ಪಾರ್ಲಿ, ಅ 17: ಜಮ್ಮು ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕುರಿತು ಟೀಕೆ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಮತ್ತಿತರರ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರದಾನಿ ನರೇಂದ್ರ ಮೋದಿ, 'ಸುಳ್ಳು ಟೀಕೆಗಳಿಗೆ' ಜನರು ಅವರನ್ನು ಶಿಕ್ಷಿಸಲಿದ್ದಾರೆ ಎಂದರು.
ಇಲ್ಲಿನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಅವರು, ಮುಂದೊಂದು ದಿನ 370ನೇ ವಿಧಿಯ ರದ್ದತಿ ಕುರಿತು ಚರ್ಚಿಸಿದಾಗಲೆಲ್ಲಾ, ದೇಶದ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರವನ್ನು ಟೀಕಿಸಿದವರನ್ನು ಕೂಡ ಸ್ಮರಿಸಲಾಗುತ್ತದೆ. ಕಾಂಗ್ರೆಸ್ ನಾಯಕರೊಬ್ಬರು 370ನೇ ವಿಧಿಯನ್ನು ಹಿಂಪಡೆಯುವ ಮೂಲಕ ನಾವು ಕಾಶ್ಮೀರವನ್ನೇ ಸಂಪೂರ್ಣವಾಗಿ ಕಳೆದುಕೊಂಡೆವು ಎಂದರು. ಇನ್ನೋರ್ವರು, ಇದು ವ್ಯಕ್ತಿಯನ್ನು ಹತ್ಯೆ ಮಾಡಿದಂತೆ ಎಂದು ಹೋಲಿಕೆ ಮಾಡಿದರು. ಒಬ್ಬರು ಇದು ಪ್ರಜಾಪ್ರಭುತ್ವದ ಕರಾಳ ದಿನ ಎಂದರೆ ಮತ್ತೊಬ್ಬರು ದೇಶದಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದರು. ನಿಜವಾಗಿಯೂ ನಾವದನ್ನು ಕಳೆದುಕೊಂಡಿದ್ದೇವೆಯೇ? ದೇಶವನ್ನು ಸುದೀರ್ಘ ಅವಧಿಗೆ ಆಳಿದ ಪಕ್ಷದ ನಾಯಕರು ಹೀಗೇಕೆ ಮಾತನಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ಸಿಗರು ಕಾಶ್ಮೀರದ ವಿವಾದ ಭಾರತದ ಆಂತರಿಕ ವಿಷಯವಲ್ಲ ಎನ್ನುತ್ತಾರೆ. ಈ ನಿರ್ಧಾರದಿಂದ ದೇಶವೇ ನಾಶವಾಯಿತು ಎನ್ನುತ್ತಾರೆ. ಇಂತಹ ಹೇಳಿಕೆ ನೀಡುವವರನ್ನು ನೀವು ಕ್ಷಮಿಸುತ್ತೀರೇನು ಎಂದು ಪ್ರಶ್ನಿಸಿದರು.
ಜನರು ಅವಕಾಶ ದೊರೆತಾದ ಖಂಡಿತವಾಗಿಯೂ ಅವರನ್ನು ಶಿಕ್ಷಿಸುತ್ತಾರೆ.ಮಹಾರಾಷ್ಟ್ರದ ಜನರಿಗೆ ಮೊದಲು ಆ ಅವಕಾಶ ದೊರೆತಿದೆ ಎಂದರು.
