ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನದ ಸ್ಪೂರ್ತಿಯೊಂದಿಗೆ ಸತ್ತೂರಿನ ಶಾಲೆ ಉಳಿಸಲು ವಿದ್ಯಾರ್ಥಿ ಪೋಷಕರ ಪ್ರತಿಭಟನೆ

ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನದ ಸ್ಪೂರ್ತಿಯೊಂದಿಗೆ  ಸತ್ತೂರಿನ ಶಾಲೆ ಉಳಿಸಲು ವಿದ್ಯಾರ್ಥಿ ಪೋಷಕರ ಪ್ರತಿಭಟನೆ Parents protest to save Sattur school in the spirit of Savitribai Phule's birth anniversary

ಧಾರವಾಡ   03: ಧಾರವಾಡದನವೋದಯದ ಮಹಾನ್ ವ್ಯಕ್ತಿತ್ವ ಸಾವಿತ್ರಿಬಾಯಿ ಅವರ 195 ನೇ ಜನ್ಮದಿನವನ್ನು  ಇಂದು ಧಾರವಾಡದ ವಿವಿಧ ಮೈದಾನ, ಶಾಲೆಗಳು, ಹಾಸ್ಟೆಲ್ ಹಾಗೂ ಬಡಾವಣೆಗಳಲ್ಲಿ ಪ್ರತಿರೋಧ ದಿನವನ್ನಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸಿಂಧೂ ಕೌದಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ,  ಸಾವಿತ್ರಿಬಾಯಿ ಫುಲೆ ಅವರು ಕೇವಲ ಶಾಲೆಯನ್ನು ತೆರೆಯಲಿಲ್ಲ. ಬದಲಾಗಿ ಸಾವಿರಾರು ವರ್ಷಗಳ ಶೋಷಣೆ ವಿರುದ್ಧ ಕೇವಲ ಒಂದು ಪುಸ್ತಕ ಮತ್ತು ಎದೆಯ ತುಂಬಾ ಧೈರ್ಯವನ್ನು ಅಸ್ತ್ರವನ್ನಾಗಿ  ಮಾಡಿಕೊಂಡು ಯುದ್ಧವನ್ನೇ ಸಾರಿದರು.

ಅವರು ಪುಣೆಯ ಬೀಡೆವಾಡ ಶಾಲೆಗೆ ನಡೆದುಕೊಂಡು ಹೋಗುವಾಗ ಜನ ಅವರಿಗೆ ಕೆಸರು, ಸಗಣಿ ಮತ್ತು ಕಲ್ಲುಗಳನ್ನ ಎಸೆದಿದ್ದಾರೆ, ಆದರೆ ಅವರು ಯಾವುದೇ ಅವಮಾನಕ್ಕೆ ಹಿಂಜರಿಯದೆ  ಅಂದು ಹೆಣ್ಣುಮಕ್ಕಳು ಹಾಗೂ ಕೆಳ ವರ್ಗದ ಮಕ್ಕಳಿಗಾಗಿ ಶಾಲೆಗಳನ್ನು ತೆರೆದರು. ಜೊತೆಗೆ  ಅಂದಿನ ಸಮಾಜದಲ್ಲಿದ್ದ ಆಳವಾಗಿ ಬೀರೂರಿದ್ದ  ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು ಹಾಗೂ  ಅನ್ಯ ಜಾತಿಯ ವಿವಾಹವನ್ನು ಬೆಂಬಲಿಸಿ ಸ್ವತಃ ತನ್ನ ಮಗನಿಗೆ ಅನ್ಯ ಜಾತಿ ವಿವಾಹವನ್ನು ಮಾಡಿಸುವುದರ ಮೂಲಕ ಸಮಾಜದಲ್ಲಿ ಜಾತಿ ವ್ಯವಸ್ಥೆ, ಮೂಢನಂಬಿಕೆ, ಹಳೆ ಕಂದಾಚಾರಗಳನ್ನು ತೊಲಗಿಸಲು ಅದರ ವಿರುದ್ಧ ಸಿಡಿದೆದ್ದರು. 

ಆದರೆ ರಾಜ್ಯದಲ್ಲಿ ಇತ್ತೀಚಿಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ಹೆಚ್ಚುತ್ತಿರುವುದು ಬಹಳ ವಿಷಾದದ ಸಂಗತಿ. ಸರ್ಕಾರಗಳು ಇಂದು ಮಹಿಳೆಯರ ಭದ್ರತೆಯ ಕುರಿತು ಮೌಖಿಕವಾಗಿ ಮಾತನಾಡುತ್ತಿವೆಯೇ ಹೊರತು, ಅದನ್ನು ತಡೆಗಟ್ಟುವಲ್ಲಿ ಕಾರ್ಯಕ್ಷಮತೆಯನ್ನು ತೋರುತ್ತಿಲ್ಲ. ಇದಲ್ಲದೇ, ಇತ್ತೀಚಿಗೆ ಮರ್ಯಾದೆ ಹೀನ ಹತ್ಯೆಗಳು ಸಹ ಹೆಚ್ಚುತ್ತಿವೆ. ಜಾತಿ-ಧರ್ಮಗಳ ಹೆಸರಿನಲ್ಲಿ ಜನರ ಮಧ್ಯೆ ಬೇಧ ಭಾವವನ್ನು ಮೂಡಿಸಿ, ಅವರನ್ನು ಕತ್ತಲಿನಲ್ಲಿಟ್ಟು, ತಮ್ಮ ರಾಜಕೀಯ ಉದ್ದೇಶಗಳಿಗೆ ಜನಗಳನ್ನು ಬಲಿಕೊಡುತ್ತಿರುವ ಪ್ರಸಂಗಗಳು ಹೆಚ್ಚುತ್ತಿವೆ, ಇಂತಹ ಸಂದರ್ಭದಲ್ಲಿ ಶಿಕ್ಷಣವು ಮಹತ್ತರ ಪಾತ್ರವನ್ನು ವಹಿಸಬೇಕಿದೆ.

ವಿಪರ್ಯಾಸವೆಂದರೆ, ರಾಜ್ಯ ಸರ್ಕಾರವೇ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ 40,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿವೆ. ಈ ಮೂಲಕ ಬಡ ಕೃಷಿ-ಕಾರ್ಮಿಕರ, ದೀನ-ದಲಿತರನ್ನು ಶಿಕ್ಷಣದಿಂದ ಶಾಲೆ ಹಂತದಲ್ಲಿಯೇ ಹೊರಗುಳಿಯುವಂತೆ ನೀತಿಯನ್ನು ರೂಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಬಡ ಜನರು, ಮಹಿಳೆಯರ ಪರವಾಗಿ ಶ್ರಮಿಸಿದ ನವೋದಯದ ಮಹಾನ್ ವ್ಯಕ್ತಿತ್ವ ಸಾವಿತ್ರಿಬಾಯಿ ಫುಲೆ ರವರ ಜನ್ಮ ದಿನದ ಹಿನ್ನಲೆಯಲ್ಲಿ ಅವರ ಆಶಯಗಳನ್ನು ಸಾಕಾರಗೊಳಿಸುವಂತೆ ಚಳುವಳಿಯನ್ನು ಕಟ್ಟಿ ಬೆಳೆಸಲು ಕರೆ ನೀಡಿದರು. ಈ ಸಂದರ್ಭದಲ್ಲಿ  ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ, ಕಾರ್ಯಕರ್ತರಾದ ಶಾಂತು, ರವಿ, ಸಿದ್ದು, ಸಾಧಿಕ್ ಹೆಬ್ಬಳ್ಳಿ, ಹುಸೇನ್ ಸಾಬ್, ಸಾಧಿಕ್ ಕಲಾದಗಿ ಹಾಗೂ ಜನರು ಇದ್ದರು.