ಪಕ್ಷ ನಿಷ್ಠರಿಗೆ ಕಾಲವಿಲ್ಲ: ಶಾಸಕ ಆನಂದ್ ಮಾಮನಿ ಅಸಮಾಧಾನ

ಬೆಂಗಳೂರು, ಫೆ.4 ,ಪಕ್ಷ ನಿಷ್ಠರಿಗೆ ಕಾಲವಿಲ್ಲ ಎಂದು ಬಿಜೆಪಿ ಶಾಸಕ ಆನಂದ ಮಾಮನಿ ಟ್ವೀಟ್‌ ಮೂಲಕ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. " ಇನ್ಮೇಲೆ ಪಕ್ಷ ನಿಷ್ಠರಿಗೆ ಕಾಲವಿಲ್ಲವೇ, ಎಂಬುದು ಯಕ್ಷಪ್ರಶ್ನೆ. ಇದು ಪಕ್ಷ ನಿಷ್ಠರಿಗೆ ಹಾಗೂ ಮತದಾರರಿಗೆ ಆದ ಘೋರ ಅಪಮಾನ ಅಲ್ಲದೇ ಇನ್ನೇನು, ಎಂಬ ವಿಚಾರ ಎಲ್ಲರಲ್ಲೂ ಸ್ಪಷ್ಟ ಮೂಡಿದೆ. ಕಾಯ್ದು ನೋಡಬೇಕು. ಆದರೆ, ಮುಂದಿನ ನಡೆ ವಿಚಾರ ಮಾಡುವಂತದ್ದು ಎಂದು ಅವರು ಟ್ವೀಟ್ ಮಾಡಿದ್ದಾರೆ. 

ಇನ್ನಾದರೂ ನನ್ನ ಕ್ಷೇತ್ರವನ್ನು ಹಾಗೂ ನಮ್ಮಂಥವರನ್ನು ಬೆಳೆಸಲು, ಈಗಾಗಲೇ ಸಾಕಷ್ಟು ಬಾರಿ ಇಲ್ಲಿವರೆಗೆ ಸರ್ಕಾರದಲ್ಲಿ ಅಧಿಕಾರ ಅನುಭವಿಸಿದವರು  ಯಾವತ್ತೂ ತಾವು ಪಡೆದ ಸ್ಥಾನಮಾನ ಕಿಂಚಿತ್ತೂ ತ್ಯಜಿಸಲು ಹಿಂದೆಟು ಹಾಕುತ್ತಿರುವುದು ಒಂದೆಡೆಗಾದರೆ, ಪಕ್ಷದ ಮುಖಂಡರೂ ಸಹ ನನ್ನ ಕ್ಷೇತ್ರವನ್ನು ಹಾಗೂ ನಮ್ಮಂಥವರನ್ನು ಬೆಳೆಸಲು ಯಾವುದೇ ಆಸಕ್ತಿ ತೋರದಿರುವುದು ಮತ್ತೊಂದೆಡೆ. ಆಟಕ್ಕುಂಟು, ಲೆಕ್ಕಕ್ಕಿಲ್ಲ. ಇದೇನು ವಿಪರ್ಯಾಸವೇ, ಕಟು ಸತ್ಯವೇ? 

ಈಗ ಸ್ಪಷ್ಟ ಹೇಳುವುದಿಷ್ಟೇ, ಕಾಲಾಯ ತಸ್ಮೈ ನಮಃ. ಹೊಸತಾಗಿ ಪಕ್ಷ ಸೇರಿ ಮಂತ್ರಿಯಾಗುವವರೆದುರಿಗೆ, ಪಕ್ಷಕ್ಕೆ ಅಡಿಪಾಯ ಹಾಕಿ, ಕಟ್ಟಿ, ನಿಷ್ಠಾವಂತರಾಗಿ ದುಡಿದು ಸಾಕಷ್ಟು ಬಾರಿ ಶಾಸಕರಾದರೂ ಲೆಕ್ಕಕ್ಕಿಲ್ಲ.  ಪಕ್ಷದ ಮೇಲಿಟ್ಟಿರುವ ಕ್ಷೇತ್ರದ ಜನತೆಯ ಅಮೂಲ್ಯ ಪ್ರೀತಿ-ಅಭಿಮಾನಕ್ಕೂ, ಪಕ್ಷದಲ್ಲಿ ಬೆಲೆಯಿಲ್ಲದಾಯಿತೆ...ಎಂದು ಟ್ವೀಟ್‌ನಲ್ಲಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.