ಬಿಜೆಪಿ ಕಾರ್ಯಕರ್ತರು ಅಷ್ಟೇಕೆ ಶ್ರಮವಹಿಸುತ್ತಾರೆ ಎಂದು ವಿಪಕ್ಷಗಳು ತಲೆ ಕೆಡಿಸಿಕೊಂಡಿವೆ. ಆದರೆ, ಬಿಜೆಪಿ ಪಕ್ಷದ ನಾಯಕರು ಹಾಗೂ ಜನರ ಮನ ಗೆಲ್ಲಲು ಶ್ರಮ ಪಡುವುದು ಅನಿವಾರ್ಯ. ಆದರೆ,ಬಹುತೇಕ ಕಾಂಗ್ರೆಸ್ಸಿಗರು ಪರಸ್ಪರ ದ್ವೇಷ ತೀರಿಸಿಕೊಳ್ಳುವುದರಲ್ಲೇ ಸಮಯ ಕಳೆಯುತ್ತಿದ್ದಾರೆ. ಕಿರಿಯರು ಪಕ್ಷ ಬಿಡುತ್ತಿದ್ದರೆ, ಹಿರಿಯರು ಅಸಮಾಧಾನಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಹಾರಾಷ್ಟ್ರದಲ್ಲಿ 2022ರ ವೇಳೆಗೆ 'ಜಲ ಜೀವನ' ಯೋಜನೆಯಡಿ ಪ್ರತಿ ಮನೆಗೆ ನೀರು ಪೂರೈಸಲು ಬಿಜೆಪಿ ಬದ್ಧವಾಗಿದೆ. ಈ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ ನೀರಿಗಾಗಿ 3.5 ಲಕ್ಷ ಕೋಟಿ ರೂ. ವ್ಯಯಿಸಲಾಗುವುದು. ನೀರು ಸಂರಕ್ಷಣೆಗಾಗಿ ದೇಶದ ಅಥವಾ ವಿಶ್ವದ ಇತಿಹಾಸದಲ್ಲೇ ಇಂತಹ ಗಂಭೀರ ಪ್ರಯತ್ನಗಳು ನಡೆದಿರಲಿಲ್ಲ ಎಂದರು.
ಮಹಾರಾಷ್ಟ್ರದಲ್ಲಿ ಬರ ಪರಿಸ್ಥಿತಿ ಎದುರಾದಾಗ ಸರ್ಕಾರ ತಕ್ಷಣ ನೆರವು ಒದಗಿಸಿದೆ. ವಿಪತ್ತು ನಿರ್ವಹಣೆಯಿಂದ ಬೆಳೆ ವಿಮೆಯವರೆಗೆ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸಿದೆ. ಇಂದು ಪ್ರತಿ ರೈತ ಕೂಡ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೇರ ಲಾಭ ಪಡೆಯುತ್ತಿದ್ದಾರೆ ಎಂದರು.
ಇಂದು ರಾಜ್ಯದಲ್ಲಿ ರೈಲು, ರಸ್ತೆ, ಸೇತುವೆ, ಆಸ್ಪತ್ರೆಯಂತಹ ಮೂಲಭೂತ ಸೌಕರ್ಯಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತಿವೆ. ಮರಾಠವಾಡ ಪ್ರದೇಶವೊಂದರಲ್ಲೇ 50 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದರು.
ಇಂದು ನನಗೆ ಇಬ್ಬರು ದೇವರನ್ನು ಪೂಜಿಸುವ ಅವಕಾಶ ಲಭಿಸಿದೆ. ನಾನಿಲ್ಲಿಗೆ ಬಂದ ತಕ್ಷಣ ಬಾಬ ವೈದ್ಯನಾಥ್ ಅವರ ಆಶಿರ್ವಾದ ಪಡೆದೆ. ನಂತರ, ಈ ಬೃಹತ್ ಜನತಾ ಜನಾರ್ಧನರನ್ನು(ಜನರು) ಭೇಟಿ ಮಾಡುವ ಅವಕಾಶ ಲಭಿಸಿತು. ಜನರು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸುವಂತೆ ಬಿಜೆಪಿ ಪಕ್ಷವನ್ನು ಆಶಿರ್ವದಿಸಲಿದ್ದಾರೆ ಎಂಬ ನಂಬಿಕೆ ನಮಗಿದೆ ಎಂದರು.
ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಅ.21ರಂದು ಚುನಾವಣೆ ನಡೆಯಲಿದ್ದು, ಅ. 24ರಂದು ಮತ ಎಣಿಕೆ ನಡೆಯಲಿದೆ.