ನವದೆಹಲಿ/ ಬೆಂಗಳೂರು, ಸೆ 7: ಚಂದ್ರನ ಅತ್ಯಂತ ಸನಿಹಕ್ಕೆ ತಲುಪಿದರೂ, ಅದರ ಮೇಲ್ಮೈ ಸ್ಪರ್ಶಿಸಲು ವಿಫಲವಾಗಿರುವ ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಉಪಗ್ರಹ ಒಟ್ಟಾರೆ ಕ್ರಮಿಸಿದ್ದು ಬರೋಬ್ಬರಿ 3,83,998 ಕಿಮೀ ದೂರದ ಹಾದಿಯನ್ನು!
ಭೂಮಿಯಿಂದ ಚಂದ್ರನ ಮೇಲ್ಮೈಗೆ ಇದ್ದ ಒಟ್ಟ 3,84,000 ಕಿಮೀ ಪೈಕಿ ಉಪಗ್ರಹ 3,83,998 ಕಿಮೀ ಕ್ರಮಿಸಿದ್ದು, ಕೇವಲ 2.1 ಕಿಮೀ ಎತ್ತರದಲ್ಲಿ, ಅಂದರೆ, ಶೇ. 0.0006 ರಷ್ಟು ಅಂತರದಲ್ಲಿ ತನ್ನ ಪಥ ಬದಲಿಸಿದೆ. ಇದರಿಂದ ಇಸ್ರೋ ಸಂಸ್ಥೆ ತನ್ನ ಯೋಜನೆಯಲ್ಲಿ ಶೇ. 99.5ಕ್ಕೂ ಹೆಚ್ಚಿನ ಪ್ರಮಾಣದ ಯಶಸ್ಸು ಕಂಡಿದ್ದು, ಕೊನೆಯ ಕ್ಷಣದ ಸೋಲು ವಿಜ್ಞಾನಿಗಳ ಸ್ಥೈರ್ಯ, ಉತ್ಸಾಹವನ್ನು ಕುಗ್ಗಿಸಿಲ್ಲ.
ಆದರೆ, ಅಂತಿಮ ಕ್ಷಣದ ವೈಫಲ್ಯದ ಬೆನ್ನಲ್ಲೇ ಇಸ್ರೋ, ಎರಡನೇ ಬಾರಿಗೆ ಆರ್ಬ್ಟರ್ ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದು, ಅದರಿಂದ ಭೂಮಿಗೆ ಸಂದೇಶಗಳು ರವಾನೆಯಾಗುತ್ತಿವೆ. ಇದು ಒಂದು ವರ್ಷಗಳ ಕಾಲ ಚಂದ್ರನನ್ನು ಸುತ್ತಲಿದ್ದು, ಅಲ್ಲಿನ ವಿಶೇಷ ಗುಣಲಕ್ಷಣಗಳ ಮಾಹಿತಿ ನೀಡಲಿದೆ. 2008ರಲ್ಲಿ ಉಡಾವಣೆಗೊಂಡಿದ್ದ ಚಂದ್ರಯಾನ-1 ಉಪಗ್ರಹದ ಆರ್ಬ್ಟರ್ 2009ರವರೆಗೆ ಸಕ್ರಿಯವಾಗಿತ್ತು. ಅದರ ನಂತರ ಇಸ್ರೊ ಎರಡನೇ ಬಾರಿಗೆ ಆರ್ಬ್ಟರ್ ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಚಂದ್ರಯಾನ -2ರ ಲ್ಯಾಂಡರ್ ತನ್ನ ವೇಗ ಕುಗ್ಗಿಸಿಕೊಳ್ಳಲು ವಿಫಲವಾಗಿ ಕೊನೆಯ 2.1 ಕಿಮೀ ಅಂತರದಲ್ಲಿ ಪಥ ಬದಲಿಸಿ, ಸಂಪರ್ಕ ಕಡಿದುಕೊಂಡ ನಂತರ ವಿಜ್ಞಾನಿಗಳಿಗೆ ಸಾಂತ್ವನ ಹೇಳಿದ್ದ ಪ್ರಧಾನಿ ಮೋದಿ, ಶನಿವಾರ ಮುಂಜಾನೆ ಮತ್ತೊಮ್ಮೆ ಎಲ್ಲಾ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿ ಹುರಿದುಂಬಿಸಿದ್ದಾರೆ.
ನಾವು ಸಾಕಷ್ಟು ಹತ್ತಿರ ತಲುಪಿದ್ದೆವು. ಆದರೆ, ನಾವು ನಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕಿದೆ. ನಮ್ಮ ವೈಭವಯುತ ಇತಿಹಾಸದಲ್ಲಿ, ಹಲವು ಅಡೆತಡೆಗಳನ್ನು ಎದುರಿಸಿದ್ದೇವೆ. ಅದು ನಮ್ಮ ವೇಗವನ್ನು ಕುಂಠಿತಗೊಳಿಸಿದೆಯೇ ಹೊರತು, ಸ್ಫೂರ್ತಿಯನ್ನು ಪತನಗೊಳಿಸಿಲ್ಲ. ಮತ್ತೊಮ್ಮೆ ಎದ್ದುನಿಂತು ಅಪೂರ್ವ ಸಾಧನೆಗಳನ್ನು ಮಾಡಿದ್ದೇವೆ. ಇದು ನಮ್ಮ ನಾಗರೀಕತೆಯ ಹೆಮ್ಮೆ. ನಿಮ್ಮೊಂದಿಗೆ ಇಡೀ ದೇಶವೇ ನಿಂತಿದೆ. ದೃಢವಾಗಿ ನಿಂತು ಮುಂದಿನ ಗುರಿಯತ್ತ ಗಮನ ಹರಿಸಿರಿ. ಈ ಘಟನೆಯಿಂದ ಚಂದ್ರನನ್ನು ತಲುಪುವ, ಆವರಿಸುವ ಸಂಕಲ್ಪ ಇನ್ನಷ್ಟು ದೃಢವಾಗಿದೆ ಎಂದು ಪ್ರೋತ್ಸಾಹಿಸಿದರು.
ಈ ಮಾತುಗಳ ನಂತರ ಕೇಂದ್ರದಿಂದ ಹೊರನಡೆಯುತ್ತಿದ್ದ ಮೋದಿ ಅವರನ್ನು ಭೇಟಿಯಾದ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು ಭಾವುಕರಾದರು. ಅಗ ಮೋದಿ ಅವರನ್ನು ಬಾಚಿ ತಬ್ಬಿಕೊಂಡು ಸಂತೈಸಿದರು. ಇದರಿಂದ ಇನ್ನಷ್ಟು ಭಾವತೀವ್ರತೆಗೊಳಗಾದ ಶಿವನ್ ಬಿಕ್ಕಿ ಬಿಕ್ಕಿ ಅತ್ತು, ಯೋಜನೆಯ ಸೋಲಿನ ದುಃಖ ತೋಡಿಕೊಂಡರು.
ಇಸ್ರೋ ಸಾಧನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ರಾಜಕಾರಣಿಗಳು, ಕ್ರೀಡಾಪಟುಗಳು, ಬಾಲಿವುಡ್ ನಟರು ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದು, ವೈಫಲ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.