ಧಾರವಾಡ 31: ಯಾವ ವಿದ್ಯಾರ್ಥಿಗೆ ಹೋರಾಟದ ಮನೋಭಾವ, ಸಾಮಾಜಿಕ ಕಳಕಳಿ ಮತ್ತು ದೇಶದ ಜನರ ಬಗ್ಗೆ ಅಭಿಮಾನ ಇರುತ್ತದೆಯೋ ಅವರಿಂದ ಮಾತ್ರ ದೇಶಕ್ಕೆ ಏನಾದರೂ ಮಾಡಲು ಸಾದ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಸಿ.ಬಿ.ಹೊನ್ನುಸಿದ್ದಾರ್ಥ ಅವರು ಹೇಳಿದರು.
ಅವರು ಇಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಓ) ಸಂಘಟನೆಯು ಧಾರವಾಡದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ 5ನೇ ಧಾರವಾಡ ಜಿಲ್ಲಾ ವಿದ್ಯಾರ್ಥಿ ಸಮ್ಮೇಳನದ ಬಹಿರಂಗ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗಿದ್ದರೆ ಸಾಲದು, ಶಿಕ್ಷಣ ಜನರಿಗೆ ಉಪಯೋಗವಾಗುವಂತಿರಬೇಕು. ಮೊದಲಿಗೆ ಶಿಕ್ಷಣ ಎಲ್ಲರಿಗೂ ಸಿಗುತ್ತಿರಲಿಲ್ಲ. ಕೇವಲ ಉಳ್ಳವರ ಪರವಾಗಿತ್ತು. ಆದರೆ ನಮ್ಮ ದೇಶದ ನವೋದಯದ ಹರಿಕಾರರಾದ ರಾಜಾರಾಂ ಮೋಹನ್ ರಾಯ್, ಈಶ್ವರಚಂದ್ರ ವಿದ್ಯಾಸಾಗರ ಮುಂತಾದವರ ಹೋರಾಟದಿಂದಾಗಿ ಆಧುನಿಕ ಶಿಕ್ಷಣ ಎಲ್ಲರಿಗೂ ಸಿಗುವಂತಾಯಿತು. ಅದನ್ನು ನಾವು ಮರೆಯಬಾರದು. ಅದೇ ರೀತಿ ಇಂದು ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳು ಲಭ್ಯವಾದರೆ ಬಡಮಕ್ಕಳು ಕಲಿಯಲು ಸಾದ್ಯವಾಗುತ್ತದೆ. ಈ ದಿಕ್ಕಿನಲ್ಲಿ ವಿದ್ಯಾರ್ಥಿ ಸಂಘಟನೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸುತ್ತ ಮತ್ತು ಅವರ ಜವಾಬ್ದಾರಿಯನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ಪ್ರಯೋಜನ ವಿದ್ಯಾರ್ಥಿಗಳು ಪಡೆಯಬೇಕು ಎಂದು ಹೇಳಿದರು.
ಭಾಷಣಕಾರರಾಗಿ ಆಗಮಿಸಿದ್ದ ಎಐಡಿಎಸ್ಓ ಸಂಘಟನೆಯ ರಾಜಾಧ್ಯಕ್ಷ ಡಾ.ಎನ್. ಪ್ರಮೋದ ಮಾತನಾಡಿ, ಇಂದು ಶಿಕ್ಷಣ ಜಾಗತಿಕ ಸರಕಾಗಿದೆ, ಮಾರಾಟದ ವಸ್ತುವಾಗಿದೆ. ಇದರ ಜೊತೆಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್.ಎಂ.ಸಿ) ಮಸೂದೆ ಅಂಗೀಕಾರ ಮಾಡಿದೆ. ಇದು ಅತ್ಯಂತ ಅಪಾಯಕಾರಿಯಾದ ಮಸೂದೆಯಾಗಿದೆ. ಇದು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮ್ಯಾನೇಜ್ಮೆಂಟ್ ಕೋಟಾವನ್ನು 15% ನಿಂದ 60%ವರೆಗೂ ಹೆಚ್ಚಿಸಿದೆ. ಇದರ ಪರಿಣಾಮ ಕೇವಲ ದುಡ್ಡಿದ್ದವರು ಮಾತ್ರ ಕಲಿಯಲು ಸಾದ್ಯವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಷ್ಟೊಂದು ದುಡ್ಡು ಕೊಟ್ಟು ಕಲಿತವರು ಹೇಗೆ ಜನರಿಗೆ ಆರೋಗ್ಯ ಸೇವೆ ಕೊಡಲು ಸಾದ್ಯ. ಈ ಮಸೂದೆ ಜಾರಿಯಾದರೆ ಕೇವಲ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾತ್ರ ಇದು ಮಾರಕವಲ್ಲ. ಇದು ಇಡೀ ಆರೋಗ್ಯ ವ್ಯವಸ್ಥೆಯನ್ನು ಹದಗೆಡಿಸುತ್ತದೆ. ಆದ್ದರಿಂದ ಹೋರಾಟ ಅನಿವಾರ್ಯ. ಎಲ್ಲ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ವಿರುದ್ಧ ಎಐಡಿಎಸ್ಓ ನೇತೃತ್ವದಲ್ಲಿ ಹೋರಾಟಗಳನ್ನು ಕಟ್ಟಲು ಮುಂಬರಬೇಕು ಎಂದು ಕರೆ ನೀಡಿದರು. ಎನ್.ಎಂ.ಸಿ. ಮಸೂದೆ ಖಂಡಿಸಿ ಗೊತ್ತುವಳಿ ಮಂಡಿಸಿ ಅಂಗೀಕರಿಸಲಾಯಿತು. ಎಐಡಿಎಸ್ಓನ ಮಹಾಂತೇಶ ಬಿಳೂರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ರಣಜಿತ್ ದೂಪದ್ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಪ್ರತಿನಿಧಿ ಅಧಿವೇಶನದಲ್ಲಿ ಶಿಕ್ಷಣದ ವ್ಯಾಪಾರೀಕರಣವನ್ನು ಖಂಡಿಸಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು ಆಗ್ರಹಿಸುವ ಮುಖ್ಯ ಗೊತ್ತುವಳಿಯನ್ನು ಮಂಡಿಸಲಾಯಿತು. ಧಾರವಾಡ ಜಿಲ್ಲೆಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸ್ಥಾಪನೆಗೆ ಆಗ್ರಹಿಸಿ ಮತ್ತು ಹೆಚ್ಚಿನ ಹಾಸ್ಟೆಲ್ಗಳನ್ನು ತೆರೆಯಲು ಆಗ್ರಹಿಸಿ ಗೊತ್ತುವಳಿಯನ್ನು ಮಂಡಿಸಿ ಅಂಗೀಕರಿಸಲಾಯಿತು.
ಅಧಿವೇಶನದ ಸಮಾರೋಪ ಭಾಷಣದಲ್ಲಿ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಧಾರವಾಡ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿಯವರು ಮಾತನಾಡಿ ನಮ್ಮ ಸ್ವಾತಂತ್ರ್ಯ ಹೋರಾಟದ ದೃವತಾರೆಗಳಾದ ಭಗತ್ಸಿಂಗ್, ನೇತಾಜಿಯವರ, ಖುಧಿರಾಂ ಬೋಸ್ ಮುಂತಾದ ಕ್ರಾಂತಿಕಾರಿಗಳು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಕ್ಕೆ ದುಮುಕಿದವರು. ಅವರ ಹೋರಾಟದ ಬದುಕಿನಿಂದ ಸ್ಪೂರ್ತಿಯನ್ನು ಪಡೆಯಬೇಕು. ವಿದ್ಯಾರ್ಥಿ ಜೀವನ ಎನ್ನಾದರೂ ಸಾಧಿಸುವ, ಸಮಾಜಕ್ಕೆ ಕೊಡುಗೆಗಳನ್ನು ಕೊಡುವ ಹುಮ್ಮಸ್ಸನ್ನು ಹೊಂದಿರುವ ಘಟ್ಟವಾಗಿದೆ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವವನ್ನು ಬೆಳೆಸಿಕೊಂಡು ಸರಿಯಾದ ವಿಚಾರಗಳಡಿಯಲ್ಲಿ ಸಂಘಟಿತರಾಗಬೇಕೆಂದು ಕರೆ ನೀಡಿದರು.
ಎಐಡಿಎಸ್ಓ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಮಹಾಂತೇಶ ಬಿಳೂರು, ಜಿಲ್ಲಾ ಕಾರ್ಯದರ್ಶಿಯಾಗಿ ರಣಜಿತ್ ದೂಪದ್, ಜಂಟಿ ಕಾರ್ಯದರ್ಶಿಯಾಗಿ ಶಶಿಕಲಾ ಮೇಟಿ, ಕಛೇರಿ ಕಾರ್ಯದರ್ಶಿಯಾಗಿ ಸಿಂಧು ಕೌದಿ ಆಯ್ಕೆಯಾದರು. ಇದರ ಜೊತೆಗೆ 27 ವಿದ್ಯಾರ್ಥಿಗಳ ಬಲಿಷ್ಠ ಜಿಲ್ಲಾ ಕೌನ್ಸಿಲ್ ಅನ್ನು ಆಯ್ಕೆ ಮಾಡಲಾಯಿತು.