ಪೀರಸಾಬ ಕೌತಾಳ ಅಂದ್ರೆ ಸರ್ವ ಕ್ಷೇತ್ರಗಳ ಸೇವಕ...ಮಾನವ ಧರ್ಮ ಸಾಧಕ

ಪೀರಸಾಬ ಕೌತಾಳ ಅಂದ್ರೆ ಸರ್ವ ಕ್ಷೇತ್ರಗಳ ಸೇವಕ...ಮಾನವ ಧರ್ಮ ಸಾಧಕ Peerasaba Kautala means servant of all spheres...successor of human religion

ಗದಗ 02: ಒಬ್ಬ ವ್ಯಕ್ತಿ ಸರ್ವರೊಳಗೆ ಒಂದಾಗಿ ಅರಿತು ಬೆರೆತು ನಡೆದರೆ ಎಂತಹ ಅಧ್ಬುತ ಶಕ್ತಿಯಾಗಿ ಕಾಣಬಲ್ಲರು ಎಂಬುದಕ್ಕೆ ’ಸರ್ವ ಕ್ಷೇತ್ರಗಳ ಸೇವಕ, ಮಾನವ ಧರ್ಮದ ಸಾಧಕ’ರಾಗಿರುವ ಪೀರಸಾಬ ಕೌತಾಳ ಸ್ಪಷ್ಟ ಉದಾಹರಣೆಯಾಗಿದ್ದಾರೆ.’ತನ್ನ ಧರ್ಮವನ್ನು ಪ್ರೀತಿಸು ಇತರ ಧರ್ಮಗಳನ್ನು ಗೌರವಿಸು’ ಎಂಬುದನ್ನು ಪಾಲಿಸುವಲ್ಲಿ ಯಶಸ್ವಿಯಾಗಿರುವ ಪೀರಸಾಬ ಕೌತಾಳ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಸೇರಿದಂತೆ ಸರ್ವ ಕ್ಷೇತ್ರಗಳ ನಿಸ್ವಾರ್ಥ ಸೇವಕರಾಗಿ  ಎಲ್ಲರಲ್ಲಿ ಆಕರ್ಷಿತರಾಗಿದ್ದಾರೆ. ಸದಾ ಲವಲವಿಕೆಯೊಂದಿಗೆ ಸ್ನೇಹಮಯ ನಡೆ ನುಡಿಯಲ್ಲಿ ಎಲ್ಲರನ್ನು ತನ್ನತ್ತ ಸೆಳೆದುಕೊಳ್ಳುತ್ತಾ ಸಾಮಾಜಿಕ ಸೇವೆಯಲ್ಲಿ ಸಾಗಿರುವ ಪೀರಸಾಬ ಕೌತಾಳರ ಸಾಧನೆ ನಿಜಕ್ಕೂ ಹುಬ್ಬೇರಿಸಿ, ಕಣ್ಣರಳಿಸಿ ಕಾಣುವಂತಿದೆ.

ಒಂದು ಕಾಲದಲ್ಲಿ ಹೊಡಿ ಬಡಿ ನಡೆ ನುಡಿಯ, ಒರಟು ಸ್ವಭಾವದ ಪೀರಸಾಬ ಕೌತಾಳರ ಈಗಿನ ಬದಲಾವಣೆಗಳನ್ನು ಕಂಡರೆ ಆಶ್ಚರ್ಯವೆನಿಸದೆ ಇರಲಾಗದು.ಭಕ್ತ ಮಾರ್ಗದ ಅನುಕರಣೆಯಲ್ಲಿ, ಸಾಮಾಜಿಕ ಸೇವೆಯ ಚಿಂತನೆಯಲ್ಲಿ, ಮಾನವೀಯ ಮೌಲ್ಯಗಳ ಅಳವಡಿಕೆಯೊಂದಿಗೆ ಎಲ್ಲ ಧರ್ಮದ  ಆಚಾರ, ವಿಚಾರದ ರಸತತ್ವದ ಅಡಿಯಲ್ಲಿ ವಿವಿಧ ರೀತಿಯ ಸೇವಾ ಕಂಕೈರ್ಯಗಳಲ್ಲಿ ಸಾಗುತ್ತಿರುವ ಪೀರಸಾಬ ಕೌತಾಳರನ್ನು ನೋಡಿದಾಗ ’ವಾಲ್ಮೀಕಿ ಮಹರ್ಷಿಗಳ’ ಜೀವನ ಯಶೋಗಾಥೆ ನೆನಪಾಗದೆ ಇರಲಾರದು.ಕಿರಿಯ ವಯಸ್ಸಿನಲ್ಲಿ ಗದಗ ಬೆಟಗೇರಿ ನಗರಸಭೆಯ 17 ಮತ್ತು 18 ನೇ ವಾರ್ಡದಿಂದ ಸತತವಾಗಿ ಗೆಲುವು ಸಾಧಿಸುತ್ತಾ ಸೋಲಿಲ್ಲದ ಸರದಾರ ಎಂಬ ಪ್ರಶಂಸೆಗೆ ಪಾತ್ರರಾದ ಪೀರಸಾಬ ಕೌತಾಳ ನಗರಸಭೆಯ ಅಧ್ಯಕ್ಷರಾಗಿ ಮಾಡಿದ ಸಾಧನೆ, ಅವಳಿ ನಗರಕ್ಕೆ ಕೊಟ್ಟ ಕೊಡುಗೆ ಇತಿಹಾಸದ ಪುಟಗಳಲ್ಲಿ ದಾಖಲೆ ಸೃಷ್ಟಿಸಿದೆ ಅಲ್ಲದೆ ಇತರರಿಗೆ ಮಾದರಿ ಎನ್ನುವಂತಿದೆ.

ಇತ್ತೀಚೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿ ಆಡಳಿತ ನಡೆಸಿದ್ದ ಪೀರಸಾಬ ಕೌತಾಳ ವಾ.ಕ.ರ.ಸಾ.ಸಂಸ್ಥೆಗೆ ಹೊಸ ದಾರಿ ಹೊಸ ಬದುಕು ಕಟ್ಟಿಕೊಟ್ಟಿದ್ದು ಅವರ ಕ್ರೀಯಾಶಿಲ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಸಾಮೂಹಿಕ ವಿವಾಹ, ಸಾಮಾಜಿಕ ಕಾರ್ಯ ಚಟುವಟಿಕೆ, ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ, ಶಿಕ್ಷಣ ಪ್ರಸಾರದ ಚಿಂತನೆ, ಸರ್ವ ಧರ್ಮದ ಧಾರ್ಮಿಕ ಸಮನ್ವಯತೆಯ ಸಾಧನೆ, ಕೈಗೊಳ್ಳುವ ಕಾರ್ಯ ಯೋಜನೆಗಳು, ಸಾಮೂಹಿಕ ತತ್ವಾದರ್ಶಗಳ ನಡೆ-ನುಡಿ, ಧಾರ್ಮಿಕ ಅನುಷ್ಠಾನ ಸೇರಿದಂತೆ ಪ್ರತಿ ರಂಗಗಳಲ್ಲಿ ನಡೆದು ಬರುತ್ತಿರುವ  ಅವರ ಬದಲಾವಣೆಯಿಂದಾಗಿ ಇಂದು ಪೀರಸಾಬ ಕೌತಾಳ ಎಲ್ಲರನ್ನು ಸೆಳೆದುಕೊಳ್ಳುವ ವ್ಯಕ್ತಿ ಮತ್ತು ಶಕ್ತಿ ಎನ್ನುವಂತಾಗಿದ್ದಾರೆ.

ಅಂಧ ಅನಾಥ ಮಕ್ಕಳ, ದೀನ ದಲಿತರ, ಬಡವರ, ನಿರ್ಗತಿಕರ ಆಶ್ರಮ  ಡಾ.ಪಂಡಿತ ಪುಟ್ಟರಾಜರ ಪುಣ್ಯಾಶ್ರಮಕ್ಕೆ ಸಲ್ಲಿಸುವ ಸೇವೆಯಿಂದಾಗಿ ಪೀರಸಾಬ ಕೌತಾಳ ಮತ್ತು ಅವರ ಕುಟುಂಬ ಇನ್ನಷ್ಟು ಮತ್ತಷ್ಟು ಆಕರ್ಷಿತರಾಗಿದ್ದಾರಲ್ಲದೆ ಆದರ್ಶಪ್ರಾಯರಾಗಿದ್ದಾರೆ.ಎಲ್ಲ ಧರ್ಮಗಳ ಮೌಲ್ಯಯುತ ಸಾರಗಳಲ್ಲಿ ಸಾಗುತ್ತಾ ಮಾನವ ಧರ್ಮದ  ನಡೆ ನುಡಿ, ಸಾಮಾಜಿಕ, ಸಾಹಿತ್ಯಿಕ, ಸಂಗೀತ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪೀರಸಾಬ ಕೌತಾಳ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆಂದರೆ ಅತೀಶಯೋಕ್ತಿ ಎನಿಸಲಾರದು.

ಹೃದಯವಂತಿಕೆ,ಗುಣವಂತಿಕೆ, ಆತ್ಮೀಯ ಶ್ರೀಮಂತಿಕೆಯೊಂದಿಗೆ ಸಾಮಾಜಿಕ, ಸಾರ್ವತ್ರಿಕ ಸೇವಾ ಚಿಂತನೆಯಲ್ಲಿ, ಭಕ್ತಿ ಮಾರ್ಗದ ನೆಲೆ ಸೆಲೆಯಲ್ಲಿ ಸಾಗುತ್ತಿರುವ ಪೀರಸಾಬ ಕೌತಾಳ ಅವರಿಂದ ಬಹಳಷ್ಟು ಸಾಮಾಜಮುಖಿ ಸೇವೆ ದೊರೆಯಲೆಂಬುದೆ ಅವರ ಅಭಿಮಾನಿಗಳ ಅಂಬೋಣ.ಸರ್ವಧರ್ಮ, ಸರ್ವ ಕ್ಷೇತ್ರಗಳ ಸೇವಕರಾಗಿ, ಮಾನವೀಯ ಮೌಲ್ಯಗಳ ಹಿರಿಮೆ ಗರಿಮೆಯಲ್ಲಿ ಭಕ್ತಿ ಪಂಥದ ನಡೆಯಲ್ಲಿ ಜೀವನದ ನಡೆ ರೂಪಿಸಿಕೊಂಡಿರುವ ಪೀರಸಾಬ ಕೌತಾಳರಿಗೆ ಡಾ.ಪಂಡಿತ ಪುಟ್ಟರಾಜರು ಎಲ್ಲವನ್ನು ಕರುಣಿಸಲಿ ಎಂಬುದು ಸರ್ವಧರ್ಮ ಚಿಂತನಾಶೀಲ ಶಕ್ತಿಗಳ, ಪತ್ರಕರ್ತರ ಆನಂದ ಸಾಲಿಗ್ರಾಮ ಸ್ನೇಹ ಬಳಗದ ಶುಭ ಹಾರೈಕೆಯಾಗಿದೆ. ಅನಂತ ಎಸ್‌.ಕಾರ್ಕಳ, ಪತ್ರಕರ್ತರು, ಗದಗ..