಾನ ತರುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ ಮಾತನಾಡಿ, ಜನಗಣತಿಯು ಏಪ್ರಿಲ್ 15 ರಿಂದ ಆರಂಭವಾಗಿ 18 ತಿಂಗಳುಗಳ ಕಾಲ ವಿವಿಧ ಹಂತಗಳಲ್ಲಿ ನಡೆಯಲಿದೆ. ಜನಗಣತಿ ಪ್ರಕ್ರಿಯೆಯ ಪೂರ್ವ ಸಿದ್ಧತೆಗಳು ಹಾಗೂ ಅಗತ್ಯ ನಕ್ಷೆಗಳು, ನಮೂನೆಗಳನ್ನು ತಯಾರು ಮಾಡುವುದು ಸೇರಿದಂತೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಈ ಕುರಿತು ತರಬೇತಿ ನೀಡಲು ರಾಜ್ಯಮಟ್ಟದಲ್ಲಿ ಜಿಲ್ಲೆಯ ಇಬ್ಬರು ಮಾಸ್ಟರ್ ತರಬೇತುದಾರರನ್ನು ತರಬೇತುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಜನಗಣತಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ 500 - 600 ಜನಸಂಖ್ಯೆಗೆ, 150-200 ಮನೆಗಳಿಗೆ ಒಬ್ಬ ಅಧಿಕಾರಿಯಂತೆ ನೇಮಕ ಮಾಡಿ ಜನಗಣತಿ ನಡೆಸಲು ತರಬೇತಿ ನೀಡಲಾಗುವುದು. ರಾಷ್ಟ್ರೀಯ ಜನಗಣತಿ ಇಲಾಖೆಯಿಂದ ಸಂಖ್ಯೆ 1 ರಿಂದ 13 ರವರೆಗೆ ಸುತ್ತೋಲೆಗಳು ಬಂದಿವೆ. ಜನಗಣತಿಯ ವ್ಯವಸ್ಥಿತ ನಿರ್ವಹಣೆಗೆ ಮಾರ್ಗಸೂಚಿಗಳು, ಸೂಚನೆಗಳು ಇರುವ ಕೈಪಿಡಿಗಳು ಕೂಡ ಬಂದಿದ್ದು ಜನಗಣತಿ ಅಧಿಕಾರಿಗಳಿಗೆ ಅವುಗಳನ್ನು ನೀಡಲಾಗುತ್ತದೆ. ಅವುಗಳನ್ನು ಸರಿಯಾಗಿ ಓದಿ ಅಥರ್ೈಸಿಕೊಂಡು ವ್ಯವಸ್ಥಿತ ಜನಗಣತಿ ಪ್ರಕ್ರಿಯೆ ನಡೆಸಬೇಕು. 2011 ರ ಜನಗಣತಿಯ ಆಧಾರದಲ್ಲಿಯೇ 2021 ರ ಜನಗಣತಿಯನ್ನು ಮಾಡಬೇಕಾಗಿರುವುದರಿಂದ ಜನವಸತಿ, ಜನವಸತಿ ರಹಿತ ಪ್ರದೇಶಗಳಲ್ಲಿ ಹೆಚ್ಚು ಜಾಗರೂಕತೆಯಿಂದ ದತ್ತಾಂಶಗಳನ್ನು ಸಂಗ್ರಹಿಸಬೇಕಾಗುತ್ತದೆ. ಕಳೆದ ಜನಗಣತಿ ಸಂದರ್ಭ ಜನವಸತಿ ರಹಿತ ಪ್ರದೇಶವಾಗಿದ್ದ ಸ್ಥಳ ಇಂದು ಜನವಸತಿಯಿಂದ ಕೂಡಿರಬಹುದು. ಕುಟುಂಬಗಳಲ್ಲಿ ಜನನ ಮತ್ತು ಮರಣ ಹಾಗೂ ಇತರ ಕಾರಣಗಳಿಂದ ಜನಸಂಖ್ಯೆಯಲ್ಲಿ ವ್ಯತ್ಯಾಸಗಳೂ ಇರಬಹುದು. ಅವುಗಳನ್ನು ನೀಡಿದ ನಮೂನೆಯಲ್ಲಿ ಸರಿಯಾಗಿ ಭತರ್ಿ ಮಾಡಬೇಕು. ಈ ಬಾರಿಯ ಜನಗಣತಿಯಲ್ಲಿ ಆಂಡ್ರಾಯ್ಡ್ ಮೊಬೈಲ್ಗಳಲ್ಲಿ ಅಪ್ಲಿಕೇಶನ್ ಬಳಸಿಕೊಂಡು ದತ್ತಾಂಶಗಳನ್ನು ಅಪ್ಲೋಡ್ ಮತ್ತು ಡೌನ್ಲೋಡ್ ಮಾಡಬೇಕಾಗಿರುವುದರಿಂದ ಎಲ್ಲ ಜನಗಣತಿ ಅಧಿಕಾರಿಗಳು ಅಪ್ಲಿಕೇಶನ್ ಬಳಕೆ ಕುರಿತು ತಿಳಿದುಕೊಳ್ಳಬೇಕು. ತಹಶೀಲ್ದಾರರ ಮೇಲೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ತಮ್ಮ ವ್ಯಾಪ್ತಿಯ ಕಂದಾಯ ಗ್ರಾಮಗಳು ಸೇರಿದಂತೆ ಎಲ್ಲ ರೀತಿಯ ಮಾಹಿತಿ ನಿಮಗೆ ತಿಳಿದಿರಬೇಕು. ಜನಗಣತಿಗಾಗಿಯೇ 4 ಜಿಲ್ಲಾ ಆಫೀಸರ್, ಇಬ್ಬರು ಮಾಸ್ಟರ್ ಟ್ರೈನರ್ಸ್, 19 ಚಾಜರ್್ ಆಫೀಸರ್ಸ್, ಟೆಕ್ನಿಕಲ್ ಆಫೀಸರ್, ತಹಶೀಲ್ದಾರರು ಮತ್ತು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಎಲ್ಲ ಅಧಿಕಾರಿಗಳು ಶಿಸ್ತಿನಿಂದ ಹಾಗೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ, ತರಬೇತಿಯನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಉಪವಿಭಾಗಾಧಿಕಾರಿ ಸಿ.ಡಿ.ಗೀತಾ, ತಹಶೀಲ್ದಾರ ಜೆ.ಬಿ. ಮಜ್ಜಗಿ, ನಗರಸಭೆ ಪೌರಾಯುಕ್ತ ಮಂಜುನಾಥ, ಜಿಲ್ಲೆಯ ಎಲ್ಲ ತಹಶೀಲ್ದಾರರು, ಉಪನ್ಯಾಸಕರಾದ ಪ್ರಭುರಾಜ ನಾಯಕ, ಜನಗಣತಿ ನೋಡಲ್ ಅಧಿಕಾರಿ ಜಲೀಲ್ ಅಹಮದ್, ಶ್ರೀರಾಮುಲು ಸೇರಿದಂತೆ ಜನಗಣತಿ ಅಧಿಕಾರಿಗಳು ಉಪಸ್ಥಿತರಿದ್ದರು.