ವಿಜಯಪುರ 18: ಪಾಲಕರು ತಮ್ಮ ಕನಸುಗಳಿಗೆ ಅನುಗುಣವಾಗಿ ಮಕ್ಕಳನ್ನು ಓದಿಸುವುದಕ್ಕಿಂತ ಮಕ್ಕಳ ಕನಸುಗಳಿಗೆ ಪ್ರೋತ್ಸಾಹ ನೀಡಿ ಪೋಷಿಸಬೇಕು. ಆಗ ಮಾತ್ರ ಉತ್ತಮವಾದ ಫಲಿತಾಂಶ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಒತ್ತಾಯದ ಶಿಕ್ಷಣ ಯಾವತ್ತಿಗೂ ನಿರರ್ಥಕವಾಗುತ್ತದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ನಗರದ ಆಕ್ಸಫರ್ಡ ಐಐಟಿ ಒಲಂಪಿಯಾಡ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ಇಂದಿನ ದಿನಗಳಲ್ಲಿ ಪಾಲಕರು ಮಕ್ಕಳು ಹೀಗೆ ಆಗಬೇಕು, ಹಾಗೆ ಆಗಬೇಕು ಎನ್ನುವ ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರುವ ಕಾರ್ಯ ಮಾಡುತ್ತಿರುವುದರಿಂದ ಮಕ್ಕಳ ಭವಿಷ್ಯದ ಮೇಲೆ ಗೊಂದಲದ ಕಾರ್ಮೋಡ ಮುಸುಕುತ್ತಿದೆ. ತನ್ನಲ್ಲಿ ಅಡಗಿರುವ ಪ್ರತಿಭೆಯನ್ನು ಬದಿಗೊತ್ತಿ ಹೆತ್ತವರ ಆಸೆಯನ್ನು ಈಡೇರಿಸುವುದಕ್ಕೆ ಹೆಣಗುವ ಮಕ್ಕಳು ಯಶಸ್ಸಿನ ಹಾದಿಯಲ್ಲಿ ಸಾಗುವುದಕ್ಕಿಂತ ಅದರ ವಿರುದ್ಧ ದಿಕ್ಕಿನೆಡೆಗೆ ಮುಖ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಪಾಲಕರು ಮಕ್ಕಳನ್ನು ಇಂಜಿನಿಯರ್ ಆಗು, ಡಾಕ್ಟರ್ ಆಗು ಎಂದು ಒತ್ತಡವನ್ನು ಹೇರದೇ ನೀನು ಏನಾಗಬೇಕೆಂದು ಬಯಸುತ್ತಿಯಾ ಹೇಳು ಎಂದು ಕೇಳಿ ಅವರಲ್ಲಿನ ಪ್ರತಿಭೆ ಹಾಗೂ ಅವರ ಕನಸುಗಳಿಗೆ ಪೂರಕವಾದ ಶಿಕ್ಷಣವನ್ನು ನೀಡಿದಲ್ಲಿ ಯಶಸ್ಸು ಎನ್ನುವುದು ಅವರನ್ನು ಹಿಂಬಾಲಿಸಿಕೊಂಡು ಬರುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಪಾಲಕರು ಸಹ ಕಾರ್ಯೋನ್ಮುಖರಾಗಬೇಕು ಎಂದು ಹೇಳುವುದರ ಜೊತೆಗೆ ಜಿಲ್ಲೆಯಲ್ಲಿ ಅತ್ಯುತ್ತಮ ಶಿಕ್ಷಣವನ್ನು ನೀಡಿ ಪ್ರತಿವರ್ಷ ನೂರು ಪ್ರತಿಷತ ಫಲಿತಾಂಶ ನೀಡುತ್ತಿರುವ ಆಕ್ಸಫರ್ಡ ಶಾಲೆಯು ಜ್ಞಾನವಂತ ಮಕ್ಕಳನ್ನು ನಾಡಿಗೆ ಕೊಡುಗೆ ನೀಡುತ್ತಿರುವುದುಕ್ಕೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಶಿ ಆನಂದ; ಪ್ರತಿಯೊಂದು ಮಗುವಿನ ಯಶಸ್ಸಿನ ಹಿಂದೆ ಅವರ ಹೆತ್ತವರು ಹಾಗೂ ಕಲಿಸಿದ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿರುತ್ತದೆ. ಅವರೀರ್ವರ ಕಠೀಣ ಪರಿಶ್ರಮ ಹಾಗೂ ಬೆಂಬಲದ ಒಟ್ಟು ಮೌಲ್ಯವೇ ಮಕ್ಕಳ ಯಶಸ್ಸಾಗಿರುತ್ತದೆ. ಹೀಗಾಗಿ ಬದುಕಿನಲ್ಲಿ ಸಾಧನೆ ಮಾಡಲು ಸಿದ್ಧರಾಗುತ್ತಿರುವ ಮಕ್ಕಳು ಸದಾ ಇವರೀರ್ವರ ಮೇಲೆ ಗೌರವ ಇಟ್ಟುಕೊಂಡಿರಬೇಕು ಎಂದು ಹೇಳುವುದರೊಂದಿಗೆ ಪಾಲಕರು ಸಹ ಮಕ್ಕಳು ಮುಂದೇನಾಗಬೇಕು ಎನ್ನುವುದನ್ನು ಇಂದೇ ನಿರ್ಧಾರ ಮಾಡುವ ಮಟ್ಟದಲ್ಲಿ ಅವರಿಗೆ ತಿಳುವಳಿಕೆ ಹೇಳಿ ಭವಿಷ್ಯದ ಸವಾಲುಗಳನ್ನು ಎದುರಿಸುವುದಕ್ಕೆ ಸನ್ನದುಗೊಳಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೂರ್ವ ಅತಿಥಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ; ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಮಾತಿನಂತೆ ಬೆಳವಣಿಗೆ ಹೊಂದುತ್ತಿರುವ ಮಕ್ಕಳಲ್ಲಿ ಕನಸುಗಳನ್ನು ಬಿತ್ತುವ ಕೆಲಸವನ್ನು ಶಾಲೆಗಳು ಹಾಗೂ ಪೋಷಕರು ಮಾಡಬೇಕಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಎಂದರೆ ಭವಿಷ್ಯದ ಬುನಾದಿಯಾಗಿದ್ದು ಈ ತಳಪಾಯವನ್ನು ಹೇಗೆ ಗಟ್ಟಿಗೊಳಿಸಬೇಕು ಎನ್ನುವುದನ್ನು ತಿಳಿಸಿಕೊಡಬೇಕಿದೆ. ಮಹಾಪುರುಷರ ಕಥೆಗಳನ್ನು ಹೇಳುವ ಮೂಲಕ ಆದರ್ಶಗಳನ್ನು ಬಿತ್ತುವುದರೊಂದಿಗೆ ಸಾಧನೆ ಮಾಡಿದ ಜನಗಳ ಕಠಿಣ ಪರಿಶ್ರಮ ಹಾಗೂ ಸಮರಾ್ಣ ಭಾವ ಹೇಗಿರುತ್ತದೆ ಎನ್ನುವುದರ ಅರಿವು ಮೂಡಿಬೇಕೆಂದು ಹೇಳುತ್ತ ಪಾಂಡವರು, ಕೌರವರು ಹಾಗೂ ದ್ರೋಣಾಚಾರ್ಯರ ಕುರಿತಾದ ಕಥೆಯನ್ನು ಹೇಳಿ ಮಕ್ಕಳಲ್ಲಿ ಗುರಿಯ ಕುರಿತು ಅರಿವು ಮೂಡಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಹಾಗೂ ಆಕ್ಸಫರ್ಡ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದರು. ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವ ಸದಸ್ಯ ರಾಜಶೇಖರ ಕೌಲಗಿ, ಆಕ್ಸಫರ್ಡ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಪ್ರದೀಪ ಲಿಂಗದಳ್ಳಿ, ಆಡಳಿತಾಧಿಕಾರಿ ಜಿ.ಎಂ.ಕಟ್ಟಿ, ಪ್ರಾಚಾರ್ಯ ಗುರುಪ್ರಸಾದ ಯರಗಟ್ಟಿಮಠ, ಮುಖ್ಯೋಪಾಧ್ಯಾಯರಾದ ಅನಸೂಯಾ ಅಮರಣ್ಣವರ ಸೇರಿದಂತೆ ಶಾಲೆಯ ಸರ್ವ ಆಡಳಿತ ಮಂಡಳಿ ಸದಸ್ಯರು ಹಾಗೂ ಬೋಧಕ ಬೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